ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿಗರನ್ನು ಬೆಚ್ಚಿಬೀಳಿಸಿದ ಆರೋಗ್ಯ ವರದಿ: ಒಂದೇ ದಿನ 24 ಕೋವಿಡ್ 19 ದೃಢ

Last Updated 11 ಜುಲೈ 2020, 11:35 IST
ಅಕ್ಷರ ಗಾತ್ರ

ಶಿರಸಿ: ಶನಿವಾರ ಪ್ರಕಟಗೊಂಡ ಆರೋಗ್ಯ ವರದಿಯಲ್ಲಿ ತಾಲ್ಲೂಕಿನ 24 ಜನರಿಗೆ ಕೋವಿಡ್ 16 ದೃಢಪಟ್ಟಿರುವುದು ಜನರನ್ನು ಬೆಚ್ಚಿಬೀಳಿಸಿದೆ. ಈ ಸುದ್ದಿ ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ, ಜನರು ಆತಂಕದಲ್ಲಿ ಮನೆ ಸೇರಿಕೊಂಡರು.

ಮಾರಿಕಾಂಬಾ ದೇವಾಲಯದ ಪಕ್ಕದಲ್ಲಿ ಮನೆಯಿರುವ ಲಾರಿ ಚಾಲಕರೊಬ್ಬರಿಗೆ ಕೊರೊನಾ ಸೋಂಕು ಖಚಿತವಾದ ಮೇಲೆ, ದೇವಾಲಯದ ಬಾಗಿಲನ್ನು ಮುಚ್ಚಿ ಎಲ್ಲ ಸಿಬ್ಬಂದಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪರೀಕ್ಷಾ ವರದಿಯಲ್ಲಿ 13 ಜನರಿಗೆ ಹಾಗೂ ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಇಬ್ಬರಲ್ಲಿ ಕೋವಿಡ್ 19 ಇರುವುದು ದೃಢಪಟ್ಟಿದೆ.

ಇಲ್ಲಿನ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಲಾರಿ ಚಾಲಕನ ಪತ್ನಿಗೆ ಶುಕ್ರವಾರ ಸೋಂಕಿರುವುದು ದೃಢಪಟ್ಟಿತ್ತು. ಈ ಮಹಿಳೆ ಸಂಪರ್ಕಕ್ಕೆ ಬಂದಿರುವ ಬ್ಯಾಂಕಿನ ಮೂವರು ಸಿಬ್ಬಂದಿಗ ಹಾಗೂ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಇಬ್ಬರಿಗೆ ಸೋಂಕು ತಗುಲಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಹೋಗಿ ಬಂದಿದ್ದ ವಿಶಾಲನಗರದ ಚಿನ್ನದ ಆಭರಣ ತಯಾರಕರೊಬ್ಬರಿಗೆ ಕೋವಿಡ್ 19 ಖಚಿತವಾಗಿತ್ತು. ಅವರ ಸಂಪರ್ಕಕ್ಕೆ ಬಂದಿರುವ ಇಬ್ಬರಿಗೆ ಸೋಂಕು ಹರಡಿದೆ.

ಹೊರ ರಾಜ್ಯದಿಂದ ಬಂದು ತಾಲ್ಲೂಕಿನ ಕಲ್ಲಿ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿದ್ದ ಇಬ್ಬರಿಗೂ ಸೋಂಕು ಪತ್ತೆಯಾಗಿದೆ. ‘ನಗರದ ಹೊರವಲಯದಲ್ಲಿರುವ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಈ 24 ಜನರು ಸೇರಿದಂತೆ ಒಟ್ಟು 30 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಬ್‌ ಜೈಲಿನಲ್ಲಿದ್ದ ಆರೋಪಿಯೊಬ್ಬನ ಸಂಪರ್ಕಕ್ಕೆ ಬಂದು ಸೋಂಕು ತಗುಲಿದ್ದ ಇತರ ಮೂವರು ಆರೋಪಿಗಳಿಗೆ ಇದೇ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಮೂವರು ಹಾಗೂ ಸರ್ಕಾರಿ ಆಸ್ಪತ್ರೆಯ ಮಹಿಳೆಯೊಬ್ಬರು ಗುಣಮುಖರಾಗಿದ್ದು, ಶನಿವಾರ ನಾಲ್ವರನ್ನು ಬಿಡುಗಡೆಗೊಳಿಸಲಾಗಿದೆ’ ಎಂದು ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.

ಮಾರಿಕಾಂಬಾ ದೇವಾಲಯದ ಎಲ್ಲ ಸಿಬ್ಬಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಸೋಂಕು ತಗುಲಿರುವ ಸಿಬ್ಬಂದಿ ಕೂಡ ಕ್ವಾರಂಟೈನ್‌ನಲ್ಲಿದ್ದ ಕಾರಣ, ಇತರರಿಗೆ ಹರಡುವ ಸಾಧ್ಯತೆಯಿಲ್ಲ. ಮಾರಿಕಾಂಬಾ ದೇವಾಲಯದ ಅಧ್ಯಕ್ಷರು, ಧರ್ಮದರ್ಶಿಗಳು ಸಹ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

ಸಂಜೆಗೆ ಪೇಟೆ ಬಂದ್:‘ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ನಗರದ ವರ್ತಕರು ಪ್ರತಿದಿನ ಸಂಜೆ 5 ಗಂಟೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಸ್ವಯಂ ಪ್ರೇರಿತ ಲಾಕ್‌ಡೌನ್ ಪ್ರಾರಂಭಿಸಿದ್ದಾರೆ. ಅಂಗಡಿಗಳು ಮುಚ್ಚಿದರೂ ಜನಸಂಚಾರ ಅಷ್ಟಾಗಿ ಕಡಿಮೆಯಾಗುತ್ತಿಲ್ಲ. ಜನರು ಅನಗತ್ಯವಾಗಿ ಪೇಟೆಗೆ ಬರುವುದನ್ನು ಕಡಿಮೆ ಮಾಡಬೇಕು. ಸಾಧ್ಯವಾದಷ್ಟು ಮನೆಯಲ್ಲೇ ಇರಬೇಕು’ ಎಂದು ಹಿರಿಯ ನಾಗರಿಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT