ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಮೀನಿನ ಆಸೆಗೆ ಲಾಕ್‌ಡೌನ್ ಮರೆತರು!

ವಿನಾಕಾರಣ ತಿರುಗುವವರ ಮೇಲೆ ಕ್ರಮ: ವಾಹನ ತಪಾಸಣೆ ನಡೆಸಿದ ಪೊಲೀಸರು
Last Updated 29 ಮಾರ್ಚ್ 2020, 12:16 IST
ಅಕ್ಷರ ಗಾತ್ರ

ಶಿರಸಿ: ಲಾಕ್‌ಡೌನ್ ಆದೇಶದ ನಡುವೆ ಸಹ ಭಾನುವಾರ ಬೆಳಿಗ್ಗೆ ನಗರದ ನಿಲೇಕಣಿ ಮೀನು ಮಾರುಕಟ್ಟೆಯಲ್ಲಿ ಜನದಟ್ಟಣಿಯಾಗಿದ್ದನ್ನು ಕಂಡು ಸುತ್ತಲಿನ ನಿವಾಸಿಗಳು ಕಂಗಾಲಾದರು. ವಿಷಯ ತಿಳಿದ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಹೋಗಿ ಜನರನ್ನು ಚದುರಿಸಿದರು.

ಮನೆ–ಮನೆಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ವ್ಯವಸ್ಥೆಯಿದೆ. ವಿನಾಕಾರಣ ರಸ್ತೆಗಿಳಿದರೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಪ್ರತಿ ವೃತ್ತದಲ್ಲಿ ಪೊಲೀಸರು ನಿಂತು, ರಸ್ತೆಯಲ್ಲಿ ಹೋಗುವ ಕಾರು, ದ್ವಿಚಕ್ರ ವಾಹನ ಸವಾರರನ್ನು ತಡೆದು ವಿಚಾರಿಸಿದರು. ‘ಔಷಧ, ಆಸ್ಪತ್ರೆಗಾಗಿ ಹಳ್ಳಿಯಿಂದ ಬಂದವರೇ ಹಲವರು ಇದ್ದರು. ಹೀಗಾಗಿ, ಅಂತಹವರ ಮೇಲೆ ಪ್ರಕರಣ ದಾಖಲಿಸಲಿಲ್ಲ’ ಎಂದು ಸಿಪಿಐ ಪ್ರದೀಪ ಪ್ರತಿಕ್ರಿಯಿಸಿದರು.

ಮನೆ ಬಾಗಿಲಿಗೆ ಮೀನು ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದರೂ, ಬೆಳಿಗ್ಗೆ 7 ಗಂಟೆಗಾಗಲೇ ಮೀನು ಮಾರುಕಟ್ಟೆ ಬಳಿ ನೂರಾರು ಜನರು ಸೇರಿದ್ದರು. ಪೊಲೀಸರು ಬರುತ್ತಿದ್ದಂತೆ ಎಲ್ಲರೂ ದಿಕ್ಕಾಪಾಲಾಗಿ ಓಡಿದರು. ಭಾನುವಾರ ಕೂಡ ಇಡೀ ನಗರ ಸ್ತಬ್ಧವಾಗಿತ್ತು. ದಿನಸಿ ಸೇರಿದಂತೆ ಯಾವುದೇ ಅಂಗಡಿಗಳೂ ಬಾಗಿಲು ತೆರೆಯಲಿಲ್ಲ.

ವಾರ್ಡ್‌ಗಳಿಗೆ ಹಣ್ಣು–ತರಕಾರಿಗಳು ವಾಹನದಲ್ಲಿ ಬರುತ್ತಿವೆ. ಖರೀದಿಗೆ ಜನರು ಮುಗಿಬೀಳುವುದರಿಂದ ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸವಾಲಾಗಿದೆ. ಕೆಲವು ಹೋಟೆಲ್‌ಗಳು ಬಾಗಿಲು ತೆರೆದಿವೆ. ಪಾರ್ಸಲ್ ವ್ಯವಸ್ಥೆ ಕಲ್ಪಿಸಲಾಗಿದೆ.

ತುರ್ತು ಸೇವೆಯ ಹೆಸರಲ್ಲಿ ಇಂಧನ ಪಡೆಯಲು ಪಾಸ್ ಪಡೆದವರು ಇದನ್ನು ದುರ್ಬಳಕೆ ಮಾಡಿಕೊಂಡು ಸಿಕ್ಕಿಬಿದ್ದ ಘಟನೆ ನಡೆಯಿತು. ಶನಿವಾರಕ್ಕೆ ಸೀಮಿತಗೊಳಿಸಿದ್ದ ಪಾಸ್ ಅನ್ನು ಭಾನುವಾರವೂ ತಂದು ಪೆಟ್ರೋಲ್ ಪಡೆದ ವ್ಯಕ್ತಿಯ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT