ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಗೆದ್ದವರ ಕಥೆಗಳು | ಸ್ವಯಂಪ್ರಜ್ಞೆ ಇಂದಿನ ತುರ್ತು ಅಗತ್ಯ

Last Updated 29 ಜುಲೈ 2020, 3:26 IST
ಅಕ್ಷರ ಗಾತ್ರ

ಶಿರಸಿ: ‘ಚೀನಾದಲ್ಲಿ ಕೊರೊನಾ ಸೋಂಕು ಹರಡಿರುವುದನ್ನು ಫೆಬ್ರುವರಿಯಿಂದಲೇ ಕೇಳುತ್ತಿದ್ದೆವು. ಇದು ಭಾರತಕ್ಕೂ ಬರಬಹುದೆಂದು ಅನ್ನಿಸಿತ್ತು. ಅಲ್ಲದೇ, ಚೀನಾದಲ್ಲಿರುವ ನನ್ನ ಸ್ನೇಹಿತೆಯರ ಜೊತೆ ಅನೇಕ ಬಾರಿ ಈ ವಿಷಯ ಚರ್ಚಿಸಿದ್ದೆ. ಹೀಗಾಗಿ, ನನ್ನ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಾಗ ಕೊಂಚವೂ ವಿಚಲಿತಳಾಗಲಿಲ್ಲ. ಒಂದು ವಾರದಲ್ಲಿ ಗುಣಮುಖಳಾಗಿ ಮನೆಗೆ ಬಂದೆ’ ಎನ್ನುತ್ತ ಮಾತಿಗಾರಂಭಿಸಿದರು ವಿದ್ಯಾರ್ಥಿನಿ ಮೇಘನಾ ನಾಯ್ಕ.

ಇಲ್ಲಿನ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆದ ಹಾಗೂ ಆ ಸಂದರ್ಭದಲ್ಲಿ ಕೇರ್ ಸೆಂಟರ್‌ನಲ್ಲಿ ನೋಡಿದ ಅನೇಕ ಅನುಭವಗಳನ್ನು ಅವರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

‘ನನಗೆ ಕೋವಿಡ್ 19ನ ಯಾವುದೇ ಲಕ್ಷಣಗಳಿರಲಿಲ್ಲ. ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯಬಹುದಿತ್ತು. ಆದರೆ, ಆಡಳಿತದ ನಿಯಮದಂತೆ ಕೋವಿಡ್ ಕೇರ್ ಸೆಂಟರ್‌ಗೆ ಹೋಗಿ ಚಿಕಿತ್ಸೆ ಪಡೆದೆ. ಆಗಲೇ ಅಲ್ಲಿ ದಾಖಲಾಗಿದ್ದವರೆಲ್ಲರೂ ಆರಾಮವಾಗಿದ್ದರು. ಯಾರೊಬ್ಬರೂ ರೋಗಿಯಂತೆ ಕಾಣುತ್ತಿರಲಿಲ್ಲ. ಕೇರ್ ಸೆಂಟರ್‌ನಲ್ಲಿ ಸ್ವಚ್ಛತೆ, ಆಹಾರ, ಔಷಧ ಎಲ್ಲಕ್ಕೂ ಹೆಚ್ಚು ಒತ್ತು ನೀಡುತ್ತಾರೆ. ಎಲ್ಲರನ್ನೂ ಕಾಳಜಿಯಿಂದ ನೋಡಿಕೊಳ್ಳುತ್ತಾರೆ’

‘ನಾನು ಗಮನಿಸಿದಂತೆ, ಕೋವಿಡ್ ಪೀಡಿತರು, ಕೇರ್ ಸೆಂಟರ್‌ಗೆ ಬರುವಾಗ ಕೊಂಚ ಗಲಿಬಿಲಿಗೊಂಡವರಂತೆ, ಭಯ–ಭೀತರಾಗಿ ಬರುತ್ತಾರೆ. ಮರುದಿನದಿಂದ ಅವರು ರೋಗದ ಬಗ್ಗೆ ನಿರಾಳರಾಗುತ್ತಾರೆ. ಅಲ್ಲಿರುವ ಎಲ್ಲರೂ ಒಂದೇ ಆತಂಕ, ಅದೇನೆಂದರೆ, ನಾವು ಗುಣಮುಖರಾಗಿ ಮನೆಗೆ ಹೋದ ಮೇಲೆ ಅಕ್ಕಪಕ್ಕದವರು ನಮ್ಮನ್ನು ಕೀಳಾಗಿ ನೋಡಬಹುದು, ಮನೆಯಲ್ಲಿರುವ ನಮ್ಮ ಕುಟುಂಬದವರು ಎಷ್ಟು ನೊಂದುಕೊಂಡಿರಬಹುದು ಅಂತ’.

‘ಮಾಧ್ಯಮದವರು ಸಮಸ್ಯೆಯನ್ನು ಬಿಂಬಿಸುವ ಜತೆಗೆ ಪರಿಹಾರವನ್ನೂ ಜನರಿಗೆ ತಿಳಿಸಬೇಕು. ಆಗ ಜನರು ಕೋವಿಡ್ ಬಗ್ಗೆ ಇರುವ ಭಯದಿಂದ ಮುಕ್ತರಾಗುತ್ತಾರೆ. ಕೋವಿಡ್ ಪೀಡಿತರ ಕುಟುಂಬಕ್ಕೆ ಅಗತ್ಯ ಸಾಮಗ್ರಿಗಳನ್ನು ಒದಗಿಸುವ ಕನಿಷ್ಠ ಸಹಾಯ ಮಾಡಬೇಕು. ಗುಣಮುಖರಾದವರ ಪರೀಕ್ಷಾ ವರದಿ ಶೀಘ್ರ ಬಂದರೆ, ಬೇಗ ಮನೆಗೆ ತೆರಳಲು ಸಾಧ್ಯವಾಗುತ್ತದೆ. ನನ್ನದೇ ಪರೀಕ್ಷಾ ವರದಿ ತಡವಾದ ಕಾರಣ, ಮೂರು ದಿನ ವಿಳಂಬವಾಗಿ ಮನೆಗೆ ಬರಬೇಕಾಯಿತು’.

‘ಮನೆಯಲ್ಲಿ ಉಳಿದೆಲ್ಲರ ವರದಿ ನೆಗೆಟಿವ್ ಬಂದಿತ್ತು. ನನ್ನದು ಮಾತ್ರ ಪಾಸಿಟಿವ್ ಬಂದಾಗ, ನನ್ನಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರಬಹುದು ಎಂದುಕೊಂಡಿದ್ದೇನೆ. ಹೀಗಾಗಿ, ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳುವ, ಪರಸ್ಪರ ಅಂತರ ಕಾಪಾಡಿಕೊಳ್ಳುವ ಬಗ್ಗೆ ಜನರು ಸ್ವಯಂಪ್ರಜ್ಞೆ ಬೆಳೆಸಿಕೊಳ್ಳಬೇಕೇ ವಿನಾ ಕೋವಿಡ್ ಬಂದಿರುವ ಕುಟುಂಬಗಳ ದೂಷಣೆ ಮಾಡುವುದಲ್ಲ’.

– ನಿರೂಪಣೆ: ಸಂಧ್ಯಾ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT