ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಪ್ರಯೋಗಾಲಯ ಶೀಘ್ರ ಸ್ಥಾಪನೆಗೆ ಶಾಸಕ ದೇಶಪಾಂಡೆ ಒತ್ತಾಯ

ಜಿಲ್ಲಾ ಉಸ್ತುವಾರಿ ಸಚಿವೆಗೆ ಪತ್ರ
Last Updated 29 ಮಾರ್ಚ್ 2020, 11:24 IST
ಅಕ್ಷರ ಗಾತ್ರ

ಶಿರಸಿ: ಕಾರವಾರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸ್ಥಾಪನೆ ಮಾಡಲು ಯೋಚಿಸಿರುವ ಪ್ರಯೋಗಾಲಯವನ್ನು ಶೀಘ್ರ ಪ್ರಾರಂಭಿಸಬೇಕು ಎಂದು ಶಾಸಕ ಆರ್.ವಿ.ದೇಶಪಾಂಡೆ ಅವರು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಸಚಿವರಿಗೆ ಪತ್ರ ಬರೆದಿರುವ ಅವರು, ‘ಕೋವಿಡ್–19 ಕಾಯಿಲೆ ನಿಯಂತ್ರಣಕ್ಕೆ ಸಂಬಂಧಿಸಿ, ಜಿಲ್ಲಾಡಳಿತ ಹಾಗೂ ಎಲ್ಲ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಇದರ ಜತೆಗೆ, ಸರ್ಕಾರ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ತಮಗೆ ತಿಳಿಸುತ್ತಿದ್ದೇನೆ. ಜಿಲ್ಲೆಯಿಂದ ಕೂಲಿ ಕಾರ್ಮಿಕರು ಬೇರೆ ಬೇರೆ ನಗರಗಳಿಗೆ ವಲಸೆ ಹೋಗಿದ್ದಾರೆ. ಅವರನ್ನು ಪುನಃ ಜಿಲ್ಲೆಗೆ ಕರೆತರಬೇಕು ಅಥವಾ ಆಯಾ ನಗರಕ್ಕೆ ಸಂಬಂಧಿಸಿದ ಜಿಲ್ಲಾಡಳಿತ ಜೊತೆ ಚರ್ಚಿಸಿ ಅವರಿಗೆ ವಸತಿ ಹಾಗೂ ಆಹಾರ ವ್ಯವಸ್ಥೆ ಮಾಡಬೇಕು’ ಎಂದಿದ್ದಾರೆ.

ಜಿಲ್ಲೆಯ ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಹ್ಯಾಂಡ್ ಗ್ಲೌಸ್, ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳ ಕೊರತೆ ಕಂಡು ಬಂದಿದೆ. ಮುಂದಿನ 24 ಗಂಟೆಗಳಲ್ಲಿ ಸಕಾ೵ರಿ ಆಸ್ಪತ್ರೆಗಳಿಗೆ ಈ ಅಗತ್ಯ ಸಾಮಗ್ರಿಗಳನ್ನು ಪೂರೈಸಿ, ಮುಂದಿನ ದಿನಗಳಲ್ಲಿ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಖಾಸಗಿ ವೈದ್ಯರು ಹಲವು ಕಡೆ ತಮ್ಮ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಕೆಲವು ಕಡೆ ಸಮಸ್ಯೆ ಆಗುತ್ತಿದೆ ಎಂಬ ದೂರುಗಳು ಬರುತ್ತಿವೆ. ಅಂತಹ ಕಡೆ ಅಂತಹ ವೈದ್ಯರ ಜೊತೆ ಮಾತನಾಡಿ, ಅವರ ಸೇವೆಯನ್ನು ಬಳಸಿಕೊಂಡು ಚಿಕಿತ್ಸೆ ನೀಡಲು ಮನವೊಲಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಹಾಗೂ ಕೋವಿಡ್–19 ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಇತರ ಸರ್ಕಾರಿ ಸಿಬ್ಬಂದಿಗೆ ಪ್ರಧಾನಿಯವರು ಘೋಷಣೆ ಮಾಡಿರುವ ₹ 50 ಲಕ್ಷದ ವಿಮಾ ಸೌಲಭ್ಯವನ್ನು, ಖಾಸಗಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೂ ವಿಸ್ತರಿಸಬೇಕು ಎಂದು ತಿಳಿಸಿದ್ದಾರೆ.

ಕಾಮಗಾರಿ ಪೂರ್ತಿಯಾಗಿ ಹಸ್ತಾಂತರಿಸದೇ ಇರುವ ಯಾತ್ರಿ ನಿವಾಸ, ಹಾಸ್ಟೆಲ್ ಕಟ್ಟಡಗಳನ್ನು ಬಳಸಿಕೊಂಡು ಮಂಚ, ಬೆಡ್, ಔಷಧದಂತಹ ಮೂಲ ಸೌಕರ್ಯ ಒದಗಿಸಿ, ಆಸ್ಪತ್ರೆ ವಾರ್ಡ್‌ಗಳನ್ನಾಗಿ ಪರಿವರ್ತಿಸಿಡಬೇಕು. ಹೊರ ರಾಜ್ಯಗಳಿಗೆ ಕೂಲಿಗೆ ಹೋಗಿರುವವರು ಮರಳಲಾಗದೇ ಅತಂತ್ರ ಸ್ಥಿತಿಯಲ್ಲಿದ್ದಾರೆ. ಅವರಿಗೆ ನೆರವಾಗಬೇಕು. ವ್ಯವಸಾಯಕ್ಕೆ ಅನುಕೂಲವಾಗುವಂತೆ ಗೊಬ್ಬರ, ಕೀಟನಾಶಕವನ್ನು ನಿರ್ದಿಷ್ಟ ಸಮಯದಲ್ಲಿ ಒದಗಿಸಲು ಮುಂದಾಗಬೇಕು. ರೇಷನ್ ಅಂಗಡಿಯವರೇ ದಿನಸಿ, ಧಾನ್ಯಗಳನ್ನು ಬಿಪಿಎಲ್ ಕಾರ್ಡುದಾರರ ಮನೆಗೆ ತಲುಪಿಸಲು ವ್ಯವಸ್ಥೆ ಮಾಡಿದರೆ ಉತ್ತಮ. ಜನ, ಜಾನುವಾರಿಗೆ ನೀರಿನ ಕೊರತೆಯಾಗದಂತೆ, ನಗರ ನೈರ್ಮಲ್ಯಕ್ಕೆ ವಿಶೇಷ ಒತ್ತು ನೀಡಬೇಕು. ಭಟ್ಕಳದಲ್ಲಿ ದಿನಸಿ ಪೂರೈಕೆ ಹಾಗೂ ಹೋಂ ಕ್ವಾರಂಟೈನ್‌ನಲ್ಲಿರುವವರಿಗೆ ಆಹಾರ ಒದಗಿಸುವಲ್ಲಿ ಆ‌ಗುತ್ತಿರುವ ತೊಂದರೆಯ ಬಗ್ಗೆ ದೂರು ಬರುತ್ತಿದೆ. ಇದನ್ನು ಬಗೆಹರಿಸಬೇಕು ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT