ವಸತಿ ನಿಲಯ ಕಾಮಗಾರಿಯಲ್ಲಿ ಭ್ರಷ್ಟಾಚಾರ: ಬಿಜೆಪಿ ಆರೋಪ

7

ವಸತಿ ನಿಲಯ ಕಾಮಗಾರಿಯಲ್ಲಿ ಭ್ರಷ್ಟಾಚಾರ: ಬಿಜೆಪಿ ಆರೋಪ

Published:
Updated:

ಕಾರವಾರ: ‘ನಗರದ ದೇವರಾಜ ಅರಸು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ವಸತಿ ನಿಲಯವನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶೌಚಾಲಯ ಇಲ್ಲದಿದ್ದರೂ ಉದ್ಘಾಟಿಸಿದ್ದು ಹಾಸ್ಯಾಸ್ಪದ. ಇದರ ಕಾಮಗಾರಿಯಲ್ಲಿ ಭ್ರಷ್ಟಾಚಾರವಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ವಕ್ತಾರ ರಾಜೇಶ್ ನಾಯ್ಕ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಲ್ಲಿ ಶೌಚಾಲಯವಿಲ್ಲದೇ ಬಹಳ ತೊಂದರೆಯಾಗುತ್ತಿದೆ ಎಂದು ಅಲ್ಲಿದ್ದವರು ದೂರು ನೀಡಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕಿ ರೂ‍ಪಾಲಿ ನಾಯ್ಕ ಈಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲಿ ಸಮಸ್ಯೆಗಳಿದ್ದರೂ ಉದ್ಘಾಟನೆ ಮಾಡಿದ್ದಕ್ಕೆ ಅಂದಿನ ಶಾಸಕ ಸತೀಶ್ ಸೈಲ್, ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಟೀಕಿಸಿದ್ದರು. ಆದರೆ, ಶಾಸಕಿಯ ಮೇಲಿನ ಹೊಟ್ಟೆಕಿಚ್ಚಿನಿಂದಾಗಿ ಕಾಂಗ್ರೆಸ್‌ನವರು ಈಗ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ’ ಎಂದು ದೂರಿದರು.

‘ಅಂಕೋಲಾದ ಉಪ ನೋಂದಣಾಧಿಕಾರಿ ಕಚೇರಿಯನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗಿದೆ ಎನ್ನುವುದು ಸರಿಯಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಸೆ.12ರಂದೇ ಅದನ್ನು ಉದ್ಘಾಟಿಸಬೇಕಿತ್ತು. ಆದರೆ, ಜಿಲ್ಲಾಡಳಿತ ದಿನಾಂಕವನ್ನು ಮುಂದೂಡಿತು. ತಮಗೆ ಬರಲು ಆಗುವುದಿಲ್ಲ ಎಂದು ತಿಳಿಸಿದ್ದರಿಂದಲೇ ಶಾಸಕಿ ಕಚೇರಿಯನ್ನು ಉದ್ಘಾಟಿಸಿದ್ದರು. ಇದರಲ್ಲಿ ರಾಜಕೀಯವೆಲ್ಲಿದೆ? ಅಲ್ಲಿ ಪೀಠೋಪಕರಣಗಳಿಲ್ಲ ಎಂದಾದರೆ ಜಿಲ್ಲಾಡಳಿತ ಇಷ್ಟು ದಿನ ಏನು ಮಾಡುತ್ತಿತ್ತು’ ಎಂದು ಪ್ರಶ್ನಿಸಿದರು.

‘ಶಂಭುಶೆಟ್ಟಿ ನಂಬಿದರೆ ಚೊಂಬು!’: ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯ ಘಟಕದ ಸದಸ್ಯ ರಾಜೇಂದ್ರ ನಾಯ್ಕ ಅವರು ಕಾಂಗ್ರೆಸ್ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಂಭು ಶೆಟ್ಟಿ ವಿರುದ್ಧ ವಾಗ್ದಾಳಿ ಮಾಡಿದರು. 

‘ಯಾರನ್ನು ಹೇಗೆ ತುಳಿಯಬೇಕು ಎಂಬುದನ್ನು ಶಂಭು ಶೆಟ್ಟಿಯಿಂದ ಕಲಿಯಬೇಕು. ಅವರ ಗೆಳೆತನ ಮಾಡಿದವರಿಗೆ ಚೊಂಬೇ ಗತಿ. ಅವರು ಯಾರೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಳ್ಳುತ್ತಾರೋ ಅವರು ಎರಡನೇ ಬಾರಿಗೆ ಶಾಸಕರಾಗುವುದಿಲ್ಲ. ಅವರು ಕಾರವಾರಕ್ಕೇ ದೊಡ್ಡ ಶನಿಯಿದ್ದಂತೆ. ಅವರ ಮಾತುಗಳನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ’ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ನವರು ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಶಂಭು ಶೆಟ್ಟಿ, ರಾಜೇಂದ್ರ ನಾಯ್ಕ ಬಿಜೆಪಿಯಲ್ಲಿ ದೊಡ್ಡ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ವಿರುದ್ಧ ಟೀಕಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಪಕ್ಷದ ನಗರಘಟಕದ ಅಧ್ಯಕ್ಷ ಮನೋಜ್ ಭಟ್, ಮುಖಂಡರಾದ ರಾಜೇಶ್ ನಾಯ್ಕ ಸಿದ್ದರ, ನಾಗೇಶ್ ಕುಡಳಕರ, ಸಾಮಾಜಿಕ ಜಾಲತಾಣ ವಿಭಾಗದ ಕಿಶನ್ ಕಾಂಬ್ಳೆ ಇದ್ದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !