ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಾಕ್‌ಡೌನ್‌ನಿಂದ ಆರ್ಥಿಕ ತೊಂದರೆ: ಬಿಸಿಯೂಟ ಸಿಬ್ಬಂದಿಗೆ ಸಿಗದ ನೆರವು

ರಾಜ್ಯ ಸರ್ಕಾರದ ಪ್ಯಾಕೇಜ್‌ನ ಎರಡನೇ ಕಂತಿನಲ್ಲೂ ಉಲ್ಲೇಖವಿಲ್ಲ
Last Updated 4 ಜೂನ್ 2021, 19:30 IST
ಅಕ್ಷರ ಗಾತ್ರ

ಕಾರವಾರ: ಕೋವಿಡ್ ಲಾಕ್‌ಡೌನ್‌ನಿಂದ ಆರ್ಥಿಕ ತೊಂದರೆಗೆ ಒಳಗಾದ ಹಲವು ವಿಭಾಗಗಳಿಗೆ ರಾಜ್ಯ ಸರ್ಕಾರವು ಎರಡು ಹಂತಗಳಲ್ಲಿ ಪರಿಹಾರದ ಪ್ಯಾಕೇಜ್ ಪ್ರಕಟಿಸಿದೆ. ಆದರೆ, ಅತ್ಯಂತ ಬಡತನದಲ್ಲಿರುವ ಅಕ್ಷರ ದಾಸೋಹ ಸಿಬ್ಬಂದಿಯನ್ನು ಮರೆತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಬಿಸಿಯೂಟದ ಮುಖ್ಯ ಅಡುಗೆಯವರಿಗೆ ತಿಂಗಳಿಗೆ ಸಿಗುವ ₹ 2,700 ಹಾಗೂ ಸಹಾಯಕರಿಗೆ ಸಿಗುವ ₹ 2,600 ಗೌರವಧನದಿಂದ ಕುಟುಂಬದ ನಿರ್ವಹಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ಕೇವಲ 10 ತಿಂಗಳು ಗೌರವಧನ ನೀಡಲಾಗುತ್ತದೆ. ಒಂದು ವರ್ಷದಿಂದ ಕೋವಿಡ್ ಕಾರಣದಿಂದ ಶಾಲೆಗಳಲ್ಲಿ ಬಿಸಿಯೂಟ ನೀಡದಿದ್ದರೂ ಅವರ ಹಾಜರಾತಿ ಇತ್ತು.

‘ಕಾರ್ಯ ಮಾಡುವ ಬಹುಪಾಲು ಸಿಬ್ಬಂದಿಗೆ ಮನೆಯಲ್ಲಿ ಸಿರಿವಂತಿಕೆಯಿಲ್ಲ. ಬೇಸಿಗೆ ರಜೆಯ ಅವಧಿಯಲ್ಲಿ ಎರಡು ತಿಂಗಳು ಹಣಕಾಸು ನೆರವು ಇರುವುದಿಲ್ಲ. ಹಾಗಾಗಿ ಈ ಬಾರಿ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದಾಗ ನಮಗೂ ನೆರವು ಸಿಗುವ ನಿರೀಕ್ಷೆಯಲ್ಲಿದ್ದೆವು. ಆದರೆ, ನಿರಾಸೆಯಾಗಿದೆ’ ಎಂದು ಅಕ್ಷರ ದಾಸೋಹ ನೌಕರರ ಜಿಲ್ಲಾ ಸಂಘದ ಕಾರ್ಯದರ್ಶಿ ಗಂಗಾ ನಾಯ್ಕ ಬೇಸರ ವ್ಯಕ್ತಪಡಿಸಿದರು.

‘ನಮ್ಮನ್ನು ಶಿಕ್ಷಣ ಇಲಾಖೆಯವರಾಗಲೀ ಅಕ್ಷರ ದಾಸೋಹದ ಅಧಿಕಾರಿಗಳಾಗಲೀ ಸಂಪರ್ಕಿಸಲಿಲ್ಲ. ಯಾರೂ ಅಗತ್ಯ ವಸ್ತುಗಳ ಕಿಟ್ ಕೊಡಲಿಲ್ಲ. ಏಪ್ರಿಲ್‌ನಲ್ಲಿ ಕೆಲವು ಶಾಲೆಗಳಲ್ಲಿ ಶಿಕ್ಷಕರ ಒತ್ತಾಯಕ್ಕಾಗಿ 11 ದಿನ ಕೆಲಸ ಮಾಡಿದ್ದೇವೆ. ಏಪ್ರಿಲ್, ಮೇನಲ್ಲಿ ನಮಗೆ ಗೌರವಧನ ಕೊಡದಿದ್ದರೆ ನೀವು ಜವಾಬ್ದಾರಿ ತೆಗೆದುಕೊಳ್ಳುತ್ತೀರಾ ಎಂದು ಕೇಳಿದ್ದೆವು. ನಮ್ಮ ವೇತನ ಬರುತ್ತದೆ ಎಂದು ಭರವಸೆ ನೀಡಿದ್ದರು. ಆದರೆ, ಗೌರವಧನವೂ ಇಲ್ಲ. ಸರ್ಕಾರದ ಪರಿಹಾರದ ಪ್ಯಾಕೇಜ್‌ ಕೂಡ ಇಲ್ಲ’ ಎಂದು ಅಸಮಾಧಾನ ಹೊರ ಹಾಕಿದರು.

‘ಏಪ್ರಿಲ್ ಮೊದಲ ವಾರದಲ್ಲಿ ಬಿಸಿಯೂಟದ ಕೆಲಸ ಮಾಡುವ ಬದಲು ಶಾಲೆಗಳ ಆವರಣ ಸ್ವಚ್ಛಗೊಳಿಸಿದ್ದೇವೆ. ಕೆಲವು ಶಾಲೆಗಳಿಗೆ ಬೆಳಿಗ್ಗೆ 9.30ಕ್ಕೆ ಬಂದು ಮಧ್ಯಾಹ್ನ 12.30ಕ್ಕೆ ಶಿಕ್ಷಕರು ಹೊರಡುವ ತನಕವೂ ಕೆಲಸ ಮಾಡಿಸಿಕೊಂಡಿದ್ದಾರೆ. ಈ ರೀತಿ ಕೆಲಸ ಮಾಡಲು ನಮಗೆ ಅಧಿಕೃತ ಆದೇಶ ಇಲ್ಲ ಎಂದು ಹೇಳಿದರೆ, ಅಧಿಕಾರಿಗಳಿಂದ ಪತ್ರ ತನ್ನಿ ಎಂದು ಒತ್ತಡ ಹೇರಿದ್ದರು’ ಎಂದು ದೂರಿದರು.

‘ಮೊದಲನೇ ಪ‍್ಯಾಕೇಜ್‌ನಲ್ಲಿ ಮೀನುಗಾರರನ್ನು ಮರೆತ ರೀತಿಯಲ್ಲಿ ನಮ್ಮನ್ನೂ ಮರೆತಿರಬೇಕು ಎಂದುಕೊಂಡೆವು. ಆದರೆ, ಎರಡನೇ ಪ್ಯಾಕೇಜ್‌ನಲ್ಲೂ ಯಾವುದೇ ಉಲ್ಲೇಖ ಇಲ್ಲದಿರುವುದು ಬೇಸರ ತರಿಸಿದೆ. ಬಿಸಿಯೂಟದ ನೌಕಕರಿಗೂ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.

‘ಮನವಿ ಕೊಟ್ಟಿಲ್ಲ’:‘ಜಿಲ್ಲೆಯಲ್ಲಿ 4,300 ಮಂದಿ ಬಿಸಿಯೂಟದ ನೌಕರರಿದ್ದಾರೆ. ಅವರಿಗೆ 10 ತಿಂಗಳ ಗೌರವಧನವನ್ನು ನಿಯಮದಂತೆ ಪಾವತಿಸಲಾಗಿದೆ. ತಮಗೂ ಪರಿಹಾರದ ಪ್ಯಾಕೇಜ್ ನೀಡುವಂತೆ ಸಂಘದಿಂದ ಮನವಿ ಕೊಟ್ಟಿಲ್ಲ’ ಎಂದು ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿ ವಿನೋದ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT