ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆಗಳ ಮೇಲೆ ಕೋವಿಡ್ ಕರಿನೆರಳು

ಕೂರ್ಮಗಡ ಜಾತ್ರೆ ಜ.17ಕ್ಕೆ: ನಿರ್ಬಂಧಗಳ ನಡುವೆ ಸರಳ ಆಚರಣೆಗೆ ಸೂಚನೆ
Last Updated 10 ಜನವರಿ 2022, 16:35 IST
ಅಕ್ಷರ ಗಾತ್ರ

ಕಾರವಾರ: ಜನವರಿ, ಫೆಬ್ರುವರಿ ತಿಂಗಳಲ್ಲಿ ಜಿಲ್ಲೆಯಲ್ಲಿ ಜಾತ್ರೆಗಳ ಸಾಲು. ಲಕ್ಷಾಂತರ ಜನರನ್ನು ಜಿಲ್ಲೆಯತ್ತ ಆಕರ್ಷಿಸುವ ಸಂದರ್ಭ. ಆದರೆ, ಈ ಬಾರಿಯೂ ಕೋವಿಡ್ ಕಾರಣದಿಂದ ಈ ಸಡಗರಕ್ಕೆ ಕಡಿವಾಣ ಬೀಳುವುದು ಬಹುತೇಕ ಖಚಿತವಾಗಿದೆ.

ಈ ತಿಂಗಳಿನಲ್ಲೇ ಕಾರವಾರ ತಾಲ್ಲೂಕುವೊಂದರಲ್ಲೇ ಒಂಬತ್ತು ಜಾತ್ರೆಗಳಿವೆ. ಮುರುಡೇಶ್ವರದ ರಥೋತ್ಸವ ಕೂಡ ಇದೇ ತಿಂಗಳಿನಲ್ಲಿದೆ. ಎಲ್ಲವೂ ಕೂಡ ಈಗ ಸರ್ಕಾರ ಸೂಚಿಸಿರುವ ಕೋವಿಡ್ ಮಾರ್ಗಸೂಚಿಯ ಪ್ರಕಾರವೇ ನಡೆಯಬೇಕಿದೆ. ಹೆಚ್ಚು ಜನ ಸೇರಲು ಅವಕಾಶ ನೀಡದೇ ಕೇವಲ ಧಾರ್ಮಿಕ ವಿಧಿ ವಿಧಾನಗಳನ್ನಷ್ಟೇ ಮಾಡಬೇಕಿದೆ. ಸರಳವಾಗಿ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಮುಕ್ತಾಯ ಮಾಡಬೇಕಾದ ಅನಿವಾರ್ಯತೆಯಲ್ಲಿ ದೇವಸ್ಥಾನಗಳ ಆಡಳಿತ ಮಂಡಳಿಗಳಿವೆ.

ಸರಳ ಕೂರ್ಮಗಡ ಜಾತ್ರೆ

ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕಾರವಾರದ ಕೂರ್ಮಗಡ ನರಸಿಂಹ ದೇವರ ಜಾತ್ರೆಯು ಜ.17ರಂದು ನಡೆಯಲಿದೆ. ಸಮುದ್ರ ಮಧ್ಯದಲ್ಲಿರುವ ನಡುಗಡ್ಡೆಯಲ್ಲಿ ನಡೆಯುವ ಈ ಉತ್ಸವಕ್ಕೆ ರಾಜ್ಯ, ಗೋವಾ, ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ಬರುತ್ತಾರೆ. ಆದರೆ, ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಸರಳವಾಗಿ ನೆರವೇರಿಸಲಾಗುತ್ತಿದೆ. ಈ ವರ್ಷವೂ ಧಾರ್ಮಿಕ ಕಾರ್ಯಗಳನ್ನು ಮಾತ್ರ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೂಚಿಸಲಾಗಿದೆ.

ಸೂಚನೆಗಳು

ಜಾತ್ರಾ ಮಹೋತ್ಸವಕ್ಕೆ ಭಕ್ತರು ಸಾಗಲು ಮೀನುಗಾರಿಕಾ ಇಲಾಖೆಯಿಂದ ಅನುಮತಿ ಅಥವಾ ಪರವಾನಗಿ ಹೊಂದಿರುವ ದೋಣಿಗಳನ್ನು ಮಾತ್ರ ಬಳಸಿಕೊಳ್ಳಬೇಕು. ಕೋವಿಡ್ ಮಾರ್ಗಸೂಚಿಯಂತೆ ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಸೂಚಿಸಲಾಗಿದೆ.

ದೋಣಿಗಳಲ್ಲಿ ಹೋಗಲು ಭಕ್ತರಿಗೆ ಪಾಸ್ ವ್ಯವಸ್ಥೆ ಮಾಡಬೇಕು. ದೋಣಿಗಳಲ್ಲಿ ಸಾಗುವ ಎಲ್ಲರಿಗೂ ಕಡ್ಡಾಯವಾಗಿ ಜೀವರಕ್ಷಕ ಜಾಕೆಟ್‌ಗಳನ್ನು ನೀಡಬೇಕು. ಕೂರ್ಮಗಡದ ಬಳಿ ತಾತ್ಕಾಲಿಕವಾಗಿ ಜಟ್ಟಿಗಳನ್ನು ನಿರ್ಮಿಸಬೇಕು. ಜಾತ್ರೆಗೆ ಬರುವ ಎಲ್ಲ ಭಕ್ತರು ಕಡ್ಡಾಯವಾಗಿ ಮುಖಗವಸು ಧರಿಸಬೇಕು. ಅವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂದು ತಿಳಿಸಲಾಗಿದೆ.

ಜಾತ್ರೆಯ ಸ್ಥಳದಲ್ಲಿ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯ ಎಸೆಯದೇ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜಾತ್ರೆಯ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸ್, ಬಂದರು, ಮೀನುಗಾರಿಕೆ, ಕರಾವಳಿ ಕಾವಲು ಪಡೆ, ಮೀನುಗಾರರು, ದೋಣಿ ಮಾಲೀಕರು ಮತ್ತು ದೇವಸ್ಥಾನದ ಆಡಳಿತ ಮಂಡಳಿಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸೂಚಿಸಲಾಗಿದೆ.

ಬೈತಖೋಲ್‌ನಿಂದ ಮಾತ್ರ ಅವಕಾಶ

ಕೂರ್ಮಗಡಕ್ಕೆ ತೆರಳುವವರ ಮಾಹಿತಿ ಸಂಗ್ರಹಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಬಾರಿ ಬೈತಖೋಲ್ ಬಂದರಿನಿಂದ ಮಾತ್ರ ಅವಕಾಶ ನೀಡಲಾಗಿದೆ. ಇದನ್ನು ಹೊರತುಪಡಿಸಿ ಉಳಿದ ಯಾವ ಸ್ಥಳಗಳಿಂದಲೂ ದೋಣಿಗಳು ನಡುಗಡ್ಡೆಗೆ ಹೋಗಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ಸೂಚಿಸಲಾಗಿದೆ.

ಕೋವಿಡ್ ಹರಡುತ್ತಿರುವ ಕಾರಣ ನರಸಿಂಹ ದೇವರ ಸನ್ನಿಧಿಯಲ್ಲಿ ಯಾವುದೇ ತೀರ್ಥ ಹಾಗೂ ಮಹಾಪ್ರಸಾದಗಳನ್ನು ವಿತರಿಸುವುದನ್ನು ನಿರ್ಬಂಧಿಸಬೇಕು ಎಂದೂ ನಿರ್ದೇಶನ ನೀಡಲಾಗಿದೆ.

‘ಕೇವಲ ಧಾರ್ಮಿಕ ಆಚರಣೆ’

‘ಜಿಲ್ಲೆಯಲ್ಲಿ ಜಾತ್ರೆಗಳ ಬಗ್ಗೆ ಆಯಾ ತಾಲ್ಲೂಕುಗಳಲ್ಲೇ ನಿರ್ಣಯ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದಷ್ಟೂ ಜಾತ್ರೆಗಳನ್ನು ಮುಂದೂಡಲು ಮನವರಿಕೆ ಮಾಡಲಾಗುತ್ತಿದೆ. ಮುಖ್ಯ ಆಚರಣೆಗಳನ್ನು ಮಾತ್ರ ಹಮ್ಮಿಕೊಳ್ಳಲು ಸಾಧ್ಯವೇ ಎಂದು ಪರಿಶೀಲಿಸಲು ತಿಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕೂರ್ಮಗಡ ಜಾತ್ರೆಯಲ್ಲಿ ಒಂದು ಸಲಕ್ಕೆ 200 ಜನ ಮಾತ್ರ ಸೇರುವಂತೆ ಯೋಜನೆ ಮಾಡಲಾಗಿದೆ. ಕಾರವಾರದಲ್ಲೂ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಮತ್ತಷ್ಟು ಏರಿಕೆಯಾಗುತ್ತಿದ್ದರೆ ಕಠಿಣ ನಿರ್ಬಂಧ ಹೇರುವ ಬಗ್ಗೆ ಚಿಂತಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT