ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಸೋಂಕು ದೃಢ ಪ್ರಮಾಣ ಇಳಿಕೆ

ಕೋವಿಡ್: ಶೇ 0.67ರ ಆಸುಪಾಸಿನಲ್ಲಿ ದಾಖಲು, ಸಾರ್ವಜನಿಕರು ನಿಟ್ಟುಸಿರು
Last Updated 16 ಸೆಪ್ಟೆಂಬರ್ 2021, 16:50 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಕೋವಿಡ್ ದೃಢಪಡುವ ಪ್ರಮಾಣವು ಕೆಲವು ದಿನಗಳಿಂದ ಇಳಿಕೆಯಾಗುತ್ತಿದೆ. ಚೌತಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜನದಟ್ಟಣೆ ಹೆಚ್ಚಾಗಿದ್ದರೂ ಸೋಂಕಿನ ಪ್ರಮಾಣದಲ್ಲಿ ಹೆಚ್ಚಳವಾಗದಿರುವುದು ಜನರಿಗೆ ತುಸು ನೆಮ್ಮದಿ ತರಿಸಿದೆ.

ಒಂದು ವಾರದ ಹಿಂದೆ ಕೋವಿಡ್ ದೃಢೀಕರಣ ಪ್ರಮಾಣವು ಶೇ 0.70ಯ ಆಸುಪಾಸಿನಲ್ಲಿತ್ತು. ಅದು ಮತ್ತಷ್ಟು
ಇಳಿಕೆ ಕಂಡಿದ್ದು, ಗುರುವಾರ ಶೇ 0.67ರಷ್ಟು ದಾಖಲಾಗಿದೆ. ದಿನವೊಂದಕ್ಕೆ ಪರೀಕ್ಷಿಸಲಾಗುವ ಸುಮಾರು ಐದು ಸಾವಿರ ಗಂಟಲು ದ್ರವದ ಮಾದರಿಗಳಲ್ಲಿ 30–40ರಷ್ಟರಲ್ಲಿ ಮಾತ್ರ ಸೋಂಕು ಖಚಿತವಾಗುತ್ತಿದೆ.

ಕೋವಿಡ್ ಎರಡನೇ ಅಲೆಯ ಅವಧಿಯಲ್ಲಿ ಜಿಲ್ಲೆಯಲ್ಲಿ ಪ್ರತಿದಿನ ಸೋಂಕಿತರ ಸಂಖ್ಯೆ 500ಕ್ಕೂ ಅಧಿಕವಿತ್ತು. ಅಲ್ಲದೇ ಪ್ರತಿದಿನ ಮರಣಗಳೂ ವರದಿಯಾಗುತ್ತಿದ್ದವು. ಇದು ಜನರ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು, ಸಿಬ್ಬಂದಿಯ ಆತಂಕವನ್ನು ಹೆಚ್ಚಿಸಿತ್ತು. ಬಳಿಕ ಜಾರಿಯಾದ ಲಾಕ್‌ಡೌನ್, ಸೀಲ್‌ಡೌನ್‌, ಜಾತ್ರೆ, ಸಮಾರಂಭಗಳು, ಹಬ್ಬಗಳ ಆಚರಣೆಯ ಮೇಲಿನ ನಿರ್ಬಂಧದಿಂದ ಕೋವಿಡ್ ಪ್ರಮಾಣ ಕಡಿಮೆಯಾಗಿದೆ ಎನ್ನುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಅಭಿಮತವಾಗಿದೆ.

ಈ ನಡುವೆ, ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಅಭಿಯಾನಕ್ಕೂ ಸಾರ್ವಜನಿಕರಿಂದ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆ. ನಿಗದಿತ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಇದು ಕೂಡ ಜನರಲ್ಲಿ ರೋಗನಿರೋಧಕ ಶಕ್ತಿ
ವೃದ್ಧಿಗೆ ಸಹಕಾರಿಯಾಗಿದೆ. ಈ ಕಾರಣದಿಂದಲೂ ಕೋವಿಡ್ ದೃಢಪಡುವ ಪ್ರಮಾಣದಲ್ಲಿ ಇಳಿಕೆಯಾಗಿರಬಹುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಊಹಿಸುತ್ತಾರೆ.

ಲಸಿಕೆ ಅಭಿಯಾನ:

ಜಿಲ್ಲೆಯಲ್ಲಿ ಸೆ.17ರಂದು ಬೃಹತ್ ಕೋವಿಡ್ ಲಸಿಕಾ ಮೇಳವನ್ನು ಆಯೋಜಿಸಲಾಗಿದೆ. 8.77 ಲಕ್ಷ ಮಂದಿ ಮೊದಲನೇ ಡೋಸ್ ಹಾಗೂ 2.96 ಲಕ್ಷ ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಸುಮಾರು 1.20 ಲಕ್ಷ ಮಂದಿ ಮೊದಲನೇ ಡೋಸ್ ಪಡೆದು 84 ದಿನ ಪೂರೈಸಿದ್ದಾರೆ.

ಲಸಿಕಾ ಅಭಿಯಾನದ ಬಗ್ಗೆ ಈಗಾಗಲೇ ಸಾಕಷ್ಟು ಪ್ರಚಾರವನ್ನೂ ಕೈಗೊಳ್ಳಲಾಗಿದೆ. ಎರಡನೇ ಡೋಸ್ ಪಡೆಯಲು ಬಾಕಿ ಇರುವವರಿಗೆ ಸಂದೇಶಗಳನ್ನೂ ಕಳುಹಿಸಲಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಾಗೂ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಲಾಗಿದೆ. ಜಿಲ್ಲೆಯ ಎಲ್ಲ 11 ತಾಲ್ಲೂಕುಗಳಲ್ಲಿ ಒಟ್ಟು 366 ಸೆಷನ್‌ಗಳ ಮೂಲಕ ಲಸಿಕೆ ನೀಡಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT