ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಅನ್ನದ ತುತ್ತು ಕಸಿದ ಕೋವಿಡ್‌–19

ಗಂಟುಮೂಟೆ ಕಟ್ಟಿಕೊಂಡು ಊರಿನೆಡೆಗೆ ಮುಖ ಮಾಡಿದ ವ್ಯಾಪಾರಸ್ಥರು
Last Updated 14 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಶಿರಸಿ: ಮಾರಿಕಾಂಬಾ ಜಾತ್ರೆಯಲ್ಲಿ ಒಂದಿಷ್ಟು ವ್ಯಾಪಾರ ನಡೆಸಿ, ತುತ್ತಿನ ಚೀಲ ತುಂಬಿಸಿಕೊಳ್ಳಲೆಂದು ನಗರಕ್ಕೆ ಬಂದಿದ್ದ ಉತ್ತರ ಭಾರತದ ವ್ಯಾಪಾರಸ್ಥರು ಗಂಟುಮೂಟೆ ಕಟ್ಟಿಕೊಂಡು ಊರಿಗೆ ಮರಳುತ್ತಿದ್ದಾರೆ.

ರಾಜ್ಯದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾಗಿರುವ ಮಾರಿಕಾಂಬಾ ಜಾತ್ರೆ ಮಾ.3ರಿಂದ 11ರವರೆಗೆ ನಡೆಯಿತು. ಎರಡು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಹೊರ ರಾಜ್ಯಗಳ, ಅದರಲ್ಲೂ ಉತ್ತರ ಭಾರತದ ರಾಜ್ಯಗಳ ಅನೇಕ ವ್ಯಾಪಾರಿಗಳು ಬರುತ್ತಾರೆ. ಜಾತ್ರೆಯ ಹಂಗಾಮಿ ಪ್ಲಾಟ್ ಹರಾಜಿನ ವೇಳೆ ಬರುವ ಅವರು, ದೊರೆತ ಜಾಗದಲ್ಲಿ ತಗಡಿನ ಶೀಟ್ ಹಾಕಿ, ಸಣ್ಣ ಅಂಗಡಿ ನಿರ್ಮಿಸಿಕೊಳ್ಳುತ್ತಾರೆ. ಸಾಮಗ್ರಿಗಳ ಸಂಗ್ರಹ, ಕುಟುಂಬಸ್ಥರು, ಮಕ್ಕಳಿಗೆ ಮಲಗಲು, ಊಟ, ತಿಂಡಿ, ಎಲ್ಲದಕ್ಕೂ ಇದೇ ಆರಡಿ ಜಾಗ ಮೀಸಲು.

ಹೀಗೆ ಬರುವ ವ್ಯಾಪಾರಿಗಳು ಜಾತ್ರೆ ಮುಗಿದು ಆರೆಂಟು ದಿನ ವ್ಯಾಪಾರ ನಡೆಸುತ್ತಾರೆ. ದೇವಿ ಮರಳಿದ ದಿನದಿಂದ ತೇರುಪೇಟೆಯು, ಮಿನಿ ಬಜಾರ್ ಆಗಿ ಪರಿವರ್ತನೆಯಾಗುತ್ತದೆ. ‘ಪ್ರತಿ ಜಾತ್ರೆಗಿಂತ ಈ ಬಾರಿ ವ್ಯಾಪಾರ ತೀರಾ ಕಡಿಮೆ. ಪ್ರತಿ ಬಾರಿ ಜಾತ್ರೆ ಮುಗಿದ ಮೇಲೆ ಯುಗಾದಿ ತನಕ ಇರುತ್ತಿದ್ದ ನಮಗೆ, ಉತ್ತಮ ಆದಾಯ ಸಿಗುತ್ತಿತ್ತು. ಅಂಗಡಿ ನಿರ್ಮಾಣ, ನೆಲ ಬಾಡಿಗೆ ಸೇರಿ ₹ 85ಸಾವಿರಕ್ಕೂ ಅಧಿಕ ಖರ್ಚಾಗಿದೆ. ಹಾಕಿದ ಬಂಡವಾಳವೂ ಸಿಕ್ಕಿಲ್ಲ’ ಎಂದರು ಹಾಸಿಗೆ ಬಟ್ಟೆ ವ್ಯಾಪಾರಿ ಶಿವಮೊಗ್ಗದ ರತ್ನಮ್ಮ.

ಜಾತ್ರೆಯಲ್ಲಿ ಸ್ಥಳೀಯ ವ್ಯಾಪಾರಿಗಳ ಜೊತೆಗೆ ರಾಜಸ್ಥಾನ, ಗುಜರಾತ್, ದೆಹಲಿ, ಮುಂಬೈನ 75ಕ್ಕೂ ಹೆಚ್ಚು ವ್ಯಾಪಾರಿಗಳು ಸೌಂದರ್ಯ ಸಾಮಗ್ರಿ, ಕನ್ನಡಕ, ವಾಚ್, ತಿನಿಸು ಹೀಗೆ ವಿವಿಧ ಮಳಿಗೆಗಳನ್ನು ಹಾಕಿದ್ದರು. ‘ನಿತ್ಯ ಗಳಿಸುವ ಆದಾಯದಲ್ಲೇ ಬದುಕು ಕಟ್ಟಿಕೊಳ್ಳುವ ನಾವು, ಸಾಲ ಮಾಡಿ ಅಂಗಡಿ ಬಾಡಿಗೆ ತುಂಬುತ್ತೇವೆ. ಬರುವ ಆದಾಯದಲ್ಲಿ ಸಾಲ ಹಿಂದಿರುಗಿಸುತ್ತೇವೆ. ಆದರೆ, ಕೊರೊನಾ ಭೀತಿ ನಮ್ಮನ್ನು ಸಾಲದ ಕೂಪಕ್ಕೆ ತಳ್ಳಿದೆ’ ಎಂದು ವ್ಯಾಪಾರಿ ಗಜೇಂದ್ರ ಪಟೋಡಿಯಾ.

‘ಜಾತ್ರೆ ನಡೆಯುವಾಗ ಶನಿವಾರ, ಭಾನುವಾರ ಹೊರತುಪಡಿಸಿದರೆ ಇನ್ನುಳಿದ ದಿನ ವ್ಯಾಪಾರ ಅಷ್ಟಕ್ಕಷ್ಟೇ. ಜಾತ್ರೆ ಮುಗಿದ ಮೇಲೆ ಶನಿವಾರ, ಭಾನುವಾರ (ಮಾ.14, 15) ಗ್ರಾಹಕರು ಅತಿಹೆಚ್ಚು ಬರುತ್ತಿದ್ದರು. ಆದರೆ, ಈ ಬಾರಿ ಶೇ 60ರಷ್ಟು ನಷ್ಟವಾಗಿದೆ. ಸಾಮಗ್ರಿಗಳನ್ನು ವಾಪಸ್ ಒಯ್ಯಲು ಬಾಡಿಗೆಯೇ ಭಾರವಾಗುತ್ತದೆ’ ಎಂದು ಶುಕ್ರವಾರ ಸಂಜೆ ಅಂಗಡಿ ತೆರವುಗೊಳಿಸಿದ ವ್ಯಾಪಾರಿ ಅಮನ್ ಪ್ರೀತ್ ಹೇಳಿದರು.

ಜನಜಂಗುಳಿ ಸೇರುವುದನ್ನು ನಿರ್ಬಂಧಿಸಲು ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಅಧಿಕಾರಿಗಳು, ಪೊಲೀಸರು ಜಾತ್ರೆಯ ಅಂಗಡಿಗಳಲ್ಲಿ ಕೆಲವನ್ನು ತೆರವುಗೊಳಿಸಿದರು. ಶನಿವಾರ ಬೆಳಿಗ್ಗೆ ಕೆಲವೆಡೆ ಅಂಗಡಿ ತೆರವುಗೊಳಿಸುತ್ತಿದ್ದರೆ, ಇನ್ನು ಕೆಲವೆಡೆ ಸಾಮಗ್ರಿಗಳನ್ನು ಚೀಲಕ್ಕೆ ತುಂಬುತ್ತಲೇ, ಅಂಗಡಿಕಾರರು ವ್ಯಾಪಾರ ಮಾಡುತ್ತಿದ್ದರು. ಮಧ್ಯಾಹ್ನದ ಬಿರುಬಿಸಿಲಿನಲ್ಲೂ ಜಾತ್ರೆ ಪೇಟೆಯಲ್ಲಿ ಜನದಟ್ಟಣಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT