ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನ 1,100 ಮಂದಿಗೆ ‘ಕೋವಿಶೀಲ್ಡ್’ ಲಸಿಕೆ

ಉತ್ತರ ಕನ್ನಡದ 11 ಕೇಂದ್ರಗಳಲ್ಲಿ ಪೂರ್ಣಗೊಂಡ ಸಿದ್ಧತೆ
Last Updated 15 ಜನವರಿ 2021, 14:02 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯ 11 ಕೇಂದ್ರಗಳಲ್ಲಿ ಜ.16ರಂದು 1,100 ಮಂದಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗುವುದು. ಸ್ಯಾನಿಟೈಸಿಂಗ್ ಕೆಲಸ ಮಾಡುವ ಪೌರ ಕಾರ್ಮಿಕರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರೂಪ್ ‘ಡಿ’ ಸಿಬ್ಬಂದಿ ಮೊದಲು ಲಸಿಕೆ ಪಡೆಯಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಷ್ಟ್ರಮಟ್ಟದಲ್ಲಿ ನಡೆಯುವ ಲಸಿಕಾ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬೆಳಿಗ್ಗೆ 11ರಿಂದ 11.30ರ ಅವಧಿಯಲ್ಲಿ ಉದ್ಘಾಟಿಸಲಿದ್ದಾರೆ.ಇದೇ ವೇಳೆ ಜಿಲ್ಲೆಯಲ್ಲೂ ಲಸಿಕೆ ನೀಡಲಾಗುವುದು. ಮೊದಲ ಆದ್ಯತೆಯಲ್ಲಿ ಲಸಿಕೆ ನೀಡಲು ಆರೋಗ್ಯ ಇಲಾಖೆಯ 14,665 ಸಿಬ್ಬಂದಿಯನ್ನು ನೋಂದಣಿ ಮಾಡಲಾಗಿದೆ’ ಎಂದು ವಿವರಿಸಿದರು.

‘ಲಸಿಕೆಯ ಸಿರಿಂಜ್ ಅನ್ನು ಪ್ರತಿಯೊಬ್ಬರ ಭುಜಕ್ಕೆ ಚುಚ್ಚಲಾಗುತ್ತದೆ. ಪ್ರತಿ ವಯಲ್‌ನಲ್ಲಿ (ಲಸಿಕೆಯ ಬಾಟಲಿ‌) ತಲಾ ಐದು ಎಂ.ಎಲ್ ಲಸಿಕೆಯಿದೆ. ಒಂದು ಬಾಟಲಿಯಿಂದ 10 ಮಂದಿಗೆ (‍ಪಾಯಿಂಟ್ ಐದು ಎಂ.ಎಲ್‌ನಂತೆ) ಲಸಿಕೆ ನೀಡಬಹುದು. ಒಮ್ಮೆ ಲಸಿಕೆ ಪಡೆದವರು 28 ದಿನಗಳ ಬಳಿಕ ಎರಡನೇ ಬಾರಿಗೆ ತೆಗೆದುಕೊಳ್ಳಬೇಕು. ಅದು ಆ ವ್ಯಕ್ತಿಯು ಮೊದಲು ಪಡೆದ ಸಂಸ್ಥೆಯದ್ದೇ ಆಗಬೇಕು’ ಎಂದು ತಿಳಿಸಿದರು.

‘ಮೊದಲ ಆದ್ಯತೆಯಲ್ಲಿ ಲಸಿಕೆ ಪಡೆಯುವವರ ಸರದಿ ಮುಗಿದ ಬಳಿಕ ಎರಡನೇ ಹಂತದವರಿಗೆ ಆರಂಭಿಸಲಾಗುತ್ತದೆ. ಪೊಲೀಸರು, ಕಂದಾಯ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ಸಿಬ್ಬಂದಿ ಈ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು. ಮೂರನೇ ಹಂತದ ಅಭಿಯಾನದ ಬಗ್ಗೆ ಮುಂದಿನ ದಿನಗಳಲ್ಲಿ ವಿವರಿಸಲಾಗುವುದು’ ಎಂದು ಹೇಳಿದರು.

ಲಸಿಕಾ ಕೇಂದ್ರಗಳು:ಕಾರವಾರದ ಜಿಲ್ಲಾ ಆಸ್ಪತ್ರೆ, ಅಂಕೋಲಾ, ಹೊನ್ನಾವರ, ಭಟ್ಕಳ, ಶಿರಸಿ, ಮುಂಡಗೋಡ, ಸಿದ್ದಾಪುರ, ಯಲ್ಲಾಪುರ, ಹಳಿಯಾಳ, ಜೊಯಿಡಾದ ತಾಲ್ಲೂಕು ಆಸ್ಪತ್ರೆಗಳು ಮತ್ತು ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಕೋವಿಶೀಲ್ಡ್’ ಲಸಿಕಾ ಕಾರ್ಯಕ್ರಮ ನಡೆಯಲಿದೆ ಎಂದರು.

‘ಲಸಿಕಾ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯ. ಆದರೆ, ಲಸಿಕೆ ಹಾಕಿಸಿಕೊಳ್ಳುವುದು ಅವರವರ ಇಚ್ಛೆಗೆ ಬಿಡಲಾಗಿದೆ. ಲಸಿಕೆ ಹಾಕಿಸಿಕೊಳ್ಳುವವರು ಹೆಸರು ನೋಂದಣಿಯ ಸಂದರ್ಭದಲ್ಲಿ ನೀಡಿದ ದಾಖಲೆಯನ್ನೇ ಹಾಜರು ಪಡಿಸಬೇಕು. ಅವರ ಮೊಬೈಲ್ ಫೋನ್ ಸಂಖ್ಯೆಗೆ ಲಸಿಕಾ ವಿತರಣೆಯ ಎಲ್ಲ ಮಾಹಿತಿಗಳನ್ನು ಆರೋಗ್ಯ ಇಲಾಖೆಯಿಂದ ರವಾನಿಸಲಾಗಿದೆ. ಒಂದು ಬಾರಿಯ ಪಾಸ್‌ವರ್ಡ್ (ಒ.ಟಿ.ಪಿ) ಬಂದರೆ ಮಾತ್ರ ಲಸಿಕೆ ನೀಡಲು ಸಾಧ್ಯವಾಗುತ್ತದೆ’ ಎಂದು ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಕ್ಯಾಪ್ಟನ್ ಡಾ.ರಮೇಶ ರಾವ್ ಇದ್ದರು.

ಇವರಿಗೆ ಲಸಿಕೆ ನೀಡುವುದಿಲ್ಲ:ಕೋವಿಡ್ ವಿರುದ್ಧ ಲಸಿಕೆಯನ್ನು ಸದ್ಯಕ್ಕೆ ಎಲ್ಲರಿಗೂ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಹರೀಶಕುಮಾರ್ ತಿಳಿಸಿದರು.

‘18 ವರ್ಷದ ಒಳಗಿನವರು ಹಾಗೂ 60 ವರ್ಷಕ್ಕಿಂತ ಹೆಚ್ಚಿನ ಪ್ರಾಯದವರಿಗೆ ಲಸಿಕೆ ನೀಡುವುದಿಲ್ಲ. ಗರ್ಭಿಣಿಯರು, ಸ್ತನ್ಯಪಾನ ಮಾಡಿಸುವ ತಾಯಂದಿರು, ಕೋವಿಡ್‍ ಸಕ್ರಿಯವಾಗಿರುವ ಸೋಂಕಿತರನ್ನು ಲಸಿಕೆಯಿಂದ ಪ್ರಸ್ತುತ ಹೊರಗಿಡಲಾಗಿದೆ’ ಎಂದು ಅವರು ಹೇಳಿದರು.

***

ಲಸಿಕೆಯ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವುದು, ವದಂತಿ ಹರಡುವುದು ಕಂಡುಬಂದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು

– ಡಾ.ಕೆ.ಹರೀಶಕುಮಾರ್, ಜಿಲ್ಲಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT