ಗೋ ರಕ್ಷಣೆಗೆ ಪ್ರತ್ಯೇಕ ವಾಹನ: ಕೊಡುಗೆ ನೀಡಿದ ಉದ್ಯಮಿ ಶ್ರೀನಿವಾಸ ಹೆಬ್ಬಾರ

ಶಿರಸಿ: ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಗೋ ರಕ್ಷಣೆ ವಾಹನವನ್ನು ಉದ್ಯಮಿ ಶ್ರೀನಿವಾಸ ಹೆಬ್ಬಾರ ಅವರು ಮರಾಠಿಕೊಪ್ಪದ ಗೋ ರಕ್ಷಕ ಸಮಿತಿಗೆ ಗುರುವಾರ ಹಸ್ತಾಂತರಿಸಿದರು.
ಈ ವೇಳೆ ಭಜರಂಗದಳದ ಪ್ರಮುಖ ವಿಠ್ಠಲ ಪೈ ಮಾತನಾಡಿ, ‘ಭಾರತ ಕೃಷಿ ಪ್ರಧಾನ ದೇಶವಾಗಲು ಗೋವು ಪ್ರಮುಖ ಕಾರಣವಾಗಿದೆ. ಆದರೆ, ಇಂದು ಗೋಹತ್ಯೆ ಹೆಚ್ಚುತ್ತಿದ್ದು, ಗೋರಕ್ಷಣೆ ಮಾಡುವವರ ಸಂಖ್ಯೆ ಇಳಿಯುತ್ತಿದೆ. ಕಳೆದ ಎರಡು ದಶಕಗಳಲ್ಲಿ 40ಸಾವಿರಕ್ಕೂ ಅಧಿಕ ಕಸಾಯಿಖಾನೆಗಳಾಗಿವೆ. ಹೀಗಾ,ಗಿ ಗೋರಕ್ಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಗೋ ರಕ್ಷಿಸುವ ಮೂಲಕ ದೇಶದ ಸಂಸ್ಕೃತಿ, ಕೃಷಿ ಪರಂಪರೆ ಉಳಿಸಬೇಕು’ ಎಂದರು.
ಪಿಎಸ್ಐ ಮಾದೇಶ ಮಾತನಾಡಿ, ‘ಗೋ ರಕ್ಷಣೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಗೋ ಸಾಗಾಟ ಮಾಡಲು ಅನುಮತಿ ಅಗತ್ಯವಿದೆ. ಅಕ್ರಮವಾಗಿ ಸಾಗಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಗೋ ರಕ್ಷಣೆ ಸಂದರ್ಭದಲ್ಲಿ ಕಾನೂನು ತಿಳಿವಳಿಕೆ ಪಡೆದು ಮುಂದಡಿ ಇಡಬೇಕು’ ಎಂದರು. ಮೂಕಪ್ರಾಣಿಗಳು ಗಾಯಗೊಂಡು ಬಿದ್ದಾಗ, ಅನಾರೋಗ್ಯ ಉಂಟಾದಾಗ, ಚರಂಡಿಯಲ್ಲಿ ಬಿದ್ದಾಗ ನೆರವಾಗಲು ಈ ವಾಹನ ಬಳಕೆಯಾಗಲಿದೆ ಎಂಬುದನ್ನು ತಿಳಿಸಲಾಯಿತು.
ಗೋರಕ್ಷಕ ಸಮಿತಿಗೆ ಗೋಸಾಗಣೆ ವಾಹನವನ್ನು ಕೊಡುಗೆಯಾಗಿ ನೀಡಿದ ಶ್ರೀನಿವಾಸ ಹೆಬ್ಬಾರ ಅವರು, ಗೋವಿನ ನೋವಿನಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು, ಸಾರ್ವಜನಿಕ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. ನಗರಸಭೆ ಸದಸ್ಯ ಕಿರಣ ಆನೂರಶೆಟ್ಟಿ, ಪ್ರಮುಖರಾದ ಅರುಣ ಪ್ರಭು, ಪ್ರಕಾಶ ಸಾಲೇರ್, ರವಿ ಗೌಳಿ ಇದ್ದರು. ಕೇಮು ವಂದಿಗೆ ನಿರೂಪಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.