ಗುರುವಾರ , ಫೆಬ್ರವರಿ 20, 2020
22 °C

ದೇಶದಾದ್ಯಂತ ಚಳವಳಿಗೆ ಸಿಪಿಐ (ಎಂ) ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆ. ಅವುಗಳ ವಿರುದ್ಧ ದೇಶದಾದ್ಯಂತ ಚಳವಳಿ ನಡೆಸಲು ಸಿಪಿಐ (ಎಂ) ನಿರ್ಧರಿಸಿದೆ’ ಎಂದು ಪಕ್ಷದ ಪಾಲಿಟ್‌ ಬ್ಯುರೊ ಸದಸ್ಯ ಡಿ.ವಿ. ರಾಘವುಲು ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೌರತ್ವ (ತಿದ್ದುಪಡಿ) ಕಾಯ್ದೆಯು ತಾರತಮ್ಯ ಮಾಡುತ್ತದೆ. ಆದ್ದರಿಂದ ಈ ಕಾಯ್ದೆಯನ್ನು ವಿರೋಧಿಸಲು ಎಲ್ಲ ರಾಜ್ಯಗಳಿಗೆ ನಮ್ಮ ಪಕ್ಷವು ಮನವಿ ಮಾಡಿದೆ. ಅಲ್ಲದೇ ರಾಷ್ಟ್ರೀಯ ಪೌರತ್ವ ನೋಂದಣಿ ಮೂಲಕವೂ ಅನ್ಯಾಯವಾಗಲಿದೆ. ಆದ್ದರಿಂದ ಈ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

‘ಕೊಪ್ಪಳದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಕವನ ಬರೆದು ವಾಚಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನಿಸಿದಂತಾಗಿದೆ. ಆದ್ದರಿಂದ ಆ ಪ್ರಕರಣವನ್ನು ಹಿಂಪಡೆಯಬೇಕು. ಬೀದರ್‌ನಲ್ಲಿ ಕಾಯ್ದೆಯ ವಿರುದ್ಧ ನಡೆದ ನಾಟಕ ಪ್ರದರ್ಶನದಲ್ಲಿ ಪಾಲ್ಗೊಂಡ ಬಾಲಕಿಯ ತಾಯಿಯನ್ನು ಬಿಡುಗಡೆ ಮಾಡಿ ಪ್ರಕರಣ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಕ್ರಮಕ್ಕೆ ಒತ್ತಾಯ: ‘ಸಂಸದ ಅನಂತಕುಮಾರ ಹೆಗಡೆ ಗಾಂಧೀಜಿ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನಾಡಿದ್ದಾರೆ. ಅವರ ಪಕ್ಷದಿಂದ ಶೋಕಾಸ್ ನೋಟಿಸ್ ಕೊಟ್ಟರೂ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಅವರ ವಿರುದ್ಧ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಜಿ.ಎನ್.ನಾಗರಾಜ ಮಾತನಾಡಿ, ‘ಬೆಂಗಳೂರಿನಲ್ಲಿ ಈಚೆಗೆ ಬಿಸಿಯೂಟದ ಕಾರ್ಯಕರ್ತೆಯರು ಧರಣಿ ಸಂದರ್ಭದಲ್ಲಿ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಆದರೂ ಧರಣಿ ಮಾಡಿದವರ ವಿರುದ್ಧ ‍ಪ್ರಕರಣ ದಾಖಲಿಸಲಾಗಿದ್ದು, ಅದನ್ನು ರದ್ದು ಮಾಡಬೇಕು’ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಯಮುನಾ ಗಾಂವ್ಕರ್, ಶಾಂತಾರಾಮ ನಾಯಕ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)