ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಯಲ್ಲಿ ಮಿತಿ ಮೀರದ ಮಾಲಿನ್ಯ

ಹಬ್ಬದ ಸಂದರ್ಭ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಗಾಳಿಯ ಮಾದರಿ ಅಧ್ಯಯನ
Last Updated 20 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಕಾರವಾರ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ ಹೆಚ್ಚುವುದು ಸಾಮಾನ್ಯ ಸಂಗತಿ. ಆದರೆ, ನಗರದಲ್ಲಿ ಈ ವರ್ಷ ಗಾಳಿಯ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ವಿವಿಧ ವಿಷಕಾರಿಕಣಗಳು ನಿಯಂತ್ರಣದ ಮಟ್ಟದಲ್ಲೇ ಇರುವುದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರೀಕ್ಷೆಯಿಂದ ತಿಳಿದುಬಂದಿದೆ.

ಸುಡುಮದ್ದು, ಪಟಾಕಿ ಸಿಡಿಸುವುದರಿಂದ ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣದಲ್ಲಿ ಆಗುವ ಏರಿಕೆಯನ್ನು ಕಂಡುಕೊಳ್ಳಲು ಮಂಡಳಿಯು ತಂತ್ರಜ್ಞಾನದ ಮೊರೆ ಹೋಗಿತ್ತು.ನಗರದ ಹಬ್ಬುವಾಡದ ಕೆ.ಎಚ್.ಬಿ ಕಾಲೊನಿಯಲ್ಲಿರುವ ಕಚೇರಿಯ ಮೇಲ್ಭಾಗದಲ್ಲಿ ‘ಹೈ ವಾಲ್ಯೂಮ್ ಏರ್ ಸ್ಯಾಂಪ್ಲರ್’ ಎಂಬ ಯಂತ್ರವನ್ನು ಅಳವಡಿಸಿತ್ತು.

ಇದರ ಮೂಲಕ ದೀಪಾವಳಿ ಹಬ್ಬದ ಮೊದಲು ಅ.21ರಂದು, ದೀಪಾವಳಿಯ ಸಂದರ್ಭದಲ್ಲಿ ಅ.27ರಿಂದ 29ರವರೆಗೆ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಇಲ್ಲಿ ಸಂಗ್ರಹಿಸಿದ್ದ ಮಾದರಿಗಳನ್ನು ಧಾರವಾಡದಲ್ಲಿರುವ ಮಂಡಳಿಯ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿತ್ತು. ಅದರ ವರದಿಯಲ್ಲಿ ಗಾಳಿಯ ಗುಣಮಟ್ಟ ತೃಪ್ತಿಕರವಾಗಿದೆ ಎಂದುಕಂಡುಬಂದಿದೆ.

ರಾಷ್ಟ್ರೀಯ ಗಾಳಿ ಗುಣಮಟ್ಟ ಪರಿವೀಕ್ಷಣೆ (NAAQM) ವ್ಯವಸ್ಥೆಯಲ್ಲಿ ಗಾಳಿಯಲ್ಲಿ ನಿರ್ದಿಷ್ಟವಾದ ಅಂಶಗಳು ಇಂತಿಷ್ಟೇ ಇರಬೇಕು ಎಂದು ಸೂಚಿಸಲಾಗಿದೆ. ಗಂಧಕದ ಡೈ ಆಕ್ಸೈಡ್, ಸಾರಜನಕದ ಡೈ ಆಕ್ಸೈಡ್ ಮುಂತಾದವು ಮಿತಿಮೀರಿದರೆ ಆರೋಗ್ಯಕ್ಕೆ ಅಪಾಯಕಾರಿಯಾಗುತ್ತವೆ. ಪಟಾಕಿ, ಸುಡುಮದ್ದನ್ನು ಸುಟ್ಟಾಗ ಇವುಗಳು ವಾತಾವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೇರುತ್ತವೆ. ಆದ್ದರಿಂದ ಈ ಬಾರಿ ವಾಯುಮಾಲಿನ್ಯದ ಪರಿಮಾಣವನ್ನು ಅಳೆಯಲುಮಾಲಿನ್ಯ ನಿಯಂತ್ರಣ ಮಂಡಳಿಯು ವ್ಯವಸ್ಥೆ ಮಾಡಿಕೊಂಡಿತ್ತು.

ಮಾಲಿನ್ಯ ಹಬ್ಬದಿರಲು ಕಾರಣ: ಪಟಾಕಿ ಸಿಡಿಸಿದಾಗ ಹೊಮ್ಮುವ ಹೊಗೆಯು ಶುಷ್ಕ ವಾತಾವರಣದಲ್ಲಿ ಬೇಗ ಹರಡುತ್ತದೆ. ಆದರೆ, ಈ ಬಾರಿ ತೇವಾಂಶ ಹೆಚ್ಚಿದ್ದ ಕಾರಣ ಹೊಗೆ ಹೆಚ್ಚು ದೂರ ವ್ಯಾಪಿಸಿಲ್ಲ. ಅಲ್ಲದೇ ಪಟಾಕಿ ಸಿಡಿಸಿದ ಪ್ರಮಾಣವೇ ಕಡಿಮೆಯಾಗಿತ್ತು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಕಡಿಮೆಯಾಗಿದ್ದ ಪಟಾಕಿ ಸದ್ದು:ಈ ಬಾರಿ ದೀಪಾವಳಿಯಲ್ಲಿ ಪಟಾಕಿಯ ಸದ್ದು ಕಡಿಮೆ ಕೇಳಲು ಹಲವು ಕಾರಣಗಳಿವೆ.ಹಬ್ಬದ ಸಂದರ್ಭದಲ್ಲಿ ಸುರಿದ ಮಳೆ ಪಟಾಕಿ ಸಿಡಿಸಲು ಅವಕಾಶ ಕೊಡಲಿಲ್ಲ. ದರವೂ ವಿಪರೀತ ಏರಿಕೆಯಾಗಿದ್ದರಿಂದ ಗ್ರಾಹಕರು ಅತ್ಯಂತ ಕಡಿಮೆ ಖರೀದಿಸಿದ್ದರು.

ತುಳಸಿ ಹಬ್ಬದ ಸಂದರ್ಭದಲ್ಲಿ ಅಯೋಧ್ಯೆ ಜಮೀನಿನ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗಿತ್ತು. ಆ ಸಂದರ್ಭದಲ್ಲಿ ಮುನ್ನೆಚ್ಚರಿಕೆಯಾಗಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಪಟಾಕಿ ಸಿಡಿಸುವುದರ ಮೇಲೂ ನಿರ್ಬಂಧವಿತ್ತು.ಈ ವರ್ಷ ಪಟಾಕಿ ಖರೀದಿಸಿದವರ ಸಂಖ್ಯೆಯೂ ಕಡಿಮೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT