ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಡೇಲಿ: ಮೊಸಳೆ ದಾಳಿಗೊಳಗಾದ ವ್ಯಕ್ತಿಯ ಮೃತದೇಹ ಪತ್ತೆ

ಭಾನುವಾರವೂ ಮುಂದುವರಿದ ಶೋಧ ಕಾರ್ಯಾಚರಣೆ
Last Updated 14 ಆಗಸ್ಟ್ 2022, 13:59 IST
ಅಕ್ಷರ ಗಾತ್ರ

ದಾಂಡೇಲಿ: ನಗರದ ಅಲೈಡ್ ಏರಿಯಾ ಹತ್ತಿರ ಕಾಳಿ ನದಿಯಲ್ಲಿ, ಮೊಸಳೆ ನೀರಿಗೆ ಎಳೆದುಕೊಂಡು ಹೋಗಿದ್ದ ವ್ಯಕ್ತಿಯ ಮೃತದೇಹವು ಭಾನುವಾರ ಪತ್ತೆಯಾಗಿದೆ.

ಸುರೇಶ ವಸಂತ ತೇಲಿ (44) ಮೃತಪಟ್ಟವರು. ಅವರ ಮೃತದೇಹವು ನದಿಯಲ್ಲಿ ಪತ್ತೆಯಾಗಿದೆ. ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.

ಶನಿವಾರ ಸಂಜೆ ನದಿಯ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಮೊಸಳೆ ದಾಳಿ ಮಾಡಿ ನೀರಿಗೆ ಎಳೆದುಕೊಂಡಿತ್ತು. ಅವರ ರಕ್ಷಣೆಗಾಗಿ ತಡರಾತ್ರಿಯವರೆಗೂ ಕಾರ್ಯಾಚರಣೆ ನಡೆಸಲಾಗಿತ್ತು. ಭಾನುವಾರವೂ ಶೋಧ ಕಾರ್ಯ ಮುಂದುವರಿಸಲಾಯಿತು.

ಪಂಪ್‌ ಹೌಸ್ ಹತ್ತಿರವಿದ್ದ ಮೃತದೇಹವನ್ನು ಮಾನಸಾ ಅಡ್ವೆಂಚರ್ ಹಾರ್ನ್ ಬೆಲ್ ರ‍್ಯಾಫ್ಟಿಂಗ್ ತಂಡದ ಸದಸ್ಯರಾದ ಜಿ.ಇ.ಸೋಮಶೇಖರ, ಅನಿಲ್ ಕಮರೇಕರ, ಸಂಜಯ ವಡ್ಡರ್, ರಮೇಶ ಗೋಂಕರ, ಕಾರ್ತಿಕ ಯು.ಜಿ., ಶಂಕರ ಗೋಯಕರ್, ಯಾಸೀನ್ ಹಬೀಬ್ ಉಲ್ಲಾ ಹಾಗೂ ವೈಡರ್ ನೆಸ್ಟ್ ರ‍್ಯಾಫ್ಟಿಂಗ್‌ನ ಕರೀಂ ಖಾನ್ ಹೊರ ತೆಗೆದರು. ಮೃತದೇಹವನ್ನು ದಾಂಡೇಲಿ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಯಿತು. ಘಟನಾ ಸ್ಥಳದಲ್ಲಿದ್ದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ವಿರ್ನೋಲಿ ಆರ್.ಎಫ್.ಒ ಸಂಗಮೇಶ ಪಾಟೀಲ, ಟಿಂಬರ್ ಡಿಪೊ ಆರ್.ಎಫ್.ಒ ಬಸವರಾಜ.ಎಂ ಮತ್ತು ಸಿಬ್ಬಂದಿ ಇದ್ದರು.

ಘಟನಾ ಸ್ಥಳದಲ್ಲಿ ಎರಡು ದಿನಗಳಿಂದ ನಗರಸಭೆ ಆಯುಕ್ತ ರಾಜಾರಾಮ ಪವಾರ, ತಹಶೀಲ್ದಾರ್ ಶೈಲೇಶ ಪರಮಾನಂದ, ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ, ಡಿ.ವೈ.ಎಸ್ಪಿ ಕೆ.ಎಲ್.ಗಣೇಶ, ಸಿ.ಪಿ.ಐ ಲೋಕಾಪುರ ಬಿ.ಎಸ್., ವಾರ್ಡ್ ಸದಸ್ಯೆ ಪ್ರೀತಿ ನಾಯರ್, ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಕಿರಣ ಪಾಟೀಲ, ಅಪರಾಧ ವಿಭಾಗದ ಪಿ.ಎಸ್.ಐ ಯಲ್ಲಪ್ಪ.ಎಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

‘ನದಿ ಪಾತ್ರದ ಜನ ನದಿಗೆ ಇಳಿಯುವ ಮುನ್ನ ಎಚ್ಚರಿಕೆ ಅಗತ್ಯವಾಗಿದೆ. ಮೀನು ಹಿಡಿಯಲು ಹಾಗೂ ಇತರ ಕಾರ್ಯಗಳಿಗಾಗಿ ನದಿ ನೀರಿನ ಬಳಿ ತೆರಳುವ ಮೊದಲು ಸೂಕ್ತ ಗಮನ ಹರಿಸುವುದು ಅವಶ್ಯಕ’ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಧಿಕಾರಿಗಳೊಂದಿಗೆ ವಾಗ್ವಾದ:

‘ಪದೇಪದೆ ಮೊಸಳೆ ದಾಳಿ ನಡೆಯುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಎಂಟು ತಿಂಗಳಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕೈಗೊಳ್ಳಬೇಕು’ ಎಂದು ಅರಣ್ಯ ಇಲಾಖೆ ಹಾಗೂ ನಗರಾಡಳಿತ ಅಧಿಕಾರಿಗಳ ಜೊತೆ ಸಾರ್ವಜನಿಕರು ವಾಗ್ವಾದ ನಡೆಸಿದರು. ಸ್ಥಳದಲ್ಲಿ ಹಾಜರಿದ್ದ ಅರಣ್ಯ ಇಲಾಖೆಯ ಉಪ ವಲಯ ಎ.ಸಿ.ಎಫ್ ಎಸ್.ನಿಂಗಾಣಿ ಅವರು, ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT