ಬುಧವಾರ, ಸೆಪ್ಟೆಂಬರ್ 30, 2020
26 °C
ತುಳಗೇರಿಯಲ್ಲಿ ಗುಡ್ಡ ಕುಸಿತ, ಸೇತುವೆಗೆ ಧಕ್ಕೆ

ಶಿರಸಿ: ಬೆಳೆ ನಷ್ಟ, 9 ಮನೆಗಳಿಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ–ಗಾಳಿಯಿಂದಾಗಿ ಸಾಕಷ್ಟು ಆಸ್ತಿ–ಪಾಸ್ತಿಗಳಿಗೆ ಹಾನಿಯಾಗಿದೆ. ಬನವಾಸಿಯಲ್ಲಿ ವರದಾ ನದಿಗೆ ಪ್ರವಾಹ ಬಂದಿದ್ದು, ಅಜ್ಜರಣಿ ಗ್ರಾಮಕ್ಕೆ ತೆರಳುವ ಸೇತುವೆ ನೀರಿನಲ್ಲಿ ಮುಳುಗಡೆಯಾಗಿದೆ.

ರಂಗಾಪುರದಲ್ಲಿ ಕುಂಬಾರಕಟ್ಟೆ ಕೆರೆ ಒಡೆದು ಕೃಷಿ ಭೂಮಿಗೆ ಹಾನಿಯಾಗಿದೆ. ಬಾಳೆಕಾಯಿಮನೆ ಗ್ರಾಮದ ತುಳಗೇರಿ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದೆ. ವಾನಳ್ಳಿಯ ಜುಮ್ಮನಕಾನದಲ್ಲಿ ಸೇತುವೆಗೆ ಹಾನಿಯಾಗಿದೆ. ದಾಸನಕೊಪ್ಪ, ಸರಗುಪ್ಪ, ಹನುಮಂತಿ, ಮುಗವಳ್ಳಿ, ತೆರಕನಳ್ಳಿ, ಹುಲೇಕಲ್, ಪುಟ್ಟನಮನೆ, ಗಡಗೇರಿ ಮೊದಲಾದ ಹಳ್ಳಿಗಳಲ್ಲಿ ಬಾಳೆ, ಭತ್ತ, ಅಡಿಕೆ, ಮೆಕ್ಕೆಜೋಳದ ಬೆಳೆಗಳು ನಷ್ಟವಾಗಿವೆ.

ದೇವನಳ್ಳಿಯ ಕೃಷ್ಣ ಮರಾಠಿ, ಬಡಗಿಯ ಯಂಕು ಗೌಡ, ಸೋಂದಾದ ಜನಾರ್ದನ ಜೋಶಿ, ಉಂಚಳ್ಳಿಯ ಗಣೇಶ ರಜಪೂತ, ಸೋಮನಳ್ಳಿಯ ಬಾಬು ಪೂಜಾರಿ, ಹನುಮಂತಿಯ ಗೋಪಾಲ ಗೌಡ, ಬಲವಳ್ಳಿಯ ಹೈದರ್ ಖಾಸಿಮ್ ಖಾನ್, ಬಚಗಾಂವದ ಶಾಂತಾರಾಮ ಮಡಿವಾಳ ಅವರ ವಾಸದ ಮನೆಗಳಿಗೆ ಧಕ್ಕೆಯಾಗಿದೆ. ಒಟ್ಟು ₹ 1.96 ಲಕ್ಷ ಹಾನಿ ಸಂಭವಿಸಿರಬಹುದೆಂದು ಕಂದಾಯ ಇಲಾಖೆ ಆಧಿಕಾರಿಗಳು ಲೆಕ್ಕ ಹಾಕಿದ್ದಾರೆ.

ಕಡಬಾಳದಿಂದ ಪಂಚಲಿಂಗ, ಹೆಗಡೆಕಟ್ಟಾಕ್ಕೆ ಸಾಗುವ ಒಳ ರಸ್ತೆಯಲ್ಲಿರುವ ಸೇತುವೆ ಪಕ್ಕ ಮಣ್ಣು ಕುಸಿದು, ಸಂಪರ್ಕ ಕಡಿತವಾಗಿದೆ. 50ಕ್ಕೂ ಹೆಚ್ಚು ಮನೆಗಳಿಗೆ ದಿಗ್ಬಂಧನ ಹಾಕಿದಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು