ಸೋಮವಾರ, ನವೆಂಬರ್ 18, 2019
25 °C
ನಿರಂತರ ಮಳೆಯಿಂದ ಭತ್ತ, ಮೆಕ್ಕೆಜೋಳಕ್ಕೆ ಹಾನಿ

ಉತ್ತರಕನ್ನಡದಲ್ಲಿ ನೆಲಕಚ್ಚಿದ ಬೆಳೆ: ರೈತರ ಮೊಗದಲ್ಲಿ ಕುಂದಿದ ಕಳೆ

Published:
Updated:
Prajavani

ಶಿರಸಿ: ನಾಲ್ಕಾರು ದಿನಗಳಿಂದ ಸುರಿಯುತ್ತಿರುವ ಮಳೆ ತಾಲ್ಲೂಕಿನ ಪೂರ್ವಭಾಗದ ರೈತರ ಬದುಕನ್ನು ಕಸಿದಿದೆ. ಶ್ರಮಪಟ್ಟು ಬೆಳೆದ ಭತ್ತ, ಮೆಕ್ಕೆಜೋಳ ನೀರು ಪಾಲಾಗಿದೆ.

ಬನವಾಸಿ ಹೋಬಳಿಯಲ್ಲಿ ಭತ್ತ ಮತ್ತು ಮೆಕ್ಕೆಜೋಳ ಪ್ರಮುಖ ಕೃಷಿ ಬೆಳೆ. ಈ ವರ್ಷ ಜೂನ್‌ನಲ್ಲಿ ಮಳೆಯಿಲ್ಲದೇ ಹಲವಾರು ರೈತರು ಬಿತ್ತನೆ ಮಾಡಲು ವಿಳಂಬ ಮಾಡಿದ್ದರು. ನಂತರ ಅತಿವೃಷ್ಟಿಯು ಬಿತ್ತನೆಗೆ ಅಡ್ಡಿ ಮಾಡಿತ್ತು. ಎತ್ತರದ ಪ್ರದೇಶಗಳಲ್ಲಿ ಗದ್ದೆಯಿದ್ದವರು ಅಲ್ಪಾವಧಿಯಲ್ಲಿ ಫಸಲು ನೀಡುವ ಮಳೆಯಾಶ್ರಿತ ಭತ್ತ ಬಿತ್ತನೆ ಮಾಡಿದ್ದರು. ಅವೆಲ್ಲ ಈಗ ಮಳೆ ನೀರಿಗೆ ಸಿಲುಕಿ ಹಾನಿಯಾಗಿದೆ.

‘ಮಳೆಯ ಅಬ್ಬರಕ್ಕೆ ಭತ್ತದ ಗದ್ದೆ ನೀರಿನಲ್ಲಿ ಹಾಸಿಹೋಗಿದೆ. ತೆನೆಗಳು ನೆಲಕ್ಕೆ ಮಲಗಿ ನೀರಿನಲ್ಲಿ ಮುಳುಗಿವೆ. ಕಟಾವಿಗೆ ಬಂದ ಗದ್ದೆಗಳಲ್ಲಿ ಹೀಗೆ ನೀರು ನಿಂತರೆ ಫಸಲು ಕೈಗೆ ಸಿಗುವುದಿಲ್ಲ. ಹುಲ್ಲು ಬಳಕೆಗೆ ಬಾರದು’ ಎನ್ನುತ್ತಾರೆ ರೈತ ಬಿ.ಶಿವಾಜಿ.

‘ನಾವು ಹೆಚ್ಚಾಗಿ ಬೆಳೆಯುವುದು ಸ್ಥಳೀಯ ತಳಿಯ ಭತ್ತ. ಮಾರ್ನೊಮಿ ದೊಡ್ಗ್ಯ, ಸಣ್ಣ ಭತ್ತ ಬೆಳೆಸಿದ್ದೆವು. ಇನ್ನೇನು ಕಟಾವಿಗೆ ಬರುವ ಹೊತ್ತಿಗೆ ಅಕಾಲಿಕವಾಗಿ ಮಳೆ ಸುರಿದಿದೆ. ಗದ್ದೆ ತುಂಬ ನೀರು ನಿಂತಿದೆ. ಕಾಳು ಗಟ್ಟಿಯಾಗಿದ್ದ ಭತ್ತ ನೀರಿನಲ್ಲಿ ನೆನೆದರೆ ಮತ್ತೆ ಉಪಯೋಗಕ್ಕೆ ಬರುವುದಿಲ್ಲ. ಹಾಕಿದ ಹಣ, ಶ್ರಮ ಎಲ್ಲವೂ ವ್ಯರ್ಥವಾಗಿದೆ’ ಎನ್ನುತ್ತಾರೆ ಬನವಾಸಿಯ ರೈತರಾದ ಬಸವಣ್ಣಯ್ಯ ಹಿರೇಮಠ, ನಿಂಗಪ್ಪ,  ಬಸವಣ್ಣಪ್ಪ ಚೆನ್ನಯ್ಯ.

‘ಈ ಬಾರಿಯ ಹವಾಮಾನ ಮೆಕ್ಕೆ ಜೋಳಕ್ಕೆ ಸೂಕ್ತವಾಗಿದ್ದ ಕಾರಣ ಅನೇಕ ರೈತರು ಜೋಳ ಬೆಳೆಸಿದ್ದರು. ಗಿಡದಲ್ಲಿ ಒಣಗಿರುವ ಕುಂಡಿಗೆ ಕಟಾವಿಗೆ ಬಂದಿದೆ. ಈಗ ನಿತ್ಯ ಮಳೆ ಸುರಿಯುತ್ತಿರುವುದು ಕೊಯ್ಲಿಗೆ ಅಡ್ಡಿಯಾಗಿದೆ. ಹೊಲದಲ್ಲಿರುವ ಒಣಗಿದ ಕುಂಡಿಗೆಯಲ್ಲಿ ನೀರು ಸೇರಿದರೆ ಒಳಗಿಂದ ಫಂಗಸ್ ಬಂದು ಜೋಳ ಹಾಳಾಗುತ್ತದೆ’ ಎನ್ನುತ್ತಾರೆ ರೈತ ರವಿ ನಾಯ್ಕ ಕಲಕರಡಿ.

‘ರೈತರು ಯಾವ ಬೆಳೆ ಬೆಳೆದರೂ ಗೋಳು ತಪ್ಪಿದ್ದಲ್ಲ. ಅತಿವೃಷ್ಟಿ, ಅನಾವೃಷ್ಟಿಯ ನಡುವೆ ಕೃಷಿ ಮಾಡಲು ರೈತರು ಹಿಂದೇಟು ಹಾಕುವಂತಾಗಿದೆ. ಆದರೆ, ಕೃಷಿಯನ್ನೇ ನಂಬಿರುವ ನಮಗೆ ಬೇರೆ ಬದುಕು ಇಲ್ಲ. ಹವಾಮಾನ ವೈಪರೀತ್ಯದಿಂದ ರೈತ ಅತಂತ್ರನಾಗಿದ್ದಾನೆ’ ಎಂದು ಆನಂದ ಗೌಡ ಪ್ರತಿಕ್ರಿಯಿಸಿದರು.

‘ತಾಲ್ಲೂಕಿನಲ್ಲಿ 8000 ಹೆಕ್ಟೇರ್‌ನಲ್ಲಿ ಭತ್ತ ಹಾಗೂ 400 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳವನ್ನು ರೈತರು ಬೆಳೆದಿದ್ದಾರೆ. ವರದಾ ನದಿಗೆ ಪ್ರವಾಹ ಬಂದಾಗ ಕೆಲವು ಹಳ್ಳಿಗಳಲ್ಲಿ ಬೆಳೆ ಹಾನಿಯಾಗಿತ್ತು. ಅಗೆಮಡಿ ಸಹ ನಾಶವಾಗಿತ್ತು. ಹೊಸದಾಗಿ ಅಗೆ ಮಾಡಿಕೊಂಡು ರೈತರು ಮತ್ತೆ ನಾಟಿ ಮಾಡಿದ್ದರು. ಅವು ಇನ್ನು ಬೆಳವಣಿಗೆಯ ಹಂತದಲ್ಲಿವೆ. ಮೊದಲೇ ನಾಟಿ, ಬಿತ್ತನೆ ಮಾಡಿರುವಲ್ಲಿ ಬೆಳೆಗಳು ಬಂದಿವೆ. ಸ್ಥಳೀಯ ತಳಿಗಳನ್ನು ನಾಟಿ ಮಾಡಿದವರಿಗೆ ಹೆಚ್ಚು ಹಾನಿಯಾಗಿರಬಹುದು. ಅತಿವೃಷ್ಟಿಯಿಂದ 520 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿರುವ ಕುರಿತು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಮಧುಕರ ನಾಯ್ಕ ಹೇಳಿದರು.

ಪ್ರತಿಕ್ರಿಯಿಸಿ (+)