ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಹಾನಿ ಕೋಟಿ ಲೆಕ್ಕದಲ್ಲಿ, ಪರಿಹಾರ ಶೂನ್ಯ

11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆಗೆ ಕೊಳೆರೋಗ
Last Updated 16 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಶಿರಸಿ: ನಿರಂತರ ಮಳೆ, ಆಗಾಗ ಕಾಣಿಸಿಕೊಳ್ಳುವ ಬಿಸಿಲು ಅಡಿಕೆಗೆ ತಗುಲಿದ ಕೊಳೆರೋಗ ವೃದ್ಧಿಸುತ್ತಿದೆ. ಜಿಲ್ಲೆಯಲ್ಲಿ 11 ಸಾವಿರ ಹೆಕ್ಟೇರ್ ಗಿಂತ ಅಧಿಕ ಪ್ರದೇಶದಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ, ರೋಗದಿಂದ ಉಂಟಾಗುವ ಬೆಳೆ ನಷ್ಟಕ್ಕೆ ಪರಿಹಾರ ಸಿಗದಿರುವುದು ರೈತ ವಲಯದಲ್ಲಿ ಅಸಮಾಧಾನ ಉಂಟುಮಾಡಿದೆ.

ಜುಲೈನಲ್ಲಿ ಅಬ್ಬರಿಸಿದ್ದ ಮಳೆ ಹಲವು ಅನಾಹುತ ಸೃಷ್ಟಿಸಿತ್ತು. ತದನಂತರವೂ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ತೇವಾಂಶ ಭರಿತಗೊಂಡಿರುವ ತೋಟಗಳು ಕೊಳೆರೋಗಕ್ಕೆ ಸಿಲುಕಿವೆ. ಮರಗಳ ಬೆಳವಣಿಗೆಯನ್ನೂ ಕುಂಠಿತಗೊಳಿಸುವ ಅಪಾಯವೂ ಇದೆ.

ಜಿಲ್ಲೆಯಲ್ಲಿ 1,008 ಹೆಕ್ಟೇರ್ ಪ್ರದೇಶಲ್ಲಿ ಶೇ50ರಷ್ಟು ಫಸಲು ಕೊಳೆರೋಗದಿಂದ ಹಾನಿಗೀಡಾಗಿದೆ. 10,004 ಹೆ. ಪ್ರದೇಶದಲ್ಲಿ ಶೇ33ರಷ್ಟು ಫಸಲು ನಷ್ಟವಾಗಿದೆ. ಪ್ರಾಥಮಿಕ ಸಮೀಕ್ಷೆ ಪ್ರಕಾರ ಸುಮಾರು ₹ 24.65 ಕೋಟಿ ಮೌಲ್ಯದ ಬೆಳೆ ಹಾನಿಗೀಡಾಗಿರಬಹುದು ಎಂದು ತೋಟಗಾರಿಕಾ ಇಲಾಖೆ ಅಂದಾಜಿಸಿದೆ.

ಪ್ರತಿ ಎಕರೆಗೆ ಸರಾಸರಿ 10 ರಿಂದ 15 ಕ್ವಿಂಟಲ್‍‍ಗೂ ಹೆಚ್ಚು ಫಸಲು ನಷ್ಟ ಉಂಟಾಗುತ್ತಿದ್ದು ಲಕ್ಷಾಂತರ ಮೊತ್ತದ ರೈತರ ಆದಾಯ ಮಣ್ಣುಪಾಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಕೊಳೆರೋಗಕ್ಕೆ ಪರಿಹಾರ ಬಿಡುಗಡೆಗೆ ಅವಕಾಶ ಇಲ್ಲದಿರುವುದರಿಂದ ರೈತರು ಆರ್ಥಿಕವಾಗಿ ಹೈರಾಣಾಗುತ್ತಿದ್ದಾರೆ.

ಪ್ರತಿ ವರ್ಷ ಕೊಳೆರೋಗ ಕಾಣಿಸಿಕೊಳ್ಳುವುದು ಸಾಮಾನ್ಯದಂತಾಗಿದ್ದು ರೈತರ ಆದಾಯಕ್ಕೆ ಬಹದುಒಡ್ಡ ಏಟು ನೀಡುತ್ತಿದೆ. 2014ರಲ್ಲಿ ಒಮ್ಮೆ ಮಾತ್ರ ವಿಶೇಷ ಪರಿಹಾರ ದೊರಕಿದ್ದು ಬಿಟ್ಟರೆ ಈವರೆಗೆ ಪರಿಹಾರ ಸಿಕ್ಕಿಲ್ಲ.

‘ಅತಿಯಾದ ಮಳೆಯಿಂದ ಕೊಳೆರೋಗ ಉಂಟಾಗುತ್ತದೆ. ಅತಿವೃಷ್ಟಿಗೆ ತೋಟಕ್ಕೆ ಹಾನಿಯಾದರೆ ಮಾತ್ರ ಪರಿಹಾರ ನೀಡುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಆದರೆ, ಕೊಳೆರೋಗದಿಂದ ಲಕ್ಷಾಂತರ ಮೊತ್ತದ ನಷ್ಟ ಸಂಭವಿಸಿದರೂ ಬಿಡಿಗಾಸು ಪರಿಹಾರವೂ ಸಿಗುತ್ತಿಲ್ಲ’ ಎಂದು ಆಕ್ರೋಶ ಹೊರಹಾಕುತ್ತಾರೆ ರೈತ ಶ್ರೀಧರ ಹೆಗಡೆ ಸಾಯಿಮನೆ.

‘ಎನ್.ಡಿ.ಆರ್.ಎಫ್. ಮಾರ್ಗಸೂಚಿ ಅನ್ವಯ ಅತಿವೃಷ್ಟಿಯಿಂದ ತೋಟ ಮತ್ತು ಬೆಳೆಗೆ ಉಂಟಾದ ಹಾನಿಗೆ ಪ್ರತಿ ಹೆಕ್ಟೇರ್ ಗೆ ತಲಾ ₹28 ಸಾವಿರ ಪರಿಹಾರ ನೀಡಲಾಗುತ್ತಿದೆ. ಯಾವುದೇ ರೋಗಬಾಧೆಯಿಂದ ಉಂಟಾದ ಹಾನಿಗೆ ಪರಿಹಾರ ಕೊಡಲು ನಿಯಮದಲ್ಲಿ ಅವಕಾಶ ಇಲ್ಲ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ್.

‘ಕೊಳೆರೋಗದಿಂದ ಉಂಟಾಗುವ ಹಾನಿಗೆ ಪರಿಹಾರ ನೀಡುವ ಸಂಬಂಧ ಸರ್ಕಾರ ವಿಶೇಷ ನಿರ್ಣಯ ಕೈಗೊಂಡರಷ್ಟೆ ಸಾಧ್ಯವಿದೆ’ ಎಂದೂ ತಿಳಿಸಿದರು.

–––––––––––––––––––

ಸಿದ್ದರಾಮಯ್ಯ ಸರ್ಕಾರದಲ್ಲಿ ಅಡಿಕೆ ಕೊಳೆರೋಗಕ್ಕೆ ವಿಶೇಷ ಪರಿಹಾರ ಕೊಡಲಾಗಿತ್ತು. ಈಗಿನ ಸರ್ಕಾರ ಕೂಡಲೆ ಕೊಳೆರೋಗಕ್ಕೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಿ ರೈತರ ನೆರವಿಗೆ ಧಾವಿಸಲಿ.

ಭೀಮಣ್ಣ ನಾಯ್ಕ

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

--------------------------

ಅಂಕಿ–ಅಂಶ

10,004 ಹೆಕ್ಟೇರ್

ಶೇ.33ರಷ್ಟು ಕೊಳೆರೋಗ ಕಾಣಿಸಿಕೊಂಡಿರುವ ಪ್ರದೇಶ

1008 ಹೆ.

ಶೇ.50ರವರೆಗೆ ಕೊಳೆರೋಗ ಕಾಣಿಸಿಕೊಂಡ ಪ್ರದೇಶ

₹24.65 ಕೋಟಿ

ಅಂದಾಜು ಹಾನಿ ಪ್ರಮಾಣ

19,326

ಸಂತ್ರಸ್ತ ರೈತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT