ಮಂಗಳವಾರ, ಮಾರ್ಚ್ 28, 2023
31 °C
ಉತ್ತರ ಕನ್ನಡ ಜಿಲ್ಲೆಯಲ್ಲಿ ಅವೈಜ್ಞಾನಿಕ ಕ್ರಮ

ಐದು ವರ್ಷದಲ್ಲಿ ಲಕ್ಷ ಮರ ನಾಶ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕಳೆದ ಐದು ವರ್ಷಗಳಲ್ಲಿ ವಿವಿಧ ಕಾಮಗಾರಿಗಳ ಅನುಷ್ಠಾನದ ನೆಪದಲ್ಲಿ ಅರಣ್ಯ ಇಲಾಖೆ ಒಂದು ಲಕ್ಷಕ್ಕೂ ಹೆಚ್ಚು ಮರಗಳನ್ನು ನಾಶಪಡಿಸಿದೆ ಎಂದು ಆರೋಪಿಸಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ‘ಇಂತಹ ಅವೈಜ್ಞಾನಿಕ ಕ್ರಮದ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇನೆ’ ಎಂದರು.

ನಗರದ ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಕಚೇರಿಯಲ್ಲಿ ಬುಧವಾರ ಅರಣ್ಯ ಇಲಾಖೆ ಮರ ನಾಶಪಡಿಸಿದ ಚಿತ್ರಗಳನ್ನು ಬಿಡುಗಡೆಗೊಳಿಸಿದ ಅವರು, ‘ಉತ್ತರ ಕನ್ನಡದಲ್ಲಿ ಮೀಸಲು ಅರಣ್ಯವೇ ಹೆಚ್ಚಿದೆ. ಈ ಭಾಗದ ದಟ್ಟ ಅರಣ್ಯ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಬೆಲೆ ಬಾಳುವ ಮರಗಳನ್ನು ಕತ್ತರಿಸಲಾಗಿದೆ. ಅವುಗಳನ್ನು ಕೆರೆ ದಡಕ್ಕೆ ಹಾಕಿ, ಅದರ ಮೇಲೆ ಮಣ್ಣು ಮುಚ್ಚಿ, ಮರ ಕಡಿತದ ಸಾಕ್ಷ್ಯ ನಾಶಪಡಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಶಿರಸಿ, ಯಲ್ಲಾಪುರ, ಜೋಯಿಡಾ ಸೇರಿದಂತೆ ವಿವಿಧೆಡೆ ಸಾಗವಾನಿ, ಮತ್ತಿ, ಜಂಬೆ ಮುಂತಾದ ಬೆಲೆ ಬಾಳುವ ಮರಗಳನ್ನು ಕತ್ತರಿಸಿದ್ದಾರೆ. ಕರಾವಳಿ ಭಾಗದಲ್ಲೂ ಹಲವೆಡೆ ಇದೇ ಅವಾಂತರ ನಡೆದಿದೆ. ಅರಣ್ಯ ಪ್ರದೇಶದಲ್ಲಿ ನಡೆದ ಒಟ್ಟೂ ಕಾಮಗಾರಿ ಹಾಗೂ ಅರಣ್ಯ ಸಾಂದ್ರತೆ ಪ್ರಮಾಣ ಅನುಪಾತ ತುಲನೆ ಮಾಡಿದರೆ ಲಕ್ಷದಷ್ಟು ಮರಗಳು ನಾಶಗೊಂಡಿದ್ದು ದೃಢಪಟ್ಟಿದೆ’ ಎಂದರು.

‘ಪ್ರತಿ ವರ್ಷ ಕಾಡುಪ್ರಾಣಿಗಳ ಓಡಾಟ ನಿರ್ಬಂಧಿಸಲು ನೂರಾರು ಮೀಟರ್ ಅಗಳ ತೆಗೆಯಲಾಗುತ್ತಿದೆ. ಜಿಲ್ಲೆಯಾದ್ಯಂತ ಪ್ರತಿ ವರ್ಷ 300ರಷ್ಟು ಕೆರೆಗಳನ್ನು ಅರಣ್ಯ ಪ್ರದೇಶದಲ್ಲಿ ಗಿಡ, ಮರ ಇದ್ದ ಜಾಗದಲ್ಲಿಯೇ ತೆಗೆಯಲಾಗುತ್ತಿದೆ. ಇದರಿಂದಾಗಿ ಮರಗಳು ನಾಶಗೊಳ್ಳುತ್ತಿವೆ’  ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು