ಬುಧವಾರ, ಜೂನ್ 23, 2021
30 °C

ಚಂಡಮಾರುತ: ಮಾವು ಬೆಳೆಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ತೌತೆ’ ಚಂಡಮಾರುತಕ್ಕೆ ಸಿಲುಕಿ ಅಂಕೋಲಾ ತಾಲ್ಲೂಕಿನ ಹಲವೆಡೆ ತೋಟಗಾರಿಕೆ ಬೆಳೆಗಳಿಗೆ ಭಾರಿ ಹಾನಿಯಾಗಿದೆ. ಮಾವು, ಬಾಳೆ ಗಿಡ, ನುಗ್ಗೆ ಗಿಡಗಳು ಮುರಿದು ಕಾಯಿಗಳು ಉದುರಿವೆ.

ಶನಿವಾರ ರಾತ್ರಿಯಿಂದಲೇ ಆರಂಭವಾದ ಗಾಳಿಯ ಹೊಡೆತಕ್ಕೆ ಮಾವಿನ ಮರಗಳ ಕೆಳಗೆ ಸಾವಿರಾರು ಮಾವಿನ ಕಾಯಿಗಳು ರಾಶಿಯಾಗಿ ಬಿದ್ದಿದ್ದವು. ಕೋವಿಡ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಾದ ಕಾರಣ ಮಾವಿನ ಬೆಳೆಗೆ ವ್ಯಾಪಾರ ವಹಿವಾಟು ಕಡಿಮೆಯಾಗಿದೆ. ಬೆಳೆಗಾರರು, ಮರಗಳನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಖರೀದಿಗೆ ಬಾರದೇ ಮಾವಿನ ಕಾಯಿಗಳನ್ನು ಮರದಲ್ಲೇ ಬಿಟ್ಟಿದ್ದರು.

ಬೆಳಂಬಾರ, ಬಾಸಗೋಡ, ಬಾಳೆಗುಳಿ, ಬಡಗೇರಿ, ಅಲಗೇರಿ, ಬೇಳಾಬಂದರ ಮುಂತಾದೆಡೆ ಸಾವಿರಾರು ಬಲಿತ ಕಾಯಿಗಳು ಬಿದ್ದು ಒಡೆದಿವೆ. ಮಾರುಕಟ್ಟೆಯಲ್ಲಿ ಒಂದು ಕಾಯಿಗೆ ₹ 5ರಿಂದ ₹ 6 ಎಂದುಕೊಂಡರೂ ಸುಮಾರು ₹ 1.50 ಲಕ್ಷದಷ್ಟು ಹಾನಿಯಾಗಿದೆ. ಇದೇ ರೀತಿಯ ಪರಿಸ್ಥಿತಿ ಎಲ್ಲ ಗುತ್ತಿಗೆದಾರರದ್ದು, ಬೆಳೆಗಾರರದ್ದಾಗಿದೆ.

ಕೋವಿಡ್ ಎರಡನೇ ಅಲೆಗೂ ಮೊದಲು ಮಾವಿನಹಣ್ಣಿಗೆ ಬಹು ಬೇಡಿಕೆಯಿದ್ದು, ಮಾರುಕಟ್ಟೆಯಲ್ಲಿ ಉತ್ತಮ ದರವಿತ್ತು. ಆಗ ಮಾವಿನಕಾಯಿಗಳ ಅಭಾವವಿತ್ತು. ಹೀಗಾಗಿ ಗುತ್ತಿಗೆದಾರರು ಕಾಯಿಗಳು ಎಳೆದಿದ್ದಾಗಲೇ ಹೆಚ್ಚು ಬೆಲೆ ಕೊಟ್ಟು ಮರಗಳನ್ನು ಗುತ್ತಿಗೆ ಪಡೆದಿದ್ದರು. ಈಗ ಆ ಕಾಯಿಗಳು ಬೆಳೆದಿವೆ. ಲಾಕ್‌ಡೌನ್ ಪರಿಣಾಮ ಈಗಾಗಲೇ ಕಷ್ಟಪಟ್ಟು ಹಣ್ಣು ಮಾಡಿದ ಮಾವುಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೇ ಕಷ್ಟ ಅನುಭವಿಸಿದ್ದಾರೆ.

‘ಸಾಲ ಮಾಡಿ ಬೆಳೆದ ಕಲ್ಲಂಗಡಿ ಬೆಳೆಗೆ ಲಾಕ್‌ಡೌನ್‌ನಿಂದ ಮಾರುಕಟ್ಟೆ ಸಿಗದೇ ಹೊಲದಲ್ಲೇ ಹಾಳಾಯಿತು. ಈಗ ಅಲ್ಲಿ ಇಲ್ಲಿ ಸಾಲ ಮಾಡಿ ಮಾವಿನಕಾಯಿ ಗುತ್ತಿಗೆ ಪಡೆದಿದ್ದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳುವಷ್ಟರಲ್ಲಿ ಮತ್ತೆ ನಮ್ಮ ಬದುಕಿನ ಜೊತೆಗೆ ಪ್ರಕೃತಿ ಆಟವಾಡಿ ಬರೆ ಎಳೆದಿದೆ’ ಎಂದು ಬಡಗೇರಿಯ ಗುತ್ತಿಗೆದಾರ ಗಣೇಶ ಕುಸ್ಲು ಗೌಡ ಅಳಲು ತೋಡಿಕೊಳ್ಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು