ಸೋಮವಾರ, ಜೂನ್ 14, 2021
23 °C
ರಾಜ್ಯದ ಕರಾವಳಿಯಲ್ಲಿ ಪ್ರಭಾವದ ಸಂಭವ

14ರಂದು ಚಂಡಮಾರುತ, ಭಾರಿ ಮಳೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಅರಬ್ಬಿ ಸಮುದ್ರದ ವಾಯವ್ಯ ಭಾಗದಲ್ಲಿ ಮೇ 14ರಂದು ವಾಯುಭಾರ ಕುಸಿತವಾಗುವ ಸಾಧ್ಯತೆಯಿದೆ. ಮೇ 15ರಂದು ಅದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಂದು ಜಿಲ್ಲೆ ಒಳಗೊಂಡು ರಾಜ್ಯದ ಕರಾವಳಿಯಲ್ಲಿ ವೇಗವಾಗಿ ಗಾಳಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿರುವ ಮೀನುಗಾರರು ಮೇ 12ರ ರಾತ್ರಿಯೊಳಗೆ ದಡಕ್ಕೆ ಹಿಂದಿರುಗಬೇಕು. ಸಂಭಾವ್ಯ ಚಂಡಮಾರುತ ಎದುರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಇಲಾಖೆ ತಿಳಿಸಿದೆ ಎಂದು ಜಿಲ್ಲಾಡಳಿತದ ಹೇಳಿಕೆ ಹೇಳಿದೆ.

ಆ ಸಂದರ್ಭದಲ್ಲಿ ತುರ್ತು ಸೇವೆಗೆ ನಿಯಂತ್ರಣ ಕೊಠಡಿಯ 24x7 ಟೋಲ್ ಫ್ರೀ ಸಂಖ್ಯೆ 1077 ಅಥವಾ ವಾಟ್ಸ್‌ಆ್ಯಪ್: 94835 11015 ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ಗುಜರಾತ್ ಕರಾವಳಿಯ ಪ್ರದೇಶದಲ್ಲಿ ಅಂದು ಬೆಳಿಗ್ಗೆ ವಾಯುಭಾರ ಕುಸಿತವಾದರೆ ಚಂಡಮಾರುತವು ಓಮನ್ ಕರಾವಳಿ, ಪಾಕಿಸ್ತಾನ ಹಾಗೂ ಗುಜರಾತ್‌ನ ಕಛ್ ಮೂಲಕ ಮೇ 20ರಂದು ಸಾಗುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಅರಬ್ಬಿ ಸಮುದ್ರವು ಪ್ರಕ್ಷುಬ್ಧವಾಗಲಿದ್ದು, ಮಹಾರಾಷ್ಟ್ರ, ಕರ್ನಾಟಕದ ಕರಾವಳಿ, ಕೇರಳ, ಲಕ್ಷದ್ವೀಪ ಮತ್ತು ತಮಿಳುನಾಡಿನ ಕೆಲವೆಡೆ ಭಾರಿ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಇದು ದೇಶದಲ್ಲಿ ಈ ವರ್ಷದ ಮೊದಲ ಚಂಡಮಾರುತವಾಗಲಿದ್ದು, ಮಯನ್ಮಾರ್ ದೇಶವು ಇದಕ್ಕೆ ‘ಟೌಕ್ಟೇ’ (ಹಲ್ಲಿ) ಎಂದು ಹೆಸರಿಟ್ಟಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು