ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿ.ಜೆ.ಪಿ ಧೋರಣೆಯಿಂದ ಸಮುದಾಯಕ್ಕೆ ನಿರಾಸೆ’

Last Updated 30 ನವೆಂಬರ್ 2020, 14:18 IST
ಅಕ್ಷರ ಗಾತ್ರ

ಕಾರವಾರ: ‘ದೈವಜ್ಞ ಬ್ರಾಹ್ಮಣ ಸಮಾಜವು ವಿಶ್ವಕರ್ಮ ಸಮಾಜದ ಮೀಸಲಾತಿಯನ್ನು ಕಸಿದುಕೊಳ್ಳುತ್ತಿದೆ’ ಎಂಬ ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಹೇಳಿಕೆಯನ್ನು ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘ ಖಂಡಿಸಿದೆ.

ಈ ಬಗ್ಗೆ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಮರಾವ್ ವಿ.ರಾಯ್ಕರ್, ‘ಸಹೋದರರ ಹಾಗೆ ಬಾಳುತ್ತಿರುವ ವಿಶ್ವಕರ್ಮ ಸಮಾಜ ಮತ್ತು ದೈವಜ್ಞ ಬ್ರಾಹ್ಮಣ ಸಮಾಜದ ಸಂಬಂಧಗಳಿಗೆ ನಂಜುಂಡಿ ಅವರು ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ’ ಎಂದು ದೂರಿದರು.

‘ವಿಶ್ವಕರ್ಮ ಸಮಾಜ ಮತ್ತು ದೈವಜ್ಞ ಬ್ರಾಹ್ಮಣ ಸಮುದಾಯಕ್ಕೆ ಸಂಬಂಧವಿಲ್ಲ. ದೈವಜ್ಞರನ್ನು ಮೀಸಲಾತಿಯಿಂದ ಹೊರಗಿಡಬೇಕು ಎಂದು ನಂಜುಂಡಿ ಹೇಳಿದ್ದರು. ಈ ಹೇಳಿಕೆಯನ್ನು ಖಂಡಿಸಿ, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ, ಬಿ.ಜೆ.ಪಿ ರಾಜ್ಯ ಘಟಕದ ಅಧ್ಯಕ್ಷರು, ವಿಧಾನಸಭೆಯ ಸಭಾಧ್ಯಕ್ಷರಿಗೆ ಮನವಿ ಮಾಡಲಾಗಿತ್ತು. ಆದರೆ, ಈವರೆಗೆ ಯಾವುದೇ ಕ್ರಮವಾಗಿಲ್ಲ. ಇದರಿಂದ ಸಮಾಜವು ಬೇಸರಗೊಂಡಿದ್ದು, ಈ ಪಕ್ಷದ ಜೊತೆಗೆ ಯಾಕೆ ಗುರುತಿಸಿಕೊಳ್ಳಬೇಕು ಎಂದು ರಾಜ್ಯದಾದ್ಯಂತ ಕೂಗು ಪ್ರಾರಂಭವಾಗಿದೆ’ ಎಂದು ಹೇಳಿದರು.

‘ಮೂರು ವಿಧಾನಸಭೆ ಚುನಾವಣೆಗಳಿಂದಲೂ ದೈವಜ್ಞ ಬ್ರಾಹ್ಮಣ ಸಮಾಜಕ್ಕೆ ರಾಜ್ಯದಲ್ಲಿ ಎರಡು ಟಿಕೆಟ್ ನೀಡುವಂತೆ ಕೋರಲಾಗಿತ್ತು. ಆಗ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ಅದೇ ರೀತಿ, ನಿಗಮ ಅಥವಾ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡುವುದಾಗಿ ತಿಳಿಸಿದರು. ಆದರೆ, ಇವ್ಯಾವುವೂ ಆಗಲಿಲ್ಲ. ಬಿ.ಜೆ.ಪಿ.ಯ ಈ ಧೋರಣೆಯಿಂದ ಸಮುದಾಯಕ್ಕೆ ನಿರಾಸೆಯಾಗಿದೆ’ ಎಂದರು.

ನಿಗಮ ಸ್ಥಾಪಿಸಿ:

‘ಬಂಗಾರದ ದರವು ಭಾರಿ ಏರಿಕೆಯಾಗಿದ್ದರಿಂದ ದೈವಜ್ಞ ಸಮುದಾಯಕ್ಕೆ ಕೆಲಸವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿದೆ. ಹಾಗಾಗಿ ಸಮುದಾಯದ ಅಭಿವೃದ್ಧಿಗಾಗಿ ದೈವಜ್ಞ ಅಭಿವೃದ್ಧಿ ನಿಗಮ ರಚಿಸಬೇಕು’ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಗಂಗಾಧರ ಭಟ್, ನಯನಾ ನೀಲಾವರ, ವಿಜಯ ವೆರ್ಣೇಕರ, ವೆಂಕಟೇಶ ರಾಯ್ಕರ, ಜನಾರ್ದನ ಶೇಟ್, ವಿವೇಕ ಬಾಯ್ಕೇರಿಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT