ಬುಧವಾರ, ಜನವರಿ 22, 2020
16 °C
ಮುಗಿಲುಮುಟ್ಟಿದ ಟಿಬೆಟನ್ನರ ಸಂಭ್ರಮ

ಮುಂಡಗೋಡಿನಲ್ಲಿ ದಲೈಲಾಮಾಗೆ ಅದ್ಧೂರಿ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ಎರಡು ವರ್ಷಗಳ ಬಿಡುವಿನ ನಂತರ, ತಾಲ್ಲೂಕಿನ ಟಿಬೆಟನ್‌ ಕಾಲೊನಿಗೆ 38ನೇ ಬಾರಿಗೆ ಆಗಮಿಸಿದ 14ನೇ ದಲೈಲಾಮಾ ಅವರಿಗೆ, ಬಿಕ್ಕುಗಳು, ಟಿಬೆಟನ್‌ರು, ವಿದೇಶಿಗರು ಅದ್ದೂರಿ ಸ್ವಾಗತ ಕೋರಿದರು.

ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ನಿರಾಶ್ರಿತರ ನೆಲೆಯಲ್ಲಿ ಉತ್ಸಾಹ ಚಿಮ್ಮುತ್ತಿತ್ತು. ಬೆಳಿಗ್ಗೆಯಿಂದ ರಸ್ತೆಯ ಇಕ್ಕೆಲಗಳಲ್ಲಿ ಗುಂಪು ಗುಂಪಾಗಿ ಕುಳಿತಿದ್ದ ಬಿಕ್ಕುಗಳ ಮೊಗದಲ್ಲಿ ಮಂದಹಾಸ ಮೂಡಿತ್ತು. ಪಟ್ಟಣದ ಅಮ್ಮಾಜಿ ಕೆರೆಯಿಂದ ಲಾಮಾ ಕ್ಯಾಂಪ್‌ ನಂ.6ರವರೆಗೆ ನಿಂತಿದ್ದ, ಹಳದಿ, ಕಡುಗೆಂಪು ಬಣ್ಣದ ನಿಲುವಂಗಿಯ ಬಿಕ್ಷು, ಬಿಕ್ಷುಣಿಯರಲ್ಲಿ ಗುರುವಿಗಾಗಿ ಕಾಯುವ ಕುತೂಹಲ ಮನೆ ಮಾಡಿತ್ತು. ಟಿಬೆಟನ್‌ ಸಂಪ್ರದಾಯದಂತೆ ವೇಷಭೂಷಣ ತೊಟ್ಟಿದ್ದ ಮಹಿಳೆಯರು, ಪುರುಷರು ಹಾಗೂ ಪಾಶ್ಚಿಮಾತ್ಯ ಉಡುಗೆ ಧರಿಸಿದ್ದ ಯುವಸಮೂಹ ಬೌದ್ಧ ಗುರುವಿನ ಸ್ವಾಗತಕ್ಕಾಗಿ ಸರದಿಯಲ್ಲಿ ನಿಂತಿದ್ದರು.

ಕೈಯಲ್ಲಿ ಕೊಳಲು, ಡ್ರಮ್‌ ಹಿಡಿದಿದ್ದ ಸೆಂಟ್ರಲ್ ಟಿಬೆಟನ್ ವಿದ್ಯಾಲಯದ ವಿದ್ಯಾರ್ಥಿಗಳು ವಾದ್ಯ ನುಡಿಸುತ್ತ ಸ್ವಾಗತ ಕೋರಿದರು. ಗಾಲಿಕುರ್ಚಿಯಲ್ಲಿ ಕುಳಿತಿದ್ದ ವೃದ್ಧ ಟಿಬೆಟನ್‌ರು, ಬೆರಳೆಣಿಕೆಯಷ್ಟಿದ್ದ ವಿದೇಶಿ ಬೌದ್ಧ ಅನುಯಾಯಿಗಳು ಧರ್ಮಗುರುವಿಗೆ ನಮಸ್ಕರಿಸಿದರು. ಕೈಯಲ್ಲಿ ಬಿಳಿ ರುಮಾಲು, ಧೂಪದ ಕಡ್ಡಿ, ಹೂಗುಚ್ಛ ಹಿಡಿದು ಎಲ್ಲರೂ ಗುರುವಿಗೆ ತಲೆಬಾಗಿದರು.

ಮಾರ್ಗದುದ್ದಕ್ಕೂ ಇಡಲಾಗಿದ್ದ ಧೂಪದ ಕಡ್ಡಿಗಳ ಹೊಗೆ ದಟ್ಟವಾಗಿ ಆವರಿಸುತ್ತಿತ್ತು. ಪೊಲೀಸ ವಾಹನಗಳು ಒಂದರ ಹಿಂದೆ ಒಂದರಂತೆ ಶಬ್ದ ಮಾಡುತ್ತ ಬರುತ್ತಿದ್ದರೆ, ವಾಹನಗಳ ಸಾಲಿನಲ್ಲಿ ವಿಶೇಷವಾಗಿ ಕಾಣುತ್ತಿದ್ದ ‘ಬುಲೆಟ್‌ಪ್ರೂಫ್‌’ ಕಾರಿನ ಗಾಜಿನ ಅಂಚಿನಿಂದ, ದಲೈಲಾಮಾ ನೆರೆದವರತ್ತ ಕೈಬೀಸಿದರು. ‘ಬೌದ್ಧಗುರು’ವಿನ ದರ್ಶನ ಮಾಡಿಕೊಂಡವರ ಮೊಗದಲ್ಲಿ ಧನ್ಯತಾ ಭಾವನೆ ಮೂಡಿತ್ತು.

ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶದಿಂದ ಬಂದಿದ್ದ ಟಿಬೆಟನ್‌ರು ಸಾಂಪ್ರದಾಯಿಕ ಉಡುಗೆಯಲ್ಲಿ ಆಕರ್ಷಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು