ಭಾನುವಾರ, ಸೆಪ್ಟೆಂಬರ್ 27, 2020
26 °C
ಜಲಾನಯನ ಪ್ರದೇಶಗಳಲ್ಲಿ ಮುಂದುವರಿದ ಉತ್ತಮ ಮಳೆ

ಉತ್ತರ ಕನ್ನಡ | ಮತ್ತೆ ಗರಿಷ್ಠ ಮಟ್ಟದತ್ತ ಜಲಾಶಯಗಳು; ಒಳಹರಿವು ಭಾರಿ ಏರಿಕೆ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯ ಘಟ್ಟ ಪ್ರದೇಶದಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯು ನದಿ, ಹಳ್ಳ ಕೊಳ್ಳಗಳಲ್ಲಿ ಹರಿವನ್ನು ಹೆಚ್ಚಿಸಿದೆ. ಇದರ ಪರಿಣಾಮ ಜಿಲ್ಲೆಯ ಎಲ್ಲ ಜಲಾಶಯಗಳಿಗೆ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ನೀರಿನ ಮಟ್ಟವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ವಿದ್ಯುತ್ ಉತ್ಪಾದನೆಯ ಕಾರಣದಿಂದ ‘ಶಕ್ತಿಯುತ ನದಿ’ ಎಂದೇ ಪ್ರಸಿದ್ಧವಾಗಿರುವ ಕಾಳಿಯ ಎಲ್ಲ ಐದು ಜಲಾಶಯಗಳಲ್ಲಿ ನೀರಿನ ಸಂಗ್ರಹ ಗರಿಷ್ಠ ಮಟ್ಟದತ್ತ ಸಾಗುತ್ತಿದೆ. ರಾಜ್ಯದ ಬೃಹತ್ ಜಲಾಶಯಗಳಲ್ಲಿ ಒಂದಾಗಿರುವ ಸೂಪಾಕ್ಕೆ ಗುರುವಾರ 62,565 ಕ್ಯುಸೆಕ್ ಒಳಹರಿವು ದಾಖಲಾಗಿತ್ತು. ಇದರ ಪರಿಣಾಮ ಜಲಾಶಯದಲ್ಲಿ ಒಂದೇ ದಿನ 2.2 ಮೀಟರ್‌ಗಳಷ್ಟು ನೀರು ಸಂಗ್ರಹವಾಯಿತು.

ಈ ಜಲಾಶಯಕ್ಕೆ ಬುಧವಾರ 38,940 ಕ್ಯುಸೆಕ್ ಒಳಹರಿವಿತ್ತು. ಅದರ ಕೆಳಭಾಗದಲ್ಲಿರುವ ಕದ್ರಾ ಜಲಾಶಯವು ಈಗಾಗಲೇ ಭರ್ತಿಯಾಗಿದೆ. ಸೂಪಾ ಜಲಾಶಯವು ಭರ್ತಿಯಾಗಲು ಇನ್ನೂ 25.9 ಮೀಟರ್‌ಗಳಷ್ಟು ನೀರು ಸಂಗ್ರಹವಾಗಬೇಕಿದೆ. ಹಾಗಾಗಿ ಜಲಾಶಯದಿಂದ ನೀರಿನ ಹೊರಹರಿವನ್ನು ನಿಲ್ಲಿಸಲಾಗಿದೆ. 

ಈ ಜಲಾಶಯದಲ್ಲಿ 1,057 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ 147.50 ಟಿ.ಎಂ.ಸಿ ಅಡಿ ನೀರು ಸಂಗ್ರಹವಾಗುತ್ತದೆ. ಕಳೆದ ವರ್ಷ ಇದೇ ದಿನಾಂಕದಂದು (ಆ.6) ಜಲಾಶಯದಲ್ಲಿ 550 ಮೀಟರ್‌ಗಳಷ್ಟು ನೀರು ಸಂಗ್ರಹವಾಗಿತ್ತು. ಈ ಬಾರಿ 14.10 ಮೀಟರ್‌ಗಳಷ್ಟು ಕಡಿಮೆ ನೀರು ಶೇಖರಣೆಯಾಗಿದೆ.

ಜಲಾಶಯದ ಹಿನ್ನೀರಿನ ಪ್ರದೇಶವಾದ ಡಿಗ್ಗಿ, ರಾಮನಗರ, ಕುಂಡಲ್ ಪ್ರದೇಶದಲ್ಲಿ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಹಾಗಾಗಿ ಜಲಾಶಯಕ್ಕೆ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದ್ದರಿಂದ ಈ ವರ್ಷವೂ ಜಲಾಶಯದ ಗರಿಷ್ಠ ಮಟ್ಟದಲ್ಲಿ ನೀರು ತುಂಬಬಹುದು. ಇದರಿಂದ ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆಯನ್ನು ಸಮರ್ಪಕವಾಗಿ ನಿಭಾಯಿಸಬಹುದು ಎನ್ನುತ್ತಾರೆ ರಾಜ್ಯ ವಿದ್ಯುತ್ ‍ಪ್ರಸರಣ ನಿಗಮದ ಅಧಿಕಾರಿಗಳು.

ಭಾರಿ ಒಳಹರಿವು: ಕಾಳಿ ನದಿಯ ಉಪನದಿಗಳಾದ ಪಾಂಡ್ರಿ, ನಾಶಿ ಹಾಗೂ ಕಾನೇರಿ ನದಿಗಳು ಭರ್ತಿಯಾಗಿ ಹರಿಯುತ್ತಿದ್ದು, ಕೆಲವೆಡೆ ಅಪಾಯದ ಮಟ್ಟವನ್ನು ಮೀರಿವೆ. ಇದೇರೀತಿ, ಸೂಪಾದ ಕೆಳಭಾಗದಲ್ಲಿರುವ ಕೊಡಸಳ್ಳಿ ಜಲಾಶಯಕ್ಕೆ ಗುರುವಾರ 43,675 ಕ್ಯುಸೆಕ್, ತಟ್ಟಿಹಳ್ಳ ಜಲಾಶಯಕ್ಕೆ 16,492 ಕ್ಯುಸೆಕ್, ಬೊಮ್ಮನಹಳ್ಳಿ ಜಲಾಶಯಕ್ಕೆ 12,740 ಕ್ಯುಸೆಕ್ ಒಳಹರಿವು ಹಾಗೂ 6,261 ಕ್ಯುಸೆಕ್ ಹೊರ ಹರಿವು ಇತ್ತು. ಇವುಗಳ ಜಲಾನಯನ ಪ್ರದೇಶದಲ್ಲಿ ಮಳೆ ಬಿರುಸಾಗಿ ಮುಂದುವರಿದರೆ ಈ ವರ್ಷವೂ ಜಿಲ್ಲೆಯ ಜಲಾಶಯಗಳು ಶೀಘ್ರವೇ ಮೈದುಂಬಿಕೊಳ್ಳಲಿವೆ.

ಕದ್ರಾದಿಂದ ನದಿಗೆ ನೀರು: ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯವು ಈಗಾಗಲೇ ಭರ್ತಿಯಾಗಿದೆ. ಜಲಾಶಯಕ್ಕೆ ಗುರುವಾರ 58 ಸಾವಿರ ಕ್ಯುಸೆಕ್ ಒಳಹರಿವು ಇತ್ತು. ಹಾಗಾಗಿ ಆರು ಕ್ರೆಸ್ಟ್‌ ಗೇಟ್‌ಗಳಿಂದ ಅಷ್ಟೇ ಪ್ರಮಾಣದಲ್ಲಿ ಕಾಳಿ ನದಿಗೆ ನೀರನ್ನು ಹರಿಸಲಾಯಿತು.

ಹೊನ್ನಾವರ ತಾಲ್ಲೂಕಿನಲ್ಲಿ ಶರಾವತಿ ನದಿಗೆ ನಿರ್ಮಿಸಲಾಗಿರುವ ಗೇರುಸೊಪ‍್ಪ ಜಲಾಶಯವು ಭರ್ತಿಯಾಗಲು ಕೇವಲ 3.18 ಮೀಟರ್‌ ಬಾಕಿಯಿದೆ. ಜಲಾಶಯದಲ್ಲಿ 9,607 ಕ್ಯುಸೆಕ್ ಒಳಹರಿವು ಹಾಗೂ 11,987 ಕ್ಯುಸೆಕ್ ಹೊರಹರಿವು ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು