ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಗೆ ಕೊರೊನಾದ ಕಾರ್ಮೋಡ

ಗಳಿಕೆಯಿಲ್ಲದೇ ದಿಕ್ಕು ತೋಚದಂತಾದ ನಾಟಕ ಕಂಪನಿಗಳು: ತೆರೆಯ ಹಿಂದಿನ ಕತ್ತಲೆಯ ಬಾಳು
Last Updated 15 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಶಿರಸಿ: ಕೊರೊನಾ ವೈರಸ್ ಸೋಂಕಿನ ಭೀತಿಗೆ ವೃತ್ತಿ ರಂಗಭೂಮಿಯ ಕಲಾವಿದರು ಅಕ್ಷರಶಃ ನಲುಗಿದ್ದಾರೆ. ಮಾರಿಕಾಂಬಾ ಜಾತ್ರೆಯ ಪ್ರಯುಕ್ತ ನಗರದಲ್ಲಿ ಬೀಡುಬಿಟ್ಟಿರುವ ನಾಟ್ಯ ಸಂಘಗಳು ಕೈಗೆ ಕೆಲಸವಿಲ್ಲದೇ, ಊರಿಗೆ ತೆರಳಲು ಹಣವಿಲ್ಲದೇ ದಿಕ್ಕುತೋಚದಂತಾಗಿವೆ.

ಎರಡು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆಯಲ್ಲಿ ಕನಿಷ್ಠ ಮೂರು ನಾಟಕ ಕಂಪನಿಗಳು ಟೆಂಟ್ ಹಾಕುತ್ತವೆ. ಮಾರ್ಚ್‌ನಲ್ಲಿ ಬರುವ ತಂಡಗಳು ಮತ್ತೆ ಟೆಂಟ್ ಕೀಳುವುದು ಮಳೆರಾಯ ಭುವಿಯೆಡೆಗೆ ಮುಖ ಮಾಡಿದ ಮೇಲೆಯೇ. ಈ ಬಾರಿಯ ಜಾತ್ರೆಗೆ, ಗುರು ಕುಮಾರೇಶ್ವರ ನಾಟ್ಯ ಸಂಘ ಹಾನಗಲ್, ಹುಚ್ಚೇಶ್ವರ ನಾಟ್ಯ ಸಂಘ ಕಮತಗಿ, ಮಲ್ಲಿಕಾರ್ಜುನ ನಾಟ್ಯ ಸಂಘ ಕಲ್ಲೂರು, ವಿಶ್ವಜ್ಯೋತಿ ಪಂಚಾಕ್ಷರಿ ನಾಟ್ಯ ಸಂಘ ಜೇವರ್ಗಿ, ಕೆ.ಬಿ.ಆರ್. ಡ್ರಾಮಾ ಕಂಪನಿ ದಾವಣಗೆರೆ ಸೇರಿ ಒಟ್ಟು ಐದು ನಾಟಕ ಕಂಪನಿಗಳು ಬಂದಿವೆ.

ಪ್ರದರ್ಶನ ಆರಂಭಿಸಿ ಕೇವಲ 10 ದಿನಗಳಾಗುವಷ್ಟರಲ್ಲಿ, ಕೊರೊನಾ ಕಾರ್ಮೋಡ ಅವರ ನಿತ್ಯದ ದುಡಿಮೆಯನ್ನು ಕಸಿದುಕೊಂಡಿದೆ. ಸರ್ಕಾರದ ಆದೇಶದಂತೆ ಶುಕ್ರವಾರದಿಂದ, ಎಲ್ಲ ಐದು ಕಡೆಗಳಲ್ಲಿ ಪ್ರದರ್ಶನಗಳು ಸ್ಥಗಿತಗೊಂಡಿವೆ. ಪರಿಣಾಮವಾಗಿ ಕಲಾವಿದರು, ತಾಂತ್ರಿಕ ಪರಿಣಿತರನ್ನೊಳಗೊಂಡು 250ಕ್ಕೂ ಹೆಚ್ಚು ಮಂದಿ, ಪ್ರೇಕ್ಷಕರಿಲ್ಲದ ಖಾಲಿ ಟೆಂಟ್‌ನ ಒಳ–ಹೊರಗೆ ಪರಸ್ಪರ ಕಷ್ಟ–ಸುಖ ಹಂಚಿಕೊಳ್ಳುತ್ತ, ಆತಂಕದ ಛಾಯೆಯಲ್ಲಿ ದಿನ ಕಳೆಯುತ್ತಿದ್ದಾರೆ.

‘ಈ ಊರಿನಲ್ಲಿ ಜನರು ನಾಟಕ ನೋಡಲು ಬರುವುದು ಜಾತ್ರೆಯ ಸಡಗರ ಮುಗಿದ ನಂತರವೇ. ಜನರು ಕೊಟ್ಟ ಹಣದಲ್ಲಿ ನಮ್ಮ ಜೀವನ ನಡೆಯಬೇಕು. ಪ್ರೇಕ್ಷಕರು ಬರುವ ನಿರೀಕ್ಷೆ ಗರಿಗೆದರುವಷ್ಟರಲ್ಲಿ ಕೊರೊನಾದ ಗುಮ್ಮ ಧುತ್ತನೆ ಆವರಿಸಿದೆ. ಪ್ರತಿ ನಾಟಕದ ಕಂಪನಿಗೂ ಒಮ್ಮೆ ಟೆಂಟ್ ಹಾಕಿ, ನಾಟಕ ಪ್ರಾರಂಭಿಸಲು ₹ 4–5 ಲಕ್ಷ ವೆಚ್ಚವಾಗುತ್ತದೆ. ಪ್ರತಿದಿನ ₹ 18ಸಾವಿರ ಮಿಕ್ಕಿ ಹಣ ಸಂಗ್ರಹವಾದರೆ ಮಾತ್ರ ಲಾಭ’ ಎಂದು ವೃತ್ತಿರಂಗಭೂಮಿ ಮಾಲೀಕರ ಸಂಘದ ಅಧ್ಯಕ್ಷ ಚಿಂದೋಡಿ ಶ್ರೀಕಂಠಯ್ಯ ಹೇಳುವಾಗ, ಅವರ ಧ್ವನಿ ಉಡುಗಿತ್ತು.

‘ಪ್ರದರ್ಶನ ರದ್ದಾಗಿದೆ, ಇಲ್ಲಿ ಕೇಳುವವರಿಲ್ಲ. ಮುಂದೆ ಹೋಗಲು ದಾರಿ ಗೊತ್ತಿಲ್ಲ. ಈ ಕ್ಯಾಂಪ್ ಬಿಟ್ಟು ಹೋದರೆ, ಮತ್ತೊಂದು ಕಡೆ ಕ್ಯಾಂಪ್ ಹಾಕಲು ಹಣವಿಲ್ಲ. ಕೈ ಖಾಲಿಯಾಗಿದೆ. ನಮಗೆ ಸಾಲ ಪಡೆಯುವುದು ಸುಲಭ, ಅದೇ ಉಳಿತಾಯ ಮಾಡುವುದು ಕಷ್ಟ’ ಎಂದು ಮಾರ್ಮಿಕವಾಗಿ ಹೇಳಿದ ಅವರಿಗೆ, ಒಂದು ವಾರದ ನಂತರ ಮತ್ತೆ ಅನುಮತಿ ದೊರೆತು ಪ್ರದರ್ಶನ ಪ್ರಾರಂಭಿಸುವ ಭರವಸೆ.

’ಎಂಟು ದಿನಗಳ ಮೊದಲು ಕಲಾವಿದರಿಗೆ ಪ್ರದರ್ಶನ ಮುಗಿಸುವ ಸೂಚನೆ ನೀಡಿದರೆ, ಅವರು ಒಂದಿಷ್ಟು ಕಾಸನ್ನಾದರೂ ಉಳಿಸಿಕೊಳ್ಳುತ್ತಾರೆ. ಏಕಾಏಕಿ ಪ್ರದರ್ಶನ ನಿಂತಿದೆ. ಊರಿಗೆ ಹೋಗಲು ಸಹ ಯಾರ ಬಳಿಯೂ ದುಡ್ಡಿಲ್ಲ. ಸರ್ಕಾರದ ಆದೇಶವನ್ನು ನಾವು ಪಾಲಿಸಲೇ ಬೇಕು. ಬಣ್ಣದ ಬದುಕಿನ ಹಿಂದಿನ ಕಪ್ಪು ಸತ್ಯ ಇದು. ನಷ್ಟದಲ್ಲಿದ್ದ ನಮಗೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ’ ಎಂದು ಕಮತಗಿ ಕಂಪನಿಯ ಮುಖ್ಯಸ್ಥ ಸಿದ್ದು ಬಿಳಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT