ಶನಿವಾರ, ಡಿಸೆಂಬರ್ 7, 2019
22 °C
ದಸರಾ ಕ್ರೀಡಾಕೂಟ

‘ಪ್ರತಿಭಾ ಕಾರಂಜಿಯಷ್ಟೇ ಕ್ರೀಡೆಯನ್ನೂ ಪ್ರೋತ್ಸಾಹಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ದಸರಾ ಕ್ರೀಡಾಕೂಟದ ಅಂಗವಾಗಿ ಇಲ್ಲಿನ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ 800ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.

ವೈಯಕ್ತಿಕ ಆಟಗಳಾದ ಓಟ, ಗುಂಡು ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ, ಚಕ್ರ ಎಸೆತ,ಭರ್ಚಿ ಎಸೆತ ಹಾಗೂ ಗುಂಪು ಆಟಗಳಾದ ಕಬಡ್ಡಿ, ವಾಲಿಬಾಲ್, ಕೊಕ್ಕೊ, ಬಾಲ್ ಬ್ಯಾಡ್ಮಿಂಟನ್, ಫುಟ್‌ಬಾಲ್, ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆದವು. ನಗರಸಭೆಯ ಒಳಾಂಗಣ ಕ್ರೀಡಾಂಗಣ, ಅರಣ್ಯ ಕಾಲೇಜಿನ ಮೈದಾನ ಹಾಗೂ ಅರಣ್ಯ ಸಮುದಾಯ ಭವನದಲ್ಲಿ ವಿವಿಧ ಸ್ಪರ್ಧೆಗಳು ನಡೆದವು.

ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವ್ಯಕ್ತಿಗೆ ಶಿಕ್ಷಣ ಎಷ್ಟು ಮುಖ್ಯವೋ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದೂ ಅಷ್ಟೇ ಮುಖ್ಯ. ಹಾಗಾಗಿ ಕ್ರೀಡೆಯಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು. ಪ್ರತಿ ತಾಲ್ಲೂಕಿಗೆ ಒಂದು ಕ್ರೀಡಾಂಗಣ ಹಾಗೂ ಕ್ರೀಡಾ ತರಬೇತುದಾರರು ಬೇಕು. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಪ್ರತಿಭಾ ಕಾರಂಜಿಗೆ ಪಾಲಕರು ಪ್ರೋತ್ಸಾಹ ನೀಡಿದಂತೆ ಕ್ರೀಡಾ ಸ್ಪರ್ಧೆಗಳಿಗೂ ಸಹಕಾರ ನೀಡಿದರೆ ಉತ್ತಮ ಕ್ರೀಡಾ ಪ್ರತಿಭೆ ಹೊರಬರಲು ಸಾಧ್ಯ ಎಂದರು.

ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರು, ಪ್ರತಿಯೊಬ್ಬರೂ ಕ್ರೀಡಾ ಮನೋಭಾವನೆಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಿ.ಎನ್.ಹೆಗಡೆ, ಉಷಾ ಹೆಗಡೆ, ಬಸವರಾಜ ದೊಡ್ಮನಿ, ಪ್ರಭಾವತಿ ಗೌಡ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎಫ್.ಜಿ‌.ಚಿನ್ನಣ್ಣನವರ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ ಆರ್‌, ದೈಹಿಕ ಶಿಕ್ಷಣ ಪರಿವೀಕ್ಷಕ ವಸಂತ ಭಂಡಾರಿ ಇದ್ದರು.

ಪ್ರಕಾಶ ರೇವಣಕರ ಸ್ವಾಗತಿಸಿದರು. ಕಿರಣ ನಾಯ್ಕ ನಿರೂಪಿಸಿದರು. ಅಶೋಕ ಭಜಂತ್ರಿ ವಂದಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು