ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಭತ್ತ ಸಂಗ್ರಹಣೆ ಆರಂಭಿಸಲು ಅಕ್ಕಿ ಗಿರಣಿ ಮಾಲೀಕರಿಗೆ ಸೂಚನೆ

Last Updated 11 ಜನವರಿ 2022, 15:37 IST
ಅಕ್ಷರ ಗಾತ್ರ

ಕಾರವಾರ: ‘ಬೆಂಬಲ ಬೆಲೆ ಯೋಜನೆಯಡಿಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ರೈತರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಭತ್ತವು ಹೆಚ್ಚು ಸಂಗ್ರಹವಾಗುವ ಸಾಧ್ಯತೆಯಿದೆ. ಆದ್ದರಿಂದ ನೋಂದಾಯಿತ ಅಕ್ಕಿ ಗಿರಣಿ ಮಾಲೀಕರು, ಖರೀದಿ ಏಜೆನ್ಸಿಯಾದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಬೆಂಬಲ ಬೆಲೆ ಯೋಜನೆಯಡಿ ಸಂಗ್ರಹವಾದ ಭತ್ತದ ಹಲ್ಲಿಂಗ್ ಕುರಿತುಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಅಕ್ಕಿ ಗಿರಣಿ ಮಾಲೀಕರೊಂದಿಗೆ ಹಮ್ಮಿಕೊಂಡ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬ್ಯಾಂಕ್ ಖಾತ್ರಿ ಅಥವಾ ಅಡಮಾನ ಪತ್ರದ ಮೂಲಕ ಕರಾರು ಒಪ್ಪಂದ ಪತ್ರ ಮಾಡಿಕೊಳ್ಳಬೇಕು. ನಿಗದಿತ ಗುಣಮಟ್ಟದ ಭತ್ತ ಸಂಗ್ರಹಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು’ ಎಂದು ತಿಳಿಸಿದರು.

ಅಕ್ಕಿ ಗಿರಣಿ ಮಾಲೀಕರು ತಮ್ಮ ಸಮಸ್ಯೆಗಳನ್ನು ವಿವರಿಸಿ, ‘ಕೃಷಿ ಇಲಾಖೆಯ ಗ್ರೇಡರ್‌ಗಳು ಭತ್ತದ ಗುಣಮಟ್ಟವನ್ನು ಸರಿಯಾಗಿ ಪರೀಕ್ಷಿಸುವಂತೆ ಆಗಬೇಕು. ಹಿಂದಿನ ಸಾಲಿನಲ್ಲಿ ನಷ್ಟ ಪರಿಹಾರ ಬಾಂಡ್ ಆಧಾರದಲ್ಲಿ ಭತ್ತ ಸಂಗ್ರಹಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದರಿಂದ ಯಾವುದೇ ತೊಂದರೆ ಆಗಿರಲಿಲ್ಲ. ಆದರೆ, ಈ ಸಾಲಿನಲ್ಲಿ ಅಡಮಾನ ಪತ್ರ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಈಗಾಗಲೇ ಆಸ್ತಿಯ ಮೇಲೆ ಸಾಲ ಹೊಂದಿರುವುದರಿಂದ ಬ್ಯಾಂಕ್ ಖಾತ್ರಿ ಮಾಡಿಕೊಳ್ಳಲು ಕಷ್ಟವಾಗುತ್ತದೆ’ ಎಂದರು.

‘ಅಡಮಾನ ಪತ್ರ ಮಾಡಿಕೊಳ್ಳಲು ಮುದ್ರಾಂಕ ಶುಲ್ಕ ಶೇ 0.5ರಷ್ಟಿದೆ. ಇದು ಆರ್ಥಿಕ ಹೊರೆಯಾಗುತ್ತದೆ. ಆದ್ದರಿಂದ ಈ ಶುಲ್ಕದಿಂದ ವಿನಾಯಿತಿ ನೀಡಬೇಕು. ಕಳೆದ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸಂಗ್ರಹಿಸಿದ ಭತ್ತವನ್ನು ಮಿಲ್ಲಿಂಗ್ ಮಾಡಿದ್ದಕ್ಕೆ ಹಣ ಇನ್ನೂ ಸಂದಾಯವಾಗಿಲ್ಲ. ಅದನ್ನು ಸಾಧ್ಯವಾದಷ್ಟು ಬೇಗ ಕೊಡಿಸಬೇಕು’ ಎಂದು ಮನವಿ ಮಾಡಿದರು.

‘ದೃಢೀಕರಿಸಿ ಖಚಿತ ಪಡಿಸಿಕೊಳ್ಳಿ’:

‘ಕೃಷಿ ಇಲಾಖೆಯಿಂದ ನೇಮಕಗೊಂಡ ಗ್ರೇಡರ್‌ ಅವರು ರೈತರ ಭತ್ತವನ್ನು ಸರಿಯಾಗಿ ಪರಿಶೀಲಿಸಿ ದೃಢೀಕರಿಸಿದ ಬಗ್ಗೆ ಖಚಿತಪಡಿಸಿಕೊಳ್ಳಬೇಕು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಉಪ ನೋಂದಣಾಧಿಕಾರಿ ಕಚೇರಿಯಿಂದ ಅಡಮಾನ ಪತ್ರ ಪಡೆಯಲು ಇರುವ ಮುದ್ರಾಂಕ ಶುಲ್ಕದಿಂದ ವಿನಾಯಿತಿ ನೀಡಲು ಸರ್ಕಾರಕ್ಕೆ ಪತ್ರ ಬರೆಯುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು. ಹಿಂದಿನ ಸಾಲಿನ ಹಣ ಬಿಡುಗಡೆ ಕುರಿತು ಆದೇಶ ಬಂದಿದೆ. ಹಣ ಬಿಡುಗಡೆಯಾದ ತಕ್ಷಣ ನೀಡುವುದಾಗಿ ಅಕ್ಕಿ ಗಿರಣಿ ಮಾಲೀಕರಿಗೆ ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT