ಶುಕ್ರವಾರ, ಏಪ್ರಿಲ್ 16, 2021
29 °C
ವಿವಿಧ ಇಲಾಖೆಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಕೆ.ಹರೀಶಕುಮಾರ್

ಬಸ್ ನಿಲ್ದಾಣ ಅವ್ಯವಸ್ಥೆ: ಖಡಕ್ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಬಸ್ ನಿಲ್ದಾಣ ಸ್ವಚ್ಛತೆ ಹಾಗೂ ಅಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಗಳ ಬಗ್ಗೆ ಸಾರಿಗೆ ಸಂಸ್ಥೆ ತ್ವರಿತ ಕ್ರಮ ಕೈಗೊಳ್ಳದಿದ್ದರೆ, ಸಾರ್ವಜನಿಕ ಹಿತಾಸಕ್ತಿಯಡಿ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಶಿಸ್ತುಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಹರೀಶಕುಮಾರ್ ಎಚ್ಚರಿಸಿದರು.

ಸೋಮವಾರ ಇಲ್ಲಿ ಕರೆದಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಭಟ್ಕಳ, ಅಂಕೋಲಾ ಬಸ್ ನಿಲ್ದಾಣಗಳನ್ನು ನವೀಕರಣ ಹಾಗೂ ನಿರ್ಮಾಣದ ಹೆಸರಿನಲ್ಲಿ ಕೆಡವಲಾಗಿದೆ. ಆದರೆ, ಕಟ್ಟಡ ಕಾಮಗಾರಿ ತ್ವರಿತ ಹಾಗೂ ಶಿಸ್ತುಬದ್ಧವಾಗಿ ನಡೆಯುತ್ತಿಲ್ಲ. ಬೇಕಾಬಿಟ್ಟಿ ಕಾಮಗಾರಿಯಿಂದ ಪಟ್ಟಣಗಳ ಸೌಂದರ್ಯಕ್ಕೂ ಧಕ್ಕೆಯಾಗುತ್ತಿದೆ. ಸಾರ್ವಜನಿಕರು ತೀವ್ರ ತೊಂದರೆ ಪಡುತ್ತಿದ್ದಾರೆ. ಅನುದಾನ, ಟೆಂಡರ್‌ನಲ್ಲಿ ಯಾವ ಸಮಸ್ಯೆಯೂ ಇಲ್ಲ. ಇಲಾಖೆ ಯೋಜನೆಯ ನೀಲನಕ್ಷೆ ನೀಡುವಲ್ಲಿ ವಿಳಂಬ ಮಾಡುತ್ತಿದೆ. ಇದೇ ರೀತಿ ಮುಂದುವರಿದರೆ, ಸಂಬಂಧಿಸಿದ ಅಧಿಕಾರಿ ವಿರುದ್ಧ ಉಪವಿಭಾಗಾಧಿಕಾರಿ ಸಾರ್ವಜನಿಕ ಹಿತಾಸಕ್ತಿಯಡಿ ಕ್ರಮ ಜರುಗಿಸಬೇಕು ಎಂದರು.

ಸಾರಿಗೆ ಸಂಸ್ಥೆಯ ಬಸ್‌ಗಳು ಎಲ್ಲ ಮಾರ್ಗಗಳಲ್ಲೂ ಸಂಚರಿಸಬೇಕು. ಆ ಮೂಲಕ ಪ್ರಯಾಣಿಕರನ್ನು ಕೊಂಡೊಯ್ಯುವ ಖಾಸಗಿ ವಾಹನ ನಿಯಂತ್ರಿಸಬೇಕು ಎಂದು ಹೇಳಿದರು.

ಜಿಲ್ಲೆಯ ಹಲವು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಖಾತಾ ಬದಲಾವಣೆ ಸಮಸ್ಯೆಯಿದೆ. ಶಿರಸಿಯಲ್ಲಿ 5000 ಆಸ್ತಿಗಳಿಗೆ ಯಾವುದೇ ಸಮಸ್ಯೆಯಿಲ್ಲ. ಕಂದಾಯ ಇಲಾಖೆಯು ಪಿಂಚಣಿ ಅದಾಲತ್ ನಡೆಸಿದಂತೆ ನಗರಸಭೆಯು ಆಂದೋಲನ ರೂಪದಲ್ಲಿ ಫಾರಂ ನಂಬರ್ 3 ಅನ್ನು ವಿತರಿಸಬೇಕು. ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಕೊಡುವ ಶಾಸಕ, ಸಂಸದರ ನಿಧಿಯ ಕಾಮಗಾರಿ ಪ್ರಗತಿ ವಿಳಂಬ ಆಗುತ್ತಿದೆ. ಇಂಥ ವಿಳಂಬ ಪ್ರಕ್ರಿಯೆಗೆ ತಕ್ಷಣ ಬ್ರೇಕ್ ಹಾಕಿ ವೇಗ ನೀಡಬೇಕು ಎಂದು ಸೂಚಿಸಿದರು.

ಜಲಾಮೃತ ಸಮರ್ಪಕವಾಗಿ ಆಗಲಿ:

ಜಲಾಮೃತ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದ ಖಾಸಗಿ ಬಾವಿ ಪುನರುಜ್ಜೀವನಕ್ಕೆ ಆಂದೋಲನ ಹಮ್ಮಿಕೊಳ್ಳಬೇಕು. ಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ನೀಡುವಾಗ ಮಳೆನೀರು ಇಂಗಿಸುವಿಕೆ ಕಡ್ಡಾಯಗೊಳಿಸಬೇಕು. ಗ್ರಾಮೀಣ ನೀರಿನ ಮೂಲ ಸಂರಕ್ಷಿಸುವ ಕಾರ್ಯವಾಗಬೇಕು. ಪಂಚಾಯ್ತಿ ಕಚೇರಿಯಲ್ಲಿ ಮಳೆ ಕೊಯ್ಲು ಪ್ರಾತ್ಯಕ್ಷಿಕೆ ನಡೆಸಬೇಕು. ನರೇಗಾ ಯೋಜನೆಯಡಿ ಜವುಳು ಭೂಮಿ ಸಂರಕ್ಷಿಸುವ ಕೆಲಸ ಆಗಬೇಕು. ಅರಣ್ಯ ಇಲಾಖೆ ಸಹಕಾರದಲ್ಲಿ ಹಸಿರೀಕರಣ ನಡೆಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ ಹಿನ್ನೆಲೆಯಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ, ಕಾಮಗಾರಿ ಮಾಹಿತಿ ಕೇಳಿದಾಗ, ನಿರ್ಮಿತಿ ಕೇಂದ್ರದ ಕಿರಿಯ ಎಂಜಿನಿಯರ್ ಸಮರ್ಪಕ ಉತ್ತರ ನೀಡಲಿಲ್ಲ. ಇದರಿಂದ ಅಸಮಾಧಾನಗೊಂಡ ಜಿಲ್ಲಾಧಿಕಾರಿ, ಶಿರಸಿ ವಿಭಾಗದ ನಿರ್ಮಿತಿ ಕೇಂದ್ರವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದರು. ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು