ಭಾನುವಾರ, ನವೆಂಬರ್ 17, 2019
29 °C
‘ಪೌರಕಾರ್ಮಿಕರ ಗೃಹ ಭಾಗ್ಯ’ ಯೋಜನೆಯಲ್ಲಿ ಮನೆಗಳ ನಿರ್ಮಾಣ

ನಿರ್ಮಾಣ ಹಂತದ ಸಂಕೀರ್ಣ ಪರಿಶೀಲಿಸಿದ ಜಿಲ್ಲಾಧಿಕಾರಿ

Published:
Updated:
Prajavani

ಕಾರವಾರ: ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯ ಅಡಿ ನಗರದ ಪಂಚರ್ಷಿವಾಡದಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಂಕೀರ್ಣವನ್ನು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಗುರುವಾರ ಪರಿಶೀಲನೆ ನಡೆಸಿದರು.

ಅಂದಾಜು ₹ 18.4 ಕೋಟಿ ವೆಚ್ಚದಲ‌್ಲಿ ನಿರ್ಮಾಣವಾಗುತ್ತಿರುವ ಈ ಸಂಕೀರ್ಣದಲ್ಲಿ 16 ಪೌರಕಾರ್ಮಿಕರಿಗೆ ಮನೆಗಳನ್ನು ನೀಡಲಾಗುತ್ತಿದೆ. ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಗುಣಮಟ್ಟ ಸೇರಿದಂತೆ ಇತರ ವ್ಯವಸ್ಥೆಗಳನ್ನು ಈ ವೇಳೆ ಅವರು ಪರಿಶೀಲಿಸಿದರು. 

‘ಒಂದು ಯುನಿಟ್‌ಗೆ (ಮನೆ) ಸರ್ಕಾರ ₹ 7.5 ಲಕ್ಷ ಧನ ಸಹಾಯ ನೀಡುತ್ತದೆ. ಉಳಿದವುಗಳನ್ನು ನಗರಸಭೆಯೇ ಇತರ ಅನುದಾನಗಳಿಂದ ಭರಿಸಿ, ಮನೆ ನಿರ್ಮಿಸಿ ಕೊಡಬೇಕಿದೆ. ನಮ್ಮಲ್ಲಿ ಒಂದು ಯುನಿಟ್‌ಗೆ ₹ 11.5 ಲಕ್ಷ ವೆಚ್ಚ ಆಗಿದೆ’ ಎಂದು ಡಾ.ಕೆ.ಹರೀಶಕುಮಾರ್ ತಿಳಿಸಿದರು.

‘ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಸೂರು ಒದಗಿಸುವ ರಾಜ್ಯ ಸರ್ಕಾರದ ಆಶಯವು ಇಲ್ಲಿನ ನಗರಸಭೆಯ ಪೌರಾಯುಕ್ತರು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದಾಗಿ ನೆರವೇರುತ್ತಿದೆ. ಹಲವು ಕಡೆಗಳಲ್ಲಿ ವಿವಿಧ ಕಾರಣಗಳಿಂದಾಗಿ ಮನೆಗಳು ಇನ್ನೂ ನಿರ್ಮಾಣವಾಗಿಲ್ಲ. ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವುದಕ್ಕೆ ಸರ್ವರೂ ಅಭಿನಂದನಾರ್ಹರು’ ಎಂದರು. 

‘ಉತ್ತಮ ಗುಣಮಟ್ಟದಲ್ಲೇ ಮನೆಗಳು ನಿರ್ಮಾಣವಾಗುತ್ತಿವೆ. ಸುತ್ತಲಿನ ಪರಿಸರ ಕೂಡ ಉತ್ತಮವಾಗಿದೆ. 16 ಪೌರಕಾರ್ಮಿಕರಿಗೆ ಆಗಸ್ಟ್ 15ರಂದು ಈ ಮನೆಗಳನ್ನು ವಿತರಣೆ ಮಾಡಲಾಗುತ್ತಿದ್ದು, ಇನ್ನುಳಿದ 16 ಮಂದಿಗೆ ಮನೆ ನಿರ್ಮಿಸಲು ಜಾಗ ಹುಡುಕಲಾಗುತ್ತಿದೆ. ಶೀಘ್ರವೇ ಅದಕ್ಕೂ ಭೂಮಿಪೂಜೆ ಮಾಡಿಸಲಾಗುವುದು’ ಎಂದರು.

ಈ ವೇಳೆ ಸ್ಥಳದಲ್ಲಿದ್ದ ಪೌರಕಾರ್ಮಿಕರ ಕ್ಷೇಮ ವಿಚಾರಿಸಿದ ಅವರು, ಸಮಸ್ಯೆಗಳನ್ನು ಆಲಿಸಿದರು.

ನಗರಸಭೆಯ ಪೌರಾಯುಕ್ತ ಎಸ್.ಯೋಗೀಶ್ವರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮೋಹನರಾಜ್, ಪರಿಸರ ಅಧಿಕಾರಿ ಮಲ್ಲಿಕಾರ್ಜುನ್ ಇದ್ದರು.

ಪ್ರತಿಕ್ರಿಯಿಸಿ (+)