ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯ ಲೋಪ: 24 ಗಂಟೆಯಲ್ಲಿ ಉತ್ತರಿಸಲು ನೋಟಿಸ್

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರ ವಿರುದ್ಧ ಜಿಲ್ಲಾಧಿಕಾರಿ ಕ್ರಮದ ಎಚ್ಚರಿಕೆ
Last Updated 8 ಮಾರ್ಚ್ 2022, 14:11 IST
ಅಕ್ಷರ ಗಾತ್ರ

ಕಾರವಾರ: ‘ಇಲಾಖೆಯ ನಾಲ್ಕೈದು ಸಭೆಗಳಾದರೂ ಸರಿಯಾದ ಮಾಹಿತಿಯನ್ನು ಪ್ರಸ್ತುತ ಪಡಿಸುತ್ತಿಲ್ಲ. ಕರ್ತವ್ಯ ಲೋಪ ಎಸಗಿರುವ ಬಗ್ಗೆ 24 ಗಂಟೆಗಳ ಒಳಗಾಗಿ ಸ್ಪಷ್ಟನೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್ (ಗಣಿ), ಕಲ್ಲುಪುಡಿ ಮಾಡುವ ಘಟಕಗಳಿಗೆ ಪರವಾನಗಿ ನೀಡುವುದು ಹಾಗೂ ನಿಯಂತ್ರಣಾ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನವಯುಗ ಎಂಜಿನಿಯರಿಂಗ್ ಕಂಪನಿ, ಪ್ರಾಜೆಕ್ಟ್ ಸೀಬರ್ಡ್, ನೌಕಾನೆಲೆ ಅವರ ತಾತ್ಕಾಲಿಕ ಕ್ರಷರ್ ಘಟಕಗಳ ಪರವಾನಗಿ ಅವಧಿಯು 2021ರ ಜೂನ್‍ನಲ್ಲೇ ಮುಕ್ತಾಯವಾಗಿದೆ. ಪರವಾನಗಿ ವಿಸ್ತರಿಸುವಂತೆ ಡಿ.28ರಂದು ಮನವಿ ಸಲ್ಲಿಸಿದ್ದಾರೆಂದು ಇಂದಿನ ಸಭೆಗೆ ತಿಳಿಸಲಾಗಿದೆ. ಕ್ರಷರ್ ಘಟಕಗಳು ನಿಯಮ ಮೀರಿ ಕಾರ್ಯನಿರ್ವಹಿಸುತ್ತಿವೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಾಗಾಗಿ ಅವುಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು. ಅಲ್ಲದೇ ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಸರ್ಕಾರಿ ನೌಕರರಿಗೆ ಸೂಕ್ತವಲ್ಲದ ರೀತಿಯಲ್ಲಿ ವರ್ತಿಸಿ ಸರ್ಕಾರದ ರಾಜಧನವನ್ನು ಸೋರಿಕೆ ಮಾಡಲಾಗಿದೆ. ಸೂಕ್ತ ಮಾಹಿತಿಯೊಂದಿಗೆ ಸಭೆಯಲ್ಲಿ ವಿಷಯವನ್ನು ಮಂಡಿಸಿ ಅನುಮೋದನೆಯನ್ನೂ ಪಡೆದಿಲ್ಲ. ಸಮಯ ವ್ಯರ್ಥ ಮಾಡಿ ಕರ್ತವ್ಯಲೋಪ ಎಸಗಲಾಗಿದೆ. ಈ ಬಗ್ಗೆ ಸ್ಪಷ್ಟನೆ ಕೊಡಬೇಕು’ ಎಂದು ತಾಕೀತು ಮಾಡಿದರು.

ಹೊಸ ಅರ್ಜಿಗಳ ಚರ್ಚೆ:

ಜೊಯಿಡಾ ತಾಲೂಕಿನ ರಾಮನಗರದ ಅಡಾಳಿ ಮತ್ತು ಅಕ್ರಾಳಿ ಗ್ರಾಮಗಳ ವ್ಯಾಪ್ತಿಯ ಪಟ್ಟಾ ಜಮೀನಿನಲ್ಲಿ ಹೊಸದಾಗಿ ಕಲ್ಲುಗಣಿ ಪರವಾನಗಿ ಮಂಜೂರಿಯ ಅರ್ಜಿ, ಅಡಾಳಿ ಗ್ರಾಮಕ್ಕೆ ಮಂಜೂರಾಗಿದ್ದ ಕಲ್ಲುಗಣಿಯ ಪರವಾನಗಿ ಅವಧಿ ವಿಸ್ತರಣೆ, ಭಟ್ಕಳ ತಾಲ್ಲೂಕು ವ್ಯಾಪ್ತಿಯಲ್ಲಿ ಹೊಸದಾಗಿ ಕಲ್ಲುಗಣಿಗೆ ಪರವಾನಗಿ ಮಂಜೂರಿಗೆ ಸಲ್ಲಿಸಿರುವ ಅರ್ಜಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

‘ಏಳು ಕಲ್ಲುಗಣಿಗಳಿಗೆ ಈ ಹಿಂದೆಯೇ ಅನುಮತಿ ನೀಡಲಾಗಿದೆ. ಅವುಗಳಲ್ಲಿ ಮೂರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಕಲ್ಲುಪುಡಿ ಮಾಡುವ ಘಟಕಗಳಿಗೆ ಪರವಾನಗಿ ಬಯಸಿ 22 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಎಂ.ಪ್ರಿಯಾಂಗಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್, ಉಪ ವಿಭಾಗಾಧಿಕಾರಿಗಳಾದ ಜಯಲಕ್ಷ್ಮಿ ರಾಯಕೊಡ, ಮಮತಾದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT