ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಬಗೆಹರಿದ ‘ಗಡಿ’ ಗೊಂದಲ

ಜಿಲ್ಲಾ ಆಸ್ಪತ್ರೆಗೆ 3 ಎಕರೆ 12 ಗುಂಟೆ ಜಾಗ: ಡಿ.ಸಿ ಮುಲ್ಲೈ ಮುಗಿಲನ್ ಮುತುವರ್ಜಿ
Last Updated 12 ಜುಲೈ 2021, 19:30 IST
ಅಕ್ಷರ ಗಾತ್ರ

ಕಾರವಾರ: ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಆವರಣದಲ್ಲಿ 450 ಹಾಸಿಗೆಗಳ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಗುರುತಿಸಲಾದ ಪ್ರದೇಶವು ಜಿಲ್ಲಾ ಆಸ್ಪತ್ರೆಗೇ ಸೇರಿದ್ದು ಎಂದು ಕೊನೆಗೂ ದೃಢಪಟ್ಟಿದೆ. ಬಹಳ ದಿನಗಳಿಂದ ಇದ್ದ ಗೊಂದಲವೊಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಮುತುವರ್ಜಿಯಿಂದ ಬಗೆಹರಿದಿದೆ.

1965ರಲ್ಲಿ ಜೈಲಿನ 17 ಎಕರೆ 14 ಗುಂಟೆ ಜಾಗದಲ್ಲಿ, 3 ಎಕರೆ 12 ಗುಂಟೆಯಷ್ಟು (ಸರ್ವೆ ನಂಬರ್ 1406ಅ/1) ಜಾಗಕ್ಕೆ ಅಂದು ಪರಿವರ್ತನೆ (ಮ್ಯುಟೇಷನ್) ಮಾಡಲಾಗಿತ್ತು. ಆದರೆ, ಕಾರಾಗೃಹದ ಪಹಣಿಯಲ್ಲಿ ಅಷ್ಟು ಜಾಗವನ್ನು ಕಡಿಮೆ ಮಾಡಿ ನಮೂದಿಸಿರಲಿಲ್ಲ. ಅಲ್ಲದೇ ಆಸ್ಪತ್ರೆಗೆ ಸಂಬಂಧಿಸಿದಂತೆ ಹೊಸ ದಾಖಲೆಗಳನ್ನೂ ಮಾಡಿಕೊಂಡಿರಲಿಲ್ಲ. ಇದುವೇ ಇಡೀ ಗೊಂದಲಕ್ಕೆ ಕಾರಣವಾಗಿದ್ದ ಅಂಶ ಪರಿಶೀಲನೆಯಲ್ಲಿ ಗೊತ್ತಾಗಿದೆ.

‘ಉದ್ದೇಶಿತ ನೂತನ ಆಸ್ಪತ್ರೆ ಕಟ್ಟಡಕ್ಕೆಂದು ಗುರುತಿಸಲಾದ ಪ್ರದೇಶವು ಸಮೀಪದಲ್ಲಿರುವ ಜಿಲ್ಲಾ ಕಾರಾಗೃಹ ಇಲಾಖೆಯ ವ್ಯಾಪ್ತಿಗೆ ಸೇರಿದೆ. ಅಲ್ಲಿ ‘ಕ್ರಿಮ್ಸ್’ ಸಲುವಾಗಿ ಒತ್ತುವರಿಯಾಗಿದೆ’ ಎಂದು ಹೇಳಲಾಗಿತ್ತು. ಈ ನಡುವೆ, ಆಸ್ಪತ್ರೆಯ ಹೊಸ ಕಟ್ಟಡದ ಕಾಮಗಾರಿ ಸಲುವಾಗಿ ಈ ವರ್ಷ ಫೆಬ್ರುವರಿಯಲ್ಲಿ ಅಲ್ಲಿದ್ದ ಹಳೆಯ ಕಟ್ಟಡಗಳನ್ನು ತೆರವು ಮಾಡಲಾಗಿತ್ತು. ಆದರೆ, ಗೊಂದಲ ಬಗೆಹರಿಯದ ಕುರಿತು ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು. ಈ ಬಗ್ಗೆ ಜಂಟಿ ಸರ್ವೆ ಮಾಡಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು.

ಆ ವರದಿಯನ್ನು ಆಧರಿಸಿ, 1965ರ ಮ್ಯುಟೇಷನ್‌ ಪ್ರತಿಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕಾರಾಗೃಹ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್ ಜೊತೆ ಸೇರಿ ಕೂಲಂಕಷವಾಗಿ ಪರಿಶೀಲಿಸಿದರು. ಸುಮಾರು 56 ವರ್ಷಗಳ ಹಿಂದೆ ಆಗಿದ್ದ ಲೋಪವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.

ಕಾರಾಗೃಹ ಮತ್ತು ಜಿಲ್ಲಾ ಆಸ್ಪತ್ರೆಯ ನಡುವೆ ಇರುವ ಕಾಂಪೌಂಡ್‌ನಿಂದ ಈಚೆಗೆ ಒಂದು ಗಡಿ ಕಲ್ಲು ಅಳವಡಿಸಲಾಗಿದೆ. ಅಲ್ಲಿಂದ ಈಚೆಗಿರುವ ಪ್ರದೇಶ ಆಸ್ಪತ್ರೆಗೆ ಸೇರಿದೆ ಎಂದು ಗೊತ್ತಾಗಿದೆ. ಅಲ್ಲದೇ ಎರಡೂ ಕಡೆ ಸರ್ಕಾರಿ ಇಲಾಖೆಗಳೇ ಇರುವ ಕಾರಣ ಸಾರ್ವಜನಿಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು, ಗೊಂದಲವನ್ನು ಬಗೆಹರಿಸಲು ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದ್ದಾರೆ.

‘ದಾಖಲೆ ಸರಿಪಡಿಸಿದರೆ ಸಾಕು’:

‘ಆಸ್ಪತ್ರೆ ಕಟ್ಟಡಕ್ಕೆ ಗುರುತಿಸಲಾದ ಜಾಗವು ಕಾರಾಗೃಹ ಇಲಾಖೆಗೆ ಸೇರಿದ್ದಲ್ಲ ಎಂಬುದು ದೃಢಪಟ್ಟಿದೆ. ಈಗ ಗಡಿ ಕಲ್ಲು ಹುಗಿದಿರುವ ಪ್ರದೇಶದವರೆಗೆ ಮ್ಯುಟೇಷನ್ ಸಿಗದ ಕಾರಣ ಅದನ್ನು ಯಾರಿಗೂ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. 1965ರಲ್ಲೇ ಕಾರಾಗೃಹದ ಜಾಗ ಸುಮಾರು 13 ಎಕರೆ ಎಂದು ನಮೂದಿಸಬೇಕಿತ್ತು. ಇದೇ ಗೊಂದಲದ ಮೂಲವಾಗಿತ್ತು. ಈಗ ಎರಡೂ ಕಡೆಯಿಂದ ದಾಖಲೆಗಳನ್ನು ಸರಿ ಪಡಿಸಿಕೊಂಡರೆ ಸಾಕು. ಜಿಲ್ಲಾಧಿಕಾರಿಯವರ ಮುತುವರ್ಜಿಯಿಂದ ದಶಕಗಳ ಹಿಂದಿನ ಗೊಂದಲಕ್ಕೆ ತೆರೆ ಬಿದ್ದಿದೆ’ ಎಂದು ಕಾರವಾರದ ಜಿಲ್ಲಾ ಕಾರಾಗೃಹದ ಅಧೀಕ್ಷಕ ಈರಣ್ಣ ರಂಗಾಪುರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕ್ರಿಮ್ಸ್‌’ಗೆ ಆಮ್ಲಜನಕ ಟ್ಯಾಂಕ್ ಅಳವಡಿಸಲು ಸರ್ವೆ ಮಾಡಿದಾಗ ಜಾಗವು ಆಸ್ಪತ್ರೆಗೆ ಸೇರಿದ್ದೆಂದು ಗೊತ್ತಾಯಿತು. ದಾಖಲೆಗಳನ್ನು ಪರಿಶೀಲಿಸಿ ಗೊಂದಲ ಬಗೆಹರಿಸಲಾಗಿದೆ.

– ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT