ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವಜಾರೋಹಣಕ್ಕೆ ನಿಯಮ: ಸುತ್ತೋಲೆ ಪ್ರಕಟ

Last Updated 11 ಆಗಸ್ಟ್ 2022, 15:29 IST
ಅಕ್ಷರ ಗಾತ್ರ

ಕಾರವಾರ: ‘ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ’ ಅಭಿಯಾನದ ಅಡಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವಾಗ ಪಾಲಿಸಬೇಕಾದ ನಿಯಮಗಳ ಕುರಿತು ಸರ್ಕಾರದ ಸೂಚನೆಯಂತೆ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗುರುವಾರ ಸುತ್ತೋಲೆ ಹೊರಡಿಸಿದ್ದಾರೆ.

ಆ.13ರಿಂದ 15ರವರೆಗೆ ನಡೆಯುವ ಅಭಿಯಾನದಲ್ಲಿ, ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳು, ಕಾಲೇಜುಗಳು, ಸರ್ಕಾರಿ ಕಟ್ಟಡಗಳು, ಅಂಗನವಾಡಿಗಳು, ಗ್ರಾಮ ಪಂಚಾಯಿತಿ ಕಟ್ಟಡಗಳಲ್ಲಿ ಬೆಳಿಗ್ಗೆ 8ಕ್ಕೆ ಧ್ವಜಾರೋಹಣ ಮಾಡಬೇಕು. ಸೂರ್ಯಾಸ್ತದ ವೇಳೆಗೆ ಅವರೋಹಣ ಮಾಡಬೇಕು. ಎಲ್ಲ ಮನೆಗಳಲ್ಲಿ ಆ.13ರಂದು ಬೆಳಿಗ್ಗೆ 8ಕ್ಕೆಧ್ವಜಾರೋಹಣ ಮಾಡಿ ನಿರಂತರವಾಗಿ ಇಡಲು ಅವಕಾಶ ಕಲ್ಪಿಸಲಾಗಿದೆ.

ರಾಷ್ಟ್ರಧ್ವಜಕ್ಕೆ ಯಾವುದೇ ಕಾರಣಕ್ಕೂ ಅಗೌರವ ಆಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರು ಅತಿಹೆಚ್ಚು ಸಂಖ್ಯೆಯಲ್ಲಿ ಧ್ವಜಾರೋಹಣ ಮಾಡುವಂತೆ ಪ್ರೇರೇಪಿಸಬೇಕು. ಆ.15ರಂದು ಸ್ವಾತಂತ್ರ್ಯ ದಿನಾಚರಣೆಯ ಬಳಿಕ ರಾಷ್ಟ್ರಧ್ವಜವನ್ನು ಜಾಗರೂಕತೆಯಿಂದ ಕಾಯ್ದಿಟ್ಟುಕೊಳ್ಳುವ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಾಲ್ಲೂಕು ಮಟ್ಟದಲ್ಲಿ ಸಂಬಂಧಪಟ್ಟ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಕಚೇರಿಗಳಲ್ಲಿ, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ರಾಷ್ಟ್ರಧ್ವಜ ಮಾರಾಟಕ್ಕೆ ಕಿಯಾಸ್ಕ್‌ಗಳ ವ್ಯವಸ್ಥೆ ಮಾಡಬೇಕು. ಅವುಗಳ ಮೂಲಕ ಆಸಕ್ತ ಸಾರ್ವಜನಿಕರು ಧ್ವಜ ಖರೀದಿಗೆ ಅವಕಾಶ ಕಲ್ಪಿಸಬೇಕು. ಈ ಸೂಚನೆಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಿ ಅಭಿಯಾನವನ್ನು ಯಶಸ್ವಿಗೊಳಸಿಬೇಕು ಎಂದು ಅವರು ತಿಳಿಸಿದ್ದಾರೆ.

ಜಾಥಾಕ್ಕೆ ಚಾಲನೆ:

ಜಿಲ್ಲೆಯಲ್ಲಿ ರಾಷ್ಟ್ರಧ್ವಜಾರೋಹಣ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆ.13ರಂದು ಚಾಲನೆ ನೀಡಲಿದ್ದಾರೆ. ಅಂದು ಬೆಳಿಗ್ಗೆ 9ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಾಥಾವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸುವಂತೆ ನಗರಸಭೆ ಆಯುಕ್ತ ಆರ್.ಪಿ.ನಾಯ್ಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT