ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.20ರಂದು ನಡೆಯಲಿರುವ ಮುರುಡೇಶ್ವರದ ಜಾತ್ರೆ: 10ರಂದು ಸಭೆ

ಭಕ್ತರ ಅಭಿಪ್ರಾಯ ಆಲಿಸಿದ ಉಪ ವಿಭಾಗಾಧಿಕಾರಿ ಮಮತಾ ದೇವಿ
Last Updated 7 ಜನವರಿ 2022, 15:04 IST
ಅಕ್ಷರ ಗಾತ್ರ

ಭಟ್ಕಳ: ‘ಜ.20ರಂದು ನಡೆಯಲಿರುವ ಮುರುಡೇಶ್ವರದ ಜಾತ್ರೆಯ ಬಗ್ಗೆ ಭಕ್ತರ ಅಹವಾಲುಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು. ಈ ಸಂಬಂಧ ಜ.10ರಂದು ಮುರುಡೇಶ್ವರದ ಓಲಗಮಂಟಪದಲ್ಲಿ ಸಭೆ ನಡೆಸಲಾಗುವುದು’ ಎಂದು ದೇವಸ್ಥಾನದ ಆಡಳಿತಾಧಿಕಾರಿಯೂ ಆಗಿರುವ ಉಪ ವಿಭಾಗಾಧಿಕಾರಿ ಮಮತಾದೇವಿ.ಎಸ್ ಹೇಳಿದರು.

ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಶುಕ್ರವಾರ, ದೇವಸ್ಥಾನದ ಸೀಮಾ ಸಮಿತಿ ಸದಸ್ಯರು, ಮಾವಳ್ಳಿ 1, 2 ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಊರ ನಾಗರಿಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕೊರೊನಾದ ರೂಪಾಂತರಿ ವೈರಸ್ ಓಮೈಕ್ರಾನ್ ಅತ್ಯಂತ ವೇಗವಾಗಿ ಹರಡುತ್ತದೆ. ಇದು ಕಳೆದ ಎರಡು ಅಲೆಗಳಿಗಿಂತಲೂ ಭಿನ್ನವಾಗಿದ್ದು, ನಿಯಂತ್ರಣಕ್ಕೆ ಸರ್ಕಾರವು ಹಲವು ಮಾರ್ಗಸೂಚಿಗಳನ್ನು ನೀಡಿದೆ. ಜಾತ್ರೆಯ ಸಂರ್ಭದಲ್ಲಿ ಅದನ್ನು ಪಾಲಿಸಬೇಕಾಗಿದೆ. ಪರಿಸ್ಥಿತಿ ಗಂಭೀರವಿದ್ದು ಜಾತ್ರೆ ಮುಂದೂಡಲು ಅವಕಾಶವಿದೆಯೇ’ ಎಂದು ಕೇಳಿದರು.

‘ಓಮೈಕ್ರಾನ್ ಹರಡದಂತೆ ತಡೆಯಲು ಜನರ ಸಂಚಾರ ನಿಯಂತ್ರಿಸಲು ಜಿಲ್ಲೆಯ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಆರಂಭಿಸಲಾಗಿದೆ. ಮುರುಡೇಶ್ವರದಲ್ಲೂ ಚೆಕ್‌ಪೋಸ್ಟ್ ಕಾರ್ಯಾರಂಭ ಮಾಡಿದೆ. ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಇಲ್ಲದೇ ಹೊರ ಜಿಲ್ಲೆಯವರು ಮುರುಡೇಶ್ವರ ಪ್ರವೇಶಿಸಲು ಅವಕಾಶವಿಲ್ಲ. ದೇವಸ್ಥಾನಕ್ಕೆ ಬರುವ ಸ್ಥಳೀಯರಿಗೆ ಎರಡು ಡೋಸ್ ಲಸಿಕೆ ಆಗಿರಲೇಬೇಕು. ಅಲ್ಲದೆ, ಜಾತ್ರೆಯು ಕೇವಲ ಧಾರ್ಮಿಕ ವಿಧಿ ವಿಧಾನಕ್ಕಷ್ಟೆ ಸೀಮಿತವಾಗಿರಬೇಕು’ ಎಂದು ಅವರು ವಿವರಿಸಿದರು.

‘ಜಾತ್ರೆಗೆ ಅವಕಾಶ ಕೊಡಿ’:ಮಾವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಾ ನಾಯ್ಕ ಮಾತನಾಡಿ, ‘ಈ ಬಾರಿ ಮುರುಡೇಶ್ವರಕ್ಕೆ ನೂತನ ಬ್ರಹ್ಮರಥ ಬಂದಿದೆ. ಈ ಜಾತ್ರೆಯನ್ನು ನೋಡಲು ಈಗಾಗಲೇ ಸಾವಿರಾರು ಮಂದಿ ಕಾತರದಿಂದ ಕಾಯುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಜಾತ್ರೆ ಮುಂದೂಡಲು ಸಾಧ್ಯವೇ ಇಲ್ಲ. ಸರ್ಕಾರದ ಮಾರ್ಗಸೂಚಿಯನ್ನು ನಾವು ಕಡ್ಡಾಯವಾಗಿ ಪಾಲಿಸುತ್ತೇವೆ. ಸುಗಮವಾಗಿ ಜಾತ್ರೆ ನಡೆಯಲು ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಮಾವಳ್ಳಿ 1 ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾದೇವಿ ಮೊಗೇರ, ಸದಸ್ಯ ತಿಮ್ಮಪ್ಪ ನಾಯ್ಕ ಇದಕ್ಕೆ ದನಿಗೂಡಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಜಯರಾಮ ಅಡಿಗಲ್, ಜ.15ರಿಂದ 23ರವರೆಗೆ ನಡೆಯುವ ಧಾರ್ಮಿಕ ಕಾರ್ಯಗಳು ಮತ್ತು ಅದರ ಮಹತ್ವವನ್ನು ವಿವರಿಸಿದರು.

ತಹಶೀಲ್ದಾರ್ ರವಿಚಂದ್ರ.ಎಸ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಭಾಕರ ಚಿಕ್ಕನಮನೆ, ಮಾವಳ್ಳಿ 1 ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಬೀನಾ, ಮಾವಳ್ಳಿ 2 ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ ನಾಯ್ಕ, ಪ್ರಮುಖರಾದ ಸತೀಶ ನಾಯ್ಕ, ದಿನೇಶ ನಾಯ್ಕ, ಯಾಸೀನ್ ಶೇಖ್, ನಾಗರಾಜ ಶೆಟ್ಟಿ, ಎಸ್.ಎಸ್.ಕಾಮತ್, ಅರ್ಚಕ ಶಿವರಾಮ ಅಡಿಗಲ್, ಆಟೊ ಚಾಲಕ ಸಂಘದ ಅಧ್ಯಕ್ಷ ಸತೀಶ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT