ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣು ಕಳೆದುಕೊಂಡ ಸಿಸಿಟಿವಿ ಕ್ಯಾಮೆರಾ

₹ 15 ಲಕ್ಷ ವೆಚ್ಚದಲ್ಲಿ ವರ್ಷದ ಹಿಂದೆ ಅಳವಡಿಕೆ
Last Updated 16 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಶಿರಸಿ: ನಗರದಲ್ಲಿ ಅಪರಾಧ ಚಟುವಟಿಕೆ ನಿಯಂತ್ರಿಸುವ ಉದ್ದೇಶದಿಂದ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಒಂದು ವರ್ಷದ ಅವಧಿಯಲ್ಲೇ ನಿರುಪಯುಕ್ತವಾಗಿವೆ. ಕಣ್ಣ ಕಳೆದುಕೊಂಡಿರುವ ಕ್ಯಾಮೆರಾಗಳು ರಸ್ತೆ ಬದಿಯ ಕಂಬ ಮೇಲೆ ದೂಳು ತಿನ್ನುತ್ತಿವೆ.

ಪೊಲೀಸ್ ಇಲಾಖೆಯ ವಿನಂತಿ ಮೇರೆಗೆ ಕಳೆದ ವರ್ಷ ಜೂನ್‌ನಲ್ಲಿ ನಗರಸಭೆ ₹ 15 ಲಕ್ಷ ವೆಚ್ಚದಲ್ಲಿ ನಗರದ ಬಸ್ ನಿಲ್ದಾಣ ವೃತ್ತ, ಶಿವಾಜಿ ಚೌಕ, ಐದು ರಸ್ತೆ ವೃತ್ತ, ಮರಾಠಿಕೊಪ್ಪ ಕ್ರಾಸ್, ಅಶ್ವಿನಿ ಸರ್ಕಲ್, ದೇವಿಕೆರೆ ಸೇರಿದಂತೆ 23 ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿತ್ತು. ಬೆಂಗಳೂರಿನ ಮೌರ್ಯ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಇದರ ಗುತ್ತಿಗೆ ಪಡೆದಿತ್ತು.

ಕ್ಯಾಮೆರಾ ಅಳವಡಿಸುವ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ನಗರಸಭೆ ಜನಪ್ರತಿನಿಧಿಗಳು, ಸಾಮಾನ್ಯಸಭೆಯಲ್ಲಿ ಕ್ಯಾಮೆರಾ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ‘ಸದಸ್ಯರ ಗಮನಕ್ಕೆ ತರದೇ, ಅಗತ್ಯವಿಲ್ಲದ ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಲಾಗಿದೆ. ಗುತ್ತಿಗೆದಾರರಿಗೆ ಬಿಲ್ ಪಾವತಿಸಬಾರದು’ ಎಂದು ಒತ್ತಾಯಿಸಿದ್ದರು.

ಅದಾಗಿ ಒಂದು ತಿಂಗಳಲ್ಲಿ ಸದಸ್ಯರ ಅಧಿಕಾರಾವಧಿ ಪೂರ್ಣಗೊಂಡ ನಂತರ ನಗರಸಭೆಯಿಂದ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಿದೆ. ‘ಕಳಪೆ ಗುಣಮಟ್ಟದ ಕ್ಯಾಮೆರಾ ಹಾಕಿದ್ದರಿಂದ, ಅದು ಒಂದೆರಡು ತಿಂಗಳುಗಳಲ್ಲೇ ಹಾಳಾಗಿದೆ. ಅನೇಕ ಬಾರಿ ದುರಸ್ತಿ ಮಾಡಿದರೂ, ಮತ್ತೆ ಕಾರ್ಯ ಮಾಡುತ್ತಿಲ್ಲ’ ಎಂದು ನಗರಸಭೆಗೆ ಪುನರಾಯ್ಕೆಯಾಗಿರುವ ಸದಸ್ಯರೊಬ್ಬರು ದೂರಿದರು.

‘ಕ್ಯಾಮೆರಾ ಅಳವಡಿಸಲು ಅನುದಾನವನ್ನು ನಗರಸಭೆ ನೀಡಿದೆ. ಕಾಮಗಾರಿ ಪೂರ್ಣಗೊಂಡ ಮೇಲೆ ಅದನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ.ತೊಂದರೆಯಾದಾಗ ಆ ಇಲಾಖೆಯೇ ಗುತ್ತಿಗೆದಾರ ಕಂಪನಿಯನ್ನು ಸಂಪರ್ಕಿಸಿ ದುರಸ್ತಿ ಮಾಡಿಸಿಕೊಂಡಿದೆ’ ಎಂದು ನಗರಸಭೆ ಅಧಿಕಾರಿಯೊಬ್ಬರು ತಿಳಿಸಿದರು.

ಸಂಚಾರ ನಿಯಮಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚಲು ಅನುಕೂಲವಾಗುವಂತೆ ಸಿಸಿಟಿವಿ ಕ್ಯಾಮೆರಾಗಳನ್ನು ದುರಸ್ತಿಗೊಳಿಸಬೇಕು ಎಂದು ಪೊಲೀಸ್ ಇಲಾಖೆ ನಗರಸಭೆಗೆ ಪತ್ರ ಬರೆದಿದೆ. ಈ ಸಂಬಂಧ ಡಿವೈಎಸ್ಪಿ, ಸಿಪಿಐ ಕೂಡ ಚರ್ಚಿಸಿದ್ದಾರೆ. ಬರುವ ದಿನಗಳಲ್ಲಿ ಇವುಗಳನ್ನು ನಗರಸಭೆ ಆಸ್ತಿಯೆಂದು ಪರಿಗಣಿಸಿ ನಿರ್ವಹಣೆ ಮಾಡಲಾಗುವುದು ಎಂದು ನಗರಸಭೆ ಪ್ರಭಾರಿ ಪೌರಾಯುಕ್ತರಾಗಿರುವ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT