ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ವಾರದೊಳಗೆ ಪದವಿ ಕಾಲೇಜು ಸ್ಥಳಾಂತರ

ಶಿರಸಿ:ಮೂರುವರೆ ಸಾವಿರ ವಿದ್ಯಾರ್ಥಿಗಳ ದಾಖಲಾತಿ ನಿರೀಕ್ಷೆ
Last Updated 8 ಅಕ್ಟೋಬರ್ 2021, 8:13 IST
ಅಕ್ಷರ ಗಾತ್ರ

ಶಿರಸಿ: ಸ್ಥಾಪನೆಗೊಂಡು ಒಂದೂವರೆ ದಶಕದ ಬಳಿಕ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಈ ಶೈಕ್ಷಣಿಕ ವರ್ಷಕ್ಕೆ ಹೊಸ ಕಟ್ಟಡಕ್ಕೆ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಗೊಳ್ಳುತ್ತಿದೆ. ಈ ಪ್ರಕ್ರಿಯೆ ವಾರದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಬನವಾಸಿ ರಸ್ತೆಯ ಟಿಪ್ಪು ನಗರದಲ್ಲಿ ₹12 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಗೊಂಡಿದೆ. ನಲ್ವತ್ತಕ್ಕೂ ಹೆಚ್ಚು ಕೊಠಡಿಗಳನ್ನು ನಿರ್ಮಿಸಲಾಗಿದೆ. ಕಾಲೇಜಿಗೆ ಸಂಪರ್ಕ ರಸ್ತೆಯೂ ಈಚೆಗೆ ನಿರ್ಮಾಣಗೊಂಡಿದೆ.

ಸದ್ಯ ಐದು ರಸ್ತೆ ವೃತ್ತದ ಬಳಿ ಇರುವ ರಾಯಪ್ಪ ಹುಲೇಕಲ್ ಶಾಲೆ ಕಟ್ಟಡದಲ್ಲಿ ಕಾಲೇಜು ನಡೆಯುತ್ತಿದೆ. ಬಿ.ಎಸ್ಸಿ, ಬಿಬಿಎ ವಿಭಾಗದ ತರಗತಿಗಳು ಮಾತ್ರ ಕಳೆದ ಎರಡು ವರ್ಷದಿಂದ ಹೊಸ ಕಟ್ಟಡದಲ್ಲಿ ನಡೆಯುತ್ತಿವೆ. ಉಳಿದಂತೆ ಬಿ.ಕಾಂ., ಬಿ.ಎ. ತರಗತಿಗಳನ್ನೂ ಅಲ್ಲಿಗೆ ಸ್ಥಳಾಂತರಿಸಲಾಗುತ್ತಿದೆ.

‘ಅ.11 ರಿಂದ ತರಗತಿಗಳು ಆರಂಭಗೊಳ್ಳಲಿದ್ದು ಹಳೆಯ ಕಟ್ಟಡದ ಬದಲು ಹೊಸ ಕಟ್ಟಡದಲ್ಲಿ ಕಾಲೇಜು ಆರಂಭಿಸುತ್ತಿದ್ದೇವೆ’ ಎಂದು ಪ್ರಾಚಾರ್ಯ ಜನಾರ್ಧನ ಭಟ್ಟ ತಿಳಿಸಿದರು.

‘ಪ್ರಸ್ತುತ ವರ್ಷಕ್ಕೆ 3,200 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಇನ್ನೂ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಬರುತ್ತಿದ್ದು ಸಂಖ್ಯೆ ಮೂರುವರೆ ಸಾವಿರ ದಾಟಿದರೂ ಅಚ್ಚರಿ ಪಡಬೇಕಿಲ್ಲ’ ಎಂದು ತಿಳಿಸಿದರು.

‘ಹೊಸ ಕಟ್ಟಡದಲ್ಲಿ ಇಷ್ಟೊಂದು ಪ್ರಮಾಣದ ವಿದ್ಯಾರ್ಥಿಗಳನ್ನು ಏಕಕಾಲಕ್ಕೆ ಕೂರಿಸಿ ಪಾಠ ಮಾಡಲು ಸ್ಥಳಾವಕಾಶದ ಕೊರತೆ ಉಂಟಾಗಬಹುದು. ಹೀಗಾಗಿ ಅಲ್ಲಿಯೂ ಪಾಳಿ ಪ್ರಕಾರ ತರಗತಿ ನಡೆಸುವ ಬಗ್ಗೆ ಯೋಚಿಸಲಾಗುತ್ತಿದೆ. ಸ್ಥಳಾಂತರ ಪೂರ್ಣಗೊಂಡ ಬಳಿಕವೇ ಅದು ಸ್ಪಷ್ಟವಾಗುತ್ತದೆ’ ಎಂದರು.

‘ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಉಳಿದ ಸೌಕರ್ಯಗಳನ್ನು ಅಳವಡಿಸುವ ಪ್ರಕ್ರಿಯೆಯೂ ನಡೆಯಬೇಕಿದೆ. ತಾತ್ಕಾಲಿಕ ಕಟ್ಟಡದಲ್ಲಿರುವ ಪೀಠೋಪಕರಣ, ದಾಖಲೆಗಳನ್ನೂ ಸ್ಥಳಾಂತರಿಸಬೇಕಿದೆ. ಅ.16ರ ವೇಳೆಗೆ ಇವೆಲ್ಲ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಇದೆ’ ಎಂದು ವಿವರಿಸಿದರು.

‘ಸರ್ಕಾರಿ ಪದವಿ ಕಾಲೇಜಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಏಕಕಾಲಕ್ಕೆ ಕೊರತೆ ನಿವಾರಣೆ ಮಾಡಲಾಗದಿದ್ದರೂ ಹಂತ ಹಂತವಾಗಿ ಬೇಕಿರುವ ಎಲ್ಲ ಸೌಲಭ್ಯ ನೀಡುತ್ತೇವೆ’ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿದರು.

ಉಪನ್ಯಾಸಕರ ಕೊರತೆಯ ಚಿಂತೆ:ರಾಜ್ಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡ ಸರ್ಕಾರಿ ಪದವಿ ಕಾಲೇಜುಗಳ ಪೈಕಿ ಶಿರಸಿಯ ಕಾಲೇಜು ಸೇರಿದ್ದು ಇಲ್ಲಿ ಉಪನ್ಯಾಸಕರ ಕೊರತೆ ಸಮಸ್ಯೆ ಗಂಭೀರವಾಗಿದೆ. ಮೂರು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರುವ ಕಾಲೇಜಿನಲ್ಲಿ ಪ್ರಸ್ತುತ 28 ಖಯಂ ಉಪನ್ಯಾಸಕರಿದ್ದಾರೆ. 120 ಅತಿಥಿ ಉಪನ್ಯಾಸಕರು ಕಳೆದ ವರ್ಷ ಕಾಯರ್ನಿರ್ವಹಿಸಿದ್ದರು.

‘ಹೊಸ ಶಿಕ್ಷಣ ನೀತಿ ಈ ಬಾರಿ ಅನುಷ್ಠಾನಕ್ಕೆ ಬರುವ ಕಾರಣ ವಿಷಯಗಳು ಹೆಚ್ಚಲಿದೆ. ಇದಕ್ಕೆ ತಕ್ಕಂತೆ ಉಪನ್ಯಾಸಕರ ನೇಮಕಾತಿ ಆಗದಿದ್ದರೆ ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆ ಆಗುವ ಆತಂಕವಿದೆ’ ಎಂದು ಹೆಸರು ಹೇಳಲಿಚ್ಚಿಸದ ಉಪನ್ಯಾಸಕರೊಬ್ಬರು ಸಮಸ್ಯೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT