ಶನಿವಾರ, ಜೂಲೈ 4, 2020
24 °C
ಇನ್ನೂ ಆರಂಭವಾಗದ ಸೇವೆ; ಮೇಲೇಳದ ಕಟ್ಟಡ

ಬಡವರಿಗೆ ಮರೀಚಿಕೆಯಾದ ಇಂದಿರಾ ಕ್ಯಾಂಟೀನ್‌

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಬಡವರಿಗೆ ಕಡಿಮೆ ದರದಲ್ಲಿ ಒಪ್ಪತ್ತಿನ ಊಟ ಒದಗಿಸುವ ಇಂದಿರಾ ಕ್ಯಾಂಟೀನ್ ಸೌಲಭ್ಯ ನಗರದ ಜನರಿಗೆ ಮರೀಚಿಕೆಯಾಗಿದೆ. ಕಟ್ಟಡ ನಿರ್ಮಾಣದ ಗುದ್ದಲಿಪೂಜೆ ನಡೆದು ಎರಡು ವರ್ಷ ಸಮೀಪಿಸಿದರೂ, ತಳಪಾಯದ ಮೇಲೆ ಕಂಬಗಳು ಎದ್ದಿಲ್ಲ.

ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿದ್ದಾಗ ಪ್ರಾರಂಭಿಸಿದ್ದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ಇಂದಿರಾ ಕ್ಯಾಂಟೀನ್ ನಗರದಲ್ಲೂ ಶುರುವಾಗುತ್ತದೆಂಬ ಸುದ್ದಿ ಕೇಳಿದಾಗ ಬಡವರು, ಕೂಲಿಕಾರ್ಮಿಕರು, ದಿನಗೂಲಿ ನೌಕರರು ಸಂತಸಪಟ್ಟಿದ್ದರು. ಮಧ್ಯಾಹ್ನದ ಊಟದ ವೆಚ್ಚ ತಗ್ಗಬಹುದೆಂದು ಅವರು ಕನಸು ಕಂಡಿದ್ದರು. ಆದರೆ, ನಗರದಲ್ಲಿ ಈ ಕ್ಯಾಂಟೀನ್‌ಗೆ ಸ್ಥಳ ನಿಗದಿಪಡಿಸಿದ್ದು ಹೊರತುಪಡಿಸಿದರೆ, ಮಧ್ಯಾಹ್ನ ಊಟದ ಕಾರ್ಯಕ್ರಮ ಇನ್ನೂ ಅನುಷ್ಠಾನಗೊಂಡಿಲ್ಲ.

ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ಪೂರ್ಣಗೊಂಡು, ಸೇವೆ ಆರಂಭಿಸಿದೆ. ಆದರೆ, ಶಿರಸಿಯಲ್ಲಿ ಉದ್ದೇಶಿತ ಇಂದಿರಾ ಕ್ಯಾಂಟೀನ್ ಜಾಗ ವಾಹನ ನಿಲುಗಡೆಯ ಸ್ಥಳವಾಗಿದೆ. ನಗರದ ಹೃದಯ ಭಾಗದಲ್ಲಿ ಮುಖ್ಯ ಅಂಚೆ ಕಚೇರಿ ಹಿಂಭಾಗದ ಸರ್ವೆಸಂಖ್ಯೆ 1007ರಲ್ಲಿ 2018ರ ಅಕ್ಟೋಬರ್‌ನಲ್ಲಿ ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು.

ಜಾಗದ ಗೊಂದಲದಿಂದ ಪೊಲೀಸರ ಬಂದೋಬಸ್ತಿನಲ್ಲಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಗುತ್ತಿಗೆ ಪಡೆದಿದ್ದ ಕೆಇಎಫ್‌ ಇನ್‌ಫ್ರಾಸ್ಟ್ರಕ್ಚರ್ ಕಂಪನಿಗೆ 60 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಆದರೆ, ಎರಡು ವರ್ಷ ಸಮೀಪಿಸಿದರೂ ಈ ಕಂಪನಿ ಕಾಮಗಾರಿ ಆರಂಭಿಸಿಲ್ಲ. ಹೀಗಾಗಿ, ಕ್ಯಾಂಟೀನ್ ಆರಂಭಕ್ಕೆ ಖರೀದಿಸಿರುವ ಸಾಮಗ್ರಿಗಳು ನಗರಸಭೆಯ ಗೋದಾಮಿನಲ್ಲಿ ದೂಳು ಹಿಡಿದಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘ಸ್ಥಳದ ಸಮಸ್ಯೆ ಬಗೆಹರಿದರೂ ಇಂದಿರಾ ಕ್ಯಾಂಟೀನ್ ಕಾಮಗಾರಿ ನಡೆಸಲು ಸರ್ಕಾರ ನಿರಾಸಕ್ತಿ ತೋರಿದೆ. ಕೊರೊನಾ ವೈರಸ್‌ ನಿಯಂತ್ರಣಕ್ಕೆ ಲಾಕ್‌ಡೌನ್ ಘೋಷಣೆಯಾದ ಮೇಲೆ ಕೂಲಿ ಕಾರ್ಮಿಕರು, ಬಡವರು ಕೆಲಸ ಕಳೆದುಕೊಂಡಿದ್ದಾರೆ. ಅವರ ಕಷ್ಟದ ಸಮಯದಲ್ಲಿ ಇಂದಿರಾ ಕ್ಯಾಂಟೀನ್ ಇದ್ದರೆ, ಕಡಿಮೆ ದರದಲ್ಲಿ ಆಹಾರ ಸಿಗುತ್ತಿತ್ತು ಎಂದು ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ದೂರಿದರು. 

ಜಿಲ್ಲೆಯ ಇತರೆಡೆಗಳಲ್ಲಿ ಕ್ಯಾಂಟೀನ್ ಆರಂಭವಾಗಿದ್ದರೂ, ಅತಿ ಹೆಚ್ಚು ವಾಣಿಜ್ಯ ವಹಿವಾಟು ನಡೆಯುವ ಶಿರಸಿಯಲ್ಲಿ ಮಾತ್ರ ವಿಳಂಬವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮುಂಡಗೋಡಿನಲ್ಲಿ ಇತ್ತೀಚೆಗೆ ಕ್ಯಾಂಟೀನ್ ಉದ್ಘಾಟನೆ ಮಾಡಿದ್ದಾರೆ. ಶಿರಸಿಯಲ್ಲೂ ಶೀಘ್ರ ಆರಂಭಿಸಲು ಆಸಕ್ತಿ ತೋರಬೇಕು ಎಂದು ಒತ್ತಾಯಿಸಿದರು.

ಇಂದಿರಾ ಕ್ಯಾಂಟೀನ್ ಕಾಮಗಾರಿ ಪೂರ್ಣಗೊಂಡು ಸೇವೆ ಆರಂಭಿಸಬೇಕಿತ್ತು. ಗುತ್ತಿಗೆದಾರರ ವಿಳಂಬದಿಂದ ಇದು ಸಾಧ್ಯವಾಗಿಲ್ಲ. ತ್ವರಿತವಾಗಿ ಕೆಲಸ ಮುಗಿಸುವಂತೆ ಸೂಚಿಸಲಾಗಿದೆ ಎಂದು ಪೌರಾಯುಕ್ತ ರಮೇಶ ನಾಯಕ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು