ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿಹೊಳೆ ಸೇತುವೆ ನಿರ್ಮಾಣಕ್ಕೆ ಒತ್ತಾಯ

ಮಳೆಗಾಲದಲ್ಲಿ ‘ಭಾರ’ವಾಗುವ ಹಗುರಮನೆ ಗ್ರಾಮಸ್ಥರ ಬದುಕು
Last Updated 11 ಜೂನ್ 2022, 13:09 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ವಾನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಗುರಮನೆ, ಮೇಲಿನ ಗದ್ದೆ ಗ್ರಾಮಗಳ ಜನರಿಗೆ ಮಳೆಗಾಲದ ವೇಳೆ ರಸ್ತೆ ಸಂಪರ್ಕ ಸಮಸ್ಯೆ ಎದುರಾಗುತ್ತಿದೆ. ವರ್ಷದ ಎಂಟು ತಿಂಗಳು ರಭಸದಿಂದ ಹರಿಯುವ ಬಿಳಿಹೊಳೆಗೆ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.

ಈ ಎರಡೂ ಗ್ರಾಮದಲ್ಲಿ ಸುಮಾರು 31 ಕುಟುಂಬಗಳಿದ್ದು, ನೂರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈ ಗ್ರಾಮದ 18 ವಿದ್ಯಾರ್ಥಿಗಳು ಸಮೀಪದ ಶಾಲೆ, ಪಟ್ಟಣದ ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಮಳೆಗಾಲದ ಅವಧಿಯೂ ಸೇರಿದಂತೆ ಡಿಸೆಂಬರ್‌ವರೆಗೂ ಗ್ರಾಮಸ್ಥರು ಹೊರಗಿನ ಸಂಪರ್ಕ ಸಾಧಿಸಲು ಕಷ್ಟವಾಗುತ್ತಿದೆ.

‘ಮಳೆಗಾಲದ ಪೂರ್ವದಲ್ಲಿ ಮುಂದಿನ 8 ತಿಂಗಳಿಗೆ ಅವಶ್ಯವಾದ ಆಹಾರ ಸಾಮಗ್ರಿ, ಕೃಷಿ ಚಟುವಟಿಕೆ ಪೂರಕವಾದ ಸಾಮಗ್ರಿ ದಾಸ್ತಾನಿಟ್ಟುಕೊಳ್ಳುತ್ತೇವೆ. ಈ ಅವಧಿಯಲ್ಲಿ ಗ್ರಾಮಕ್ಕೆ ಯಾವುದೇ ವಾಹನ ಬರಲು ಸಾಧ್ಯವಾಗದು. ಕಾಲ್ನಡಿಗೆಯಲ್ಲಿ ತೆರಳಬೇಕೆಂದರೆ ಕಾಲುಸಂಕ ದಾಟಿ ಹೋಗಬೇಕಾಗುತ್ತದೆ. ರೋಗಿಗಳನ್ನು ಕರೆದೊಯ್ಯಲು, ವಿದ್ಯಾರ್ಥಿಗಳು ಸಾಗಲು ತೊಡಕು ಉಂಟಾಗುತ್ತಿದೆ’ ಎನ್ನುತ್ತಾರೆ ಗ್ರಾಮಸ್ಥರು.

‘ಗ್ರಾಮಕ್ಕೆ ಹಿಂದೆ ಮಂಜೂರಾಗಿದ್ದ ಸೇತುವೆಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಸರ್ವಋತು ರಸ್ತೆ ನಿರ್ಮಿಸಿದರೆ ಅನುಕೂಲ ಆಗಲಿದೆ. ಈ ಬಗ್ಗೆ ಹಲವಾರು ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ’ ಎನ್ನುತ್ತಾರೆ ಗ್ರಾಮಸ್ಥರಾದ ನಾರಾಯಣ ಗೌಡ, ಗೌರಿ ಗೌಡ, ಸವಿತಾ ಗೌಡ ಇತರರು.

‘ಸ್ವಾತಂತ್ರ್ಯ ದೊರೆತು ಏಳುವರೆ ದಶಕ ಕಳೆದರೂ ಹಿಂದುಳಿದ ಪ್ರದೇಶದ ಮೂಲಭೂತ ಸೌಕರ್ಯದಿಂದ ಗ್ರಾಮವು ವಂಚಿತವಾಗಿರುವುದು ಖೇದಕರ. ಈ ಗ್ರಾಮದ ಸೌಕರ್ಯಕ್ಕಾಗಿ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ರವೀಂದ್ರ ನಾಯ್ಕ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT