ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಗಣಪತಿಯ ಹಬ್ಬ: ಸಣ್ಣ ಮೂರ್ತಿಗಳಿಗೇ ಭಕ್ತರ ಬೇಡಿಕೆ

ಕೋವಿಡ್ ಕಾರಣದಿಂದ ಚೌತಿ ಹಬ್ಬದ ಸರಳ ಆಚರಣೆಗೆ ಸರ್ಕಾರದ ಸೂಚನೆ
Last Updated 20 ಆಗಸ್ಟ್ 2021, 14:25 IST
ಅಕ್ಷರ ಗಾತ್ರ

ಕಾರವಾರ: ಸಂಕಷ್ಟಹರ ಗಣಪತಿಯ ಹಬ್ಬದ ದಿನಗಳು ಹತ್ತಿರವಾಗುತ್ತಿದ್ದಂತೆ, ನಗರದ ವಿವಿಧೆಡೆ ವಿಗ್ರಹಗಳ ತಯಾರಿ ಚುರುಕು ಪಡೆದಿದೆ. ಹಬ್ಬದ ವೈಭವದ ಆಚರಣೆಗೆ ಈ ಬಾರಿಯೂ ಕೋವಿಡ್ ಅಡ್ಡಿ ಬಂದಿದೆ. ಹಾಗಾಗಿ, ತಯಾರಕರು ಸಣ್ಣ ಮೂರ್ತಿಗಳನ್ನು ಹೆಚ್ಚು ತಯಾರಿಸುತ್ತಿದ್ದಾರೆ.

ಕೋವಿಡ್ ನಿಯಂತ್ರಣ ಕ್ರಮದ ಭಾಗವಾಗಿ ಈ ಬಾರಿಯೂ ಸಾರ್ವಜನಿಕ ಗಣೇಶೋತ್ಸವಗಳಿಗೆ ಸರ್ಕಾರ ಅನುಮತಿ ನಿರಾಕರಿಸಿದೆ. ಅಲ್ಲದೇ ಹೊರಾಂಗಣಗಳಲ್ಲಿ ಗೌರಿ, ಗಣೇಶ ವಿಗ್ರಹಗಳ ಸ್ಥಾಪನೆಯನ್ನೂ ನಿರ್ಬಂಧಿಸಲಾಗಿದೆ. ಆದರೆ, ದೇವಸ್ಥಾನಗಳಲ್ಲಿ ಹಾಗೂ ಮನೆಗಳಲ್ಲಿ ಸರಳವಾಗಿ ಆಚರಿಸುವುದಕ್ಕೆ ಅವಕಾಶವಿದೆ. ವಿಗ್ರಹಗಳನ್ನು ಪ್ರತಿಷ್ಠಾಪನೆಗೆ ತರುವಾಗ ಹಾಗೂಪೂಜಿಸಿದ ಬಳಿಕ ವಿಸರ್ಜನೆಗೆ ತೆಗೆದುಕೊಂಡು ಹೋಗುವಾಗ ಮೆರವಣಿಗೆ, ಮನೋರಂಜನಾ ಕಾರ್ಯಕ್ರಮ ನಡೆಸಬಾರದು ಎಂದು ಸರ್ಕಾರ ಸೂಚಿಸಿದೆ.

ಈ ಬಾರಿ ಅದ್ಧೂರಿ ಹಬ್ಬದಾಚರಣೆಗೆ ಅವಕಾಶ ಇಲ್ಲದ ಕಾರಣ ಮನೆಗಳಲ್ಲೇ ಪೂಜಿಸಲು ಅನುಕೂಲವಾಗುವಂಥ ವಿಗ್ರಹಗಳನ್ನೇ ತಯಾರಿಸುತ್ತಿರುವುದಾಗಿ ತಯಾರಕರು ಹೇಳುತ್ತಾರೆ.

‘ಈ ಬಾರಿ ಕೋವಿಡ್ ಕಾರಣದಿಂದ ಮಹಾರಾಷ್ಟ್ರ, ಗೋವಾದಂಥ ರಾಜ್ಯಗಳಲ್ಲಿರುವವರಿಗೆ ಊರಿಗೆ ಬರಲು ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ. ಹಾಗಾಗಿ ಹಬ್ಬ ಸರಳವಾಗಿ ನೆರವೇರಲಿದೆ. ಆದ್ದರಿಂದ ಸಣ್ಣ ವಿಗ್ರಹಗಳಿಗೇ ಬೇಡಿಕೆಯಿದೆ’ ಎನ್ನುತ್ತಾರೆ ಮೂರ್ತಿ ತಯಾರಕರು.

ಕೋವಿಡ್‌ನಿಂದಾಗಿ ಕಳೆದ ವರ್ಷವೂ ಗಣೇಶೋತ್ಸವ ಕಳೆಗುಂದಿತ್ತು. ಸಾರ್ವಜನಿಕ ಆಚರಣೆಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಅವಕಾಶ ಇರಲಿಲ್ಲ. ಈ ಬಾರಿ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದರೂ ಮೂರನೇ ಅಲೆಯ ಎಚ್ಚರಿಕೆ ಕೇಳಿಬರುತ್ತಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚು ಜನ ಒಂದೇ ಕಡೆ ಸೇರದಂತೆ ನೋಡಿಕೊಳ್ಳುವುದು ಅನಿವಾರ್ಯವಾಗಿದೆ.

ಮಣ್ಣು ತರಲೂ ಸಮಸ್ಯೆ:‘ಗಣಪತಿ ವಿಗ್ರಹಕ್ಕೆ ಬೇಕಾದ ಮಣ್ಣು ತರಲೂ ಕೋವಿಡ್ ಕಾರಣದಿಂದ ಸಮಸ್ಯೆಯಾಗಿದೆ. ಮೊದಲು ಗೋವಾ ಗಡಿಯಿಂದ ತರುತ್ತಿದ್ದೆವು. ಆದರೆ, ಈ ಬಾರಿ ಗಡಿಯಲ್ಲಿ ಹೆಚ್ಚಿನ ನಿರ್ಬಂಧಗಳಿವೆ. ಹಾಗಾಗಿ, ಈ ಬಾರಿ ಕುಮಟಾದಿಂದ ತರಿಸಿದ್ದೇವೆ’ ಎನ್ನುತ್ತಾರೆ ಕಾರವಾರದ ಕಳಸವಾಡದ ವಿಗ್ರಹ ತಯಾರಕ ಅಜಯ್ ಮೋಹನ ಆಚಾರಿ.

ಅವರ ಕುಟುಂಬವು ತಲೆಮಾರುಗಳಿಂದ ಈ ಕಾಯಕದಲ್ಲಿ ತೊಡಗಿದ್ದು, ಇವರು 22 ವರ್ಷಗಳಿಂದ ಕಲಾರಾಧನೆ ಮಾಡುತ್ತಿದ್ದಾರೆ.

‘ಒಂದು ಲಾರಿ ಲೋಡ್ ಮಣ್ಣನ್ನು ನಾಲ್ಕೈದು ಮಂದಿ ಹಂಚಿಕೊಳ್ಳುತ್ತೇವೆ. ಲೋಡ್‌ಗೆ ₹ 10 ಸಾವಿರದಿಂದ ₹ 15 ಸಾವಿರ ಖರ್ಚಾಗುತ್ತದೆ. ಒಂದು ಅಡಿ ಎತ್ತರದ ವಿಗ್ರಹಕ್ಕೆ ಒಂದು ಬುಟ್ಟಿ ಮಣ್ಣು ಬೇಕು. ಇದರ ಪ್ರಕಾರ ಒಂದು ಲೋಡ್ ಮಣ್ಣಿನಿಂದ ಸುಮಾರು 200 ವಿಗ್ರಹಗಳನ್ನು ಮಾಡಲು ಸಾಧ್ಯವಿದೆ’ ಎಂದು ಅವರು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT