ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಕಾಡು ಅಣಬೆಗೆ ಭಾರಿ ಬೇಡಿಕೆ

ಮಳೆಗಾಲದ ಅಡುಗೆ ರುಚಿ ಹೆಚ್ಚಿಸುವ ವಿಶೇಷ ಅತಿಥಿ
Last Updated 31 ಜುಲೈ 2022, 19:31 IST
ಅಕ್ಷರ ಗಾತ್ರ

ಶಿರಸಿ: ಮಳೆ ಅಬ್ಬರಿಸಿದ ಕೆಲವು ದಿನಗಳ ಬಳಿಕ ಕಾಡುಮೇಡುಗಳಲ್ಲಿ ಹುಟ್ಟಿಕೊಂಡ ಅಣಬೆಗಳು ನಗರದ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಬಿಳಿ ಅಣಬೆಗೆ ಭಾರಿ ಬೇಡಿಕೆಯೂ ಬಂದಿದೆ.

ಆರಂಭದಲ್ಲೇ ಮಳೆ ಉತ್ತಮವಾಗಿ ಸುರಿದರೆ ಜುಲೈ ವೇಳೆಗೆ ಬಿಳಿ ಅಣಬೆಗಳು ಹೆಚ್ಚಾಗಿ ಸಿಗುತ್ತವೆ. ಆಗಸ್ಟ್ ಬಳಿಕ ಕಪ್ಪು ಅಣಬೆಗಳ ಆವಕ ಹೆಚ್ಚಾಗುತ್ತದೆ. ಸದ್ಯ ಬಿಳಿ ಅಣಬೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅಣಬೆಯ ಸಾಂಬಾರ್, ಫ್ರೈ, ಪಲ್ಯ ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ಚಪ್ಪರಿಸುವ ಖಾದ್ಯಪ್ರೀಯರ ಸಂಖ್ಯೆ ಸಾಕಷ್ಟಿದೆ.

ಕಳೆದ ಕೆಲವು ದಿನಗಳಿಂದ ನಗರದ ಬಿಡ್ಕಿಬೈಲ್, ದೇವಿಕೆರೆ ವೃತ್ತ, ಹುಬ್ಬಳ್ಳಿ ರಸ್ತೆ, ಎ.ಪಿ.ಎಂ.ಸಿ. ಗೇಟ್, ಜೂ ವೃತ್ತ, ಯಲ್ಲಾಪುರ ರಸ್ತೆ ಹೀಗೆ ಹಲವು ಕಡೆಗಳಲ್ಲಿ ‘ಅಣಬೆ’ ವ್ಯಾಪಾರಕ್ಕೆ ಕುಳಿತ ವ್ಯಾಪಾರಿಗಳು ಕಾಣಸಿಗುತ್ತಿದ್ದಾರೆ.

ವ್ಯಾಪಾರಿಗಳ ಬುಟ್ಟಿಗಳಲ್ಲಿ ತುಂಬಿಕೊಂಡು ಬರುವ ಮೊಗ್ಗಿನ ಅಣಬೆ, ಅರಳಿದ ಅಣಬೆಗಳು ಕೆಲವೇ ನಿಮಿಷಗಳಲ್ಲಿ ಖಾಲಿಯಾಗುತ್ತಿವೆ. ಅದರಲ್ಲೂ ಮೊಗ್ಗಿನ ಅಣಬೆ ಖರೀದಿಸುವವರೇ ಹೆಚ್ಚಿದ್ದಾರೆ. ಪ್ರತಿ 100 ಅಣಬೆಗೆ ಸರಾಸರಿ ₹600 ರಿಂದ ₹650 ದರ ನಿಗದಿಯಾಗಿದೆ.

ಕಳೆದ ವರ್ಷ ಮಳೆಗಾಲದ ಅವಧಿಯಲ್ಲಿ ತಲಾ 100 ಬಿಳಿ ಅಣಬೆ ₹400 ಆಸುಪಾಸಿನ ದರಕ್ಕೆ ಮಾರಾಟಗೊಂಡಿತ್ತು. ಈ ಬಾರಿ ದರವೂ ಏಕಾಏಕಿ ಹೆಚ್ಚಳವಾಗಿದೆ. ಆದರೆ ಖರೀದಿಗೆ ಗ್ರಾಹಕರ ಉತ್ಸಾಹಕ್ಕೆ ಬರ ಎದುರಾಗಿಲ್ಲ.

ಮಳೆ ಜೋರಾದ ಬಳಿಕ ಗ್ರಾಮೀಣ ಪ್ರದೇಶದ ಬೆಟ್ಟ, ತೋಟ, ಅರಣ್ಯ ಪ್ರದೇಶದ ಅಂಚುಗಳಲ್ಲಿ ಅಣಬೆಗಳು ಬೆಳೆಯುತ್ತವೆ. ಇವುಗಳನ್ನು ಕೀಳುವ ಕೆಲವು ರೈತರು ನೇರವಾಗಿ ತಾವೇ ಪೇಟೆಗೆ ಮಾರಾಟಕ್ಕೆ ತರುತ್ತಾರೆ. ಕೆಲವರು ಮಧ್ಯವರ್ತಿಗಳಿಗೆ ಸಿಕ್ಕಷ್ಟು ದರಕ್ಕೆ ಮಾರುತ್ತಿದ್ದಾರೆ.

‘ಗ್ರಾಮೀಣ ಭಾಗದ ಜನರು ಅಣಬೆ ಕಿತ್ತು ನೇರವಾಗಿ ಮಾರಾಟಕ್ಕೆ ತರುತ್ತಿದ್ದಾಗ ದರ ಕಡಿಮೆ ಇತ್ತು. ಈಚೆಗೆ ಪೇಟೆಯಿಂದ ಹಳ್ಳಿಗೆ ಹೋಗಿ ಅಣಬೆ ತರುವ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಈ ಕಾರಣಕ್ಕಾಗಿ ದರವೂ ದುಬಾರಿಯಾಗುತ್ತಿದೆ. ಅಣಬೆ ಕೀಳುವವರಿಂದ ಕಡಿಮೆ ದರಕ್ಕೆ ಖರೀದಿಸಿ ಹೆಚ್ಚು ದರಕ್ಕೆ ಮಾರಾಟ ಮಾಡಲಾಗುತ್ತಿದೆ’ ಎಂದು ಆರೋಪಿಸುತ್ತಾರೆ ನೀಲೆಕಣಿಯ ರಾಜು ನಾಯ್ಕ.

ಲಭ್ಯತೆ ಕಡಿಮೆ: ‘ಹಿಂದಿನ ದಶಕಗಳಿಗೆ ಹೋಲಿಸಿದರೆ ಅಣಬೆಗಳ ಲಭ್ಯತೆ ಪ್ರಮಾಣ ಕಡಿಮೆಯಾಗಿದೆ. ಅರಣ್ಯ ನಾಶ, ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಳವಾಗಿದ್ದರಿಂದ ಅಣಬೆಗಳು ಬೆಳೆಯಲು ಅಗತ್ಯ ಸಾರ ಸಿಗುತ್ತಿಲ್ಲ. ಹೀಗಾಗಿ ಬೇಡಿಕೆಗೆ ತಕ್ಕಷ್ಟು ಅಣಬೆ ಲಭಿಸುತ್ತಿಲ್ಲ’ ಎನ್ನುತ್ತಾರೆ ವ್ಯಾಪಾರಿ ಈಶ್ವರ ಗೌಡ.

‘ಕೃತಕವಾಗಿ ಬೆಳೆಸಿದ ಅಣಬೆಗಳ ಸೇವನೆ ಹೆಚ್ಚುತ್ತಿರುವುದರಿಂದ ನೈಸರ್ಗಿಕವಾಗಿ ಬೆಳೆಯುವ ಅಣಬೆ ಕೀಳುವವರೂ ಕಡಿಮೆಯಾಗಿದ್ದಾರೆ. ಹೀಗಾಗಿ ಲಭ್ಯತೆಯ ಪ್ರಮಾಣ ಕಡಿಮೆಯಾಗಿರುವುದು ಅಣಬೆಗೆ ದುಬಾರಿ ದರ ನಿಗದಿಯಾಗಲು ಕಾರಣ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT