ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡಿಗೆ ಸಿಗದ ಬಸ್ ಘಟಕ ಭಾಗ್ಯ

ಪಕ್ಕದ ತಾಲ್ಲೂಕುಗಳಿಂದ ಬರುವ ಬಸ್ ಅವಲಂಬನೆ ಅನಿವಾರ್ಯ
Last Updated 11 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಮುಂಡಗೋಡ: ಸಾರಿಗೆ ಸಂಸ್ಥೆ ಬಸ್ ನಿರ್ಮಾಣ ಘಟಕ ನಿರ್ಮಾಣಕ್ಕೆ ಜಾಗ ಗುರುತಿಸಿ, ಕಾಂಪೌಂಡ್ ಗೋಡೆ ಸಹ ನಿರ್ಮಿಸಿ, ವರ್ಷಗಳು ಉರುಳಿವೆ. ಆದರೆ, ಉದ್ದೇಶಿತ ಕಟ್ಟಡ ನಿರ್ಮಾಣ ಐದಾರು ವರ್ಷಗಳಿಂದ ನಿಗದಿಪಡಿಸಿದ ಜಾಗದಲ್ಲಿ ಗಿಡಮರಗಳು ಬೆಳೆದಿದ್ದು ಬಿಟ್ಟರೆ, ಕಾಮಗಾರಿ ನಡೆದಿಲ್ಲ.

ಪಟ್ಟಣದ ಎಪಿಎಂಸಿ ಸನಿಹ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಬಸ್‌ ಡಿಪೊ ನಿರ್ಮಿಸಲು ಏಳೆಂಟು ವರ್ಷಗಳ ಹಿಂದೆಯೇ ಜಾಗ ಗುರುತಿಸಲಾಗಿದೆ. ತಾಲ್ಲೂಕಿಗೆ ಸ್ವಂತ ಘಟಕ ಇಲ್ಲದಿರುವುದರಿಂದ, ಗ್ರಾಮೀಣ ಭಾಗದ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲದೇ, ಹೆಚ್ಚು ಜನರು ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದೆ. ಅಲ್ಲದೇ ಪಕ್ಕದ ತಾಲ್ಲೂಕುಗಳಿಂದ ಬರುವ ಬಸ್‌ಗಳಿಂದಲೇ ತಾಲ್ಲೂಕಿನ ಸಾರಿಗೆ ವ್ಯವಸ್ಥೆ ನಿರ್ಧರಿತವಾಗುತ್ತಿದೆ. ಕೆಲವೊಮ್ಮೆ ‘ಗುಜರಿ’ ಬಸ್‌ಗಳಿಂದ ಪ್ರಯಾಣಿಕರು ರೋಸಿಹೋದ ಘಟನೆಗಳು ಜರುಗಿವೆ.

‘ತಾಲ್ಲೂಕಿನ ಗ್ರಾಮೀಣ ಭಾಗಗಳಿಗೆ ರಸ್ತೆ ಸಾರಿಗೆ ಕಲ್ಪಿಸಬೇಕೆಂದರೆ, ಪಕ್ಕದ ಘಟಕಗಳಿಗೆ ಮನವಿ ಮಾಡಬೇಕಾಗುತ್ತದೆ. ಈಚೆಗೆ ಅರಿಶಿಣಗೇರಿ ಗ್ರಾಮಕ್ಕೆ ದಶಕದ ನಂತರ ಬೇರೆ ಘಟಕದಿಂದ ಬಸ್‌ ಸಂಚಾರ ಆರಂಭಿಸಲಾಗಿದೆ. ಸುತ್ತಲಿನ ಎಲ್ಲ ತಾಲ್ಲೂಕುಗಳಿಗೆ ಬಸ್‌ ಘಟಕಗಳಿವೆ. ಆದರೆ ಈ ತಾಲ್ಲೂಕಿಗೆ ಮಾತ್ರ ಇಲ್ಲದಿರುವುದು ಅಭಿವೃದ್ಧಿಗೆ ಹಿನ್ನಡೆಯಾದಂತೆ’ ಎನ್ನುತ್ತಾರೆ ಪಟ್ಟಣ ಪಂಚಾಯ್ತಿ ಸದಸ್ಯ ಮಂಜುನಾಥ ಹರಮಲಕರ್.

‘ಮುಂಡಗೋಡ ಮಾರ್ಗವಾಗಿ ವಿವಿಧ ಘಟಕಗಳ 200ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ. ಕಲಘಟಗಿ, ಹಾನಗಲ್, ಹಾವೇರಿ, ಯಲ್ಲಾಪುರ ಹಾಗೂ ಶಿರಸಿ ಘಟಕಗಳ 20ಕ್ಕಿಂತ ಹೆಚ್ಚು ಬಸ್‌ಗಳು ತಾಲ್ಲೂಕಿನಲ್ಲಿ ಸಾರಿಗೆ ಸೇವೆ ನೀಡುತ್ತಿವೆ. ಬಸ್‌ಗಳು ಹಾಳಾದರೆ, ಬದಲಿ ಬಸ್‌ಗಳು ಇಲ್ಲದೇ ಗ್ರಾಮೀಣ ಸಾರಿಗೆ ಅಸ್ತವ್ಯಸ್ತವಾಗುತ್ತದೆ. ಕೆಲವು ಮಾರ್ಗಗಳಲ್ಲಿ ಬೇಡಿಕೆ ಇದ್ದರೂ ಬಸ್‌ ಓಡಿಸಲು ಸಾಧ್ಯವಾಗುತ್ತಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಸಾರಿಗೆ ಸಿಬ್ಬಂದಿ ಹೇಳಿದರು.

‘ಪಟ್ಟಣದಿಂದ ಕಲಘಟಗಿಗೆ ಮಧ್ಯಾಹ್ನ 3ಗಂಟೆಯಿಂದ 5ಗಂಟೆವರೆಗೆ ಬಸ್‌ ಇಲ್ಲ. ಸಂಜೆ ಬರುವ ಬಸ್ಸಿಗೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಬ್ಬರ ಮೇಲೆ ಒಬ್ಬರು ಬಿದ್ದು ಪ್ರಯಾಣಿಸುತ್ತಿರುತ್ತಾರೆ. ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಪ್ರಯಾಣಿಕ ಫಕ್ಕೀರೇಶ ಆಲದಕಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT