ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಆರು ಪಂಚಾಯ್ತಿಗಳ ಅಡಿಕೆ ಬೆಳೆಗಾರರಿಗೆ ಬಾರದ ಬೆಳೆ ವಿಮೆ

ಬೆಳೆ ಕಳೆದುಕೊಂಡಿರುವ ಅಡಿಕೆ ಬೆಳೆಗಾರರಿಗೆ ಗಾಯದ ಮೇಲೆ ಬರೆ
Last Updated 30 ಜನವರಿ 2020, 20:11 IST
ಅಕ್ಷರ ಗಾತ್ರ

ಶಿರಸಿ: ಇಲಾಖೆಗಳ ವರದಿಯಲ್ಲಿನ ವ್ಯತ್ಯಾಸದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಆರು ಗ್ರಾಮ ಪಂಚಾಯ್ತಿಗಳ ಅಡಿಕೆ ಬೆಳೆಗಾರರು ಕಳೆದ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆಯಿಂದ ವಂಚಿತರಾಗಿದ್ದಾರೆ. ಕೊಳೆರೋಗದಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಶಿರಸಿ ತಾಲ್ಲೂಕಿನ ವಾನಳ್ಳಿ, ಸೋಂದಾ, ಯಲ್ಲಾಪುರ ತಾಲ್ಲೂಕಿನ ಮಾವಿನಮನೆ, ಸಿದ್ದಾಪುರ ತಾಲ್ಲೂಕಿನ ತ್ಯಾಗಲಿ, ತಾರೇಹಳ್ಳಿ, ಕಾನಸೂರು ಹಾಗೂ ಹೊನ್ನಾವರ ತಾಲ್ಲೂಕಿನ ಮಂಕಿ ಚಿತ್ತಾರ ಗ್ರಾಮ ಪಂಚಾಯ್ತಿಗಳ ಅಡಿಕೆ ಬೆಳೆಗಾರರಿಗೆ ಬೆಳೆವಿಮೆ ಪರಿಹಾರ ಮೊತ್ತ ಅವರ ಖಾತೆಗೆ ಸೇರಿಲ್ಲ.

ಕರ್ನಾಟಕ ಪ್ರಕೃತಿ ವಿಕೋಪ ನಿರ್ವಹಣಾ ಮಂಡಳಿ (ಹವಾಮಾನ ಇಲಾಖೆ) ನೀಡಿದ ವರದಿಯ ವ್ಯತ್ಯಾಸದಿಂದ ಈ ರೀತಿ ಆಗಿರುವ ಸಾಧ್ಯತೆಯಿದೆ. ಇಲಾಖೆಯು ತೋಟಗಾರಿಕಾ ಇಲಾಖೆ ಹಾಗೂ ಬೆಳೆ ವಿಮೆ ಕಂಪನಿಗೆ ನೀಡಿರುವ ವರದಿಗಳಲ್ಲಿ ವ್ಯತ್ಯಾಸವಿದ್ದರೆ, ಅಂತಹ ರೈತರಿಗೆ ಬೆಳೆ ವಿಮೆ ಬರಲು ತೊಡಕಾಗುತ್ತದೆ ಎನ್ನುತ್ತಾರೆ ಅಧಿಕಾರಿಯೊಬ್ಬರು.

ಬೆಳೆ ಸಾಲ ಪಡೆಯುವ ರೈತರಿಂದ ಪ್ರಾಥಮಿಕ ಸಹಕಾರಿ ಸಂಘಗಳ ಮೂಲಕ ಕೆಡಿಸಿಸಿ ಬ್ಯಾಂಕ್ ಹವಾಮಾನ ಆಧಾರಿತ ಬೆಳೆ ವಿಮೆ ತುಂಬಿಸಿಕೊಳ್ಳುತ್ತದೆ. ಇದರ ಹೊರತಾಗಿ ಸಾಲ ಪಡೆಯದ ರೈತರು ಸಹ ಬೆಳೆ ವಿಮೆ ತುಂಬಿದ್ದರು. ಜಿಲ್ಲೆಯ ರೈತರಿಗೆ ಅಂದಾಜು ₹ 60 ಕೋಟಿ ಮೊತ್ತದ ವಿಮೆ ಜಮಾ ಆಗಿದೆ. ಆದರೆ, ಆರು ಪಂಚಾಯ್ತಿಗಳು ಮಾತ್ರ ಇದರಿಂದ ವಂಚಿತವಾಗಿವೆ ಎಂದು ಅವರು ತಿಳಿಸಿದರು.

‘ಶಿರಸಿ ತಾಲ್ಲೂಕಿನ ವಾನಳ್ಳಿ ಭಾಗದಲ್ಲಿ ಪ್ರತಿವರ್ಷವೂ ಅತಿ ಹೆಚ್ಚು ಮಳೆಯಾಗುತ್ತದೆ. ಕಳೆದ ವರ್ಷ ಕೂಡ ಹೆಚ್ಚು ಮಳೆ ದಾಖಲಾಗಿತ್ತು. ಆದರೆ, ಈ ಪಂಚಾಯ್ತಿಗೇ ಬೆಳೆ ವಿಮೆ ಬಂದಿಲ್ಲ. ಈ ಕುರಿತು ಕೃಷಿ, ತೋಟಗಾರಿಕಾ, ತಹಶೀಲ್ದಾರ್ ಕಚೇರಿ ಸಂಪರ್ಕಿಸಿದ್ದೇನೆ. ಎಲ್ಲ ಇಲಾಖೆಗಳೂ ತಮ್ಮಿಂದ ಸಮಸ್ಯೆಯಿಲ್ಲವೆಂದು ನುಣುಚಿಕೊಂಡಿವೆ. ಮೂರು ಇಲಾಖೆಗಳನ್ನು ವಿಚಾರಿಸಿ, ಸರಿಪಡಿಸುವಂತೆ ತಿಳಿಸಿದರೂ ರೈತರಿಗೆ ಹಣ ಜಮಾ ಆಗಿಲ್ಲ’ ಎನ್ನುತ್ತಾರೆ ಈ ಭಾಗದ ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ.

‘ವಿಮಾ ಕಂಪನಿ ಮತ್ತು ಅಧಿಕಾರಿಗಳ ನಡುವಿನ ಹೊಂದಾಣಿಕೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆಯೇ ಎಂಬ ಅನುಮಾನವೂ ಮೂಡಿದೆ. ಹುಲೇಕಲ್ ಹೋಬಳಿಯ ಎರಡು ಪಂಚಾಯ್ತಿಗಳಲ್ಲೇ ಈ ರೀತಿ ಆಗಿರುವ ಬಗ್ಗೆ ಅನೇಕ ಬಾರಿ ವಿಚಾರಿಸಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಈ ಬಾರಿ ಕೊಳೆಯಿಂದ ಬೆಳೆ ಕಳೆದುಕೊಂಡಿರುವ ಬೆಳೆಗಾರರಿಗೆ ಇದು ದೊಡ್ಡ ನಷ್ಟ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT