ಮಂಗಳವಾರ, ನವೆಂಬರ್ 12, 2019
20 °C

ಬೆಳೆ ವಿಮೆ ಪರಿಹಾರ ಮರೀಚಿಕೆ: ಅಡಿಕೆ ಬೆಳೆಗಾರರಿಗೆ ತಪ್ಪದ ಗೋಳು

Published:
Updated:
Prajavani

ಮುಂಡಗೋಡ: ಒಂದೆಡೆ ಮಳೆ ಕಾಟ, ಮತ್ತೊಂದೆಡೆ ಕೊಳೆರೋಗ, ಇದೆಲ್ಲದರ ನಡುವೆ ಅಡಿಕೆ ಬೆಳೆಗೆ ವಿಮೆ ಹಣ ಬಾರದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಕಳೆದ ಸಾಲಿನ ಅಡಿಕೆ ವಿಮೆಗಾಗಿ ಸಹಕಾರಿ ಸಂಘ, ಬ್ಯಾಂಕ್‌ಗೆ ಅಲೆದಾಡುವುದು ಅಡಿಕೆ ಬೆಳೆಗಾರರ ನಿತ್ಯ ಕೆಲಸವಾಗಿದೆ.

ತಾಲ್ಲೂಕಿನ 450ಕ್ಕೂ ಹೆಚ್ಚು ರೈತರಿಗೆ 2018–19ನೇ ಸಾಲಿನ ಅಡಿಕೆ ವಿಮೆ ಬಂದಿಲ್ಲ. ಈಗಾಗಲೇ ಕೆಲವು ರೈತರ ಖಾತೆಗೆ ವಿಮಾ ಹಣ ಜಮಾ ಆಗಿದೆ. ಅಂದಾಜು ₹ 3.5 ಕೋಟಿ ಹಣ ಇನ್ನುಳಿದ ರೈತರಿಗೆ ಬರಬೇಕಾಗಿದೆ. ‘ರೈತರಿಗೆ ನೆರವಿಗೆ ಬರಬೇಕಾಗಿದ್ದ ಬ್ಯಾಂಕ್‌, ಸಹಕಾರಿ ಸಂಘ ಹಾಗೂ ವಿಮಾ ಪ್ರತಿನಿಧಿಗಳು ದಿನಕ್ಕೊಂದು ಕಾರಣ ಹೇಳುತ್ತಿದ್ದಾರೆ’ ಎಂದು ಬೆಳೆಗಾರರು ಆರೋಪಿಸಿದ್ದಾರೆ.

ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಶಿವರಾಮ ಹೆಬ್ಬಾರ್‌ ಅವರಿಗೆ ಈಗಾಗಲೇ ಮನವಿ ನೀಡಿರುವ ಅಡಿಕೆ ಬೆಳೆಗಾರರು, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕೆಡಿಸಿಸಿ ಬ್ಯಾಂಕ್‌ ಅಧಿಕಾರಿಗಳಿಗೂ ಮನವಿ ನೀಡಲು ರೈತರು ಮುಂದಾಗಿದ್ದಾರೆ.

‘ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ ಹಾಗೂ ರೈತರ ನಡುವೆ ಸಮನ್ವಯದ ಕೊರತೆಯಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಕಳೆದ ವರ್ಷದ ಅಡಿಕೆ ವಿಮೆ ಹಣ ಇನ್ನೂ ಬಂದಿಲ್ಲ. ವಿಮೆ ಕಂಪನಿ ಪ್ರತಿನಿಧಿಗಳನ್ನು ಕೇಳಿದರೆ, ಬೆಳೆ ಸಮೀಕ್ಷೆ ಬಗ್ಗೆ ಗೊಂದಲ ಉಂಟಾಗಿದ್ದರಿಂದ ತಡವಾಗಿದೆ. ಮತ್ತೊಮ್ಮೆ ಬೆಳೆ ಸಮೀಕ್ಷೆ ನಡೆಸಬೇಕು ಎನ್ನುತ್ತಿದ್ದಾರೆ. ಕೆಲವರಿಗೆ ವಿಮೆ ಹಣ ಕೊಡಲಾಗಿದೆ. ಉಳಿದವರ ಖಾತೆಗೆ ಜಮಾ ಮಾಡದೇ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇಂದೂರ ಭಾಗದಲ್ಲಿ 50ಕ್ಕೂ ಹೆಚ್ಚು ರೈತರಿಗೆ ವಿಮಾ ಹಣ ಬಂದಿಲ್ಲ’ ಎಂದು ಅಡಿಕೆ ಬೆಳೆಗಾರ ನಾಗರಾಜ ಗಂಟಿ ಹೇಳಿದರು.

‘ವಿಮಾ ಹಣದ ಬಗ್ಗೆ ವಿಚಾರಿಸಿದರೆ ಮಿಸ್‌ಮ್ಯಾಚ್‌ ಆಗಿದೆ ಎಂದು ನೆಪ ಹೇಳುತ್ತಿದ್ದಾರೆ. ಅಡಿಕೆ ಬೆಳೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಬ್ಯಾಂಕ್‌ನವರು ಮತ್ತೊಮ್ಮೆ ಪರಿಶೀಲಿಸುವುದಾಗಿ ಹೇಳುತ್ತಿದ್ದಾರೆ’ ಎಂದು ಅಡಿಕೆ ಬೆಳೆಗಾರ ಯಮನಪ್ಪ ಆಕ್ರೋಶದಿಂದ ಹೇಳಿದರು.

‘ತಾಲ್ಲೂಕಿನ 463 ಅಡಿಕೆ ಬೆಳೆಗಾರರಿಗೆ ವಿಮಾ ಹಣ ಬಂದಿಲ್ಲ. ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ನವರು ಈ ಬಗ್ಗೆ ಮತ್ತೊಮ್ಮೆ ಜಿಪಿಎಸ್‌ ಮಾಡಬೇಕಾಗುತ್ತದೆ. ತೋಟಗಾರಿಕಾ ಕಚೇರಿಯಲ್ಲಿ ಇದರ ಲಾಗಿನ್‌ ಇಲ್ಲ. ಜಂಟಿ ಖಾತೆ ಹೊಂದಿರುವುದು, ಅಡಿಕೆ ಬದಲಾಗಿ ಭತ್ತದ ಬೆಳೆ ತೋರಿಸಿರುವುದು, ಕೃಷಿಯೇತರ ಎಂದು ದಾಖಲಾಗಿರುವುದು ಸೇರಿದಂತೆ ಇತರ ಕಾರಣಗಳಿಂದ ಮಿಸ್‌ಮ್ಯಾಚ್‌ ಅಂತ ತೋರಿಸುತ್ತಿದೆ’ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕ ನಾಗಾರ್ಜುನ ಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)