ಗಡಿನಾಡ ಕನ್ನಡಿಗರ ವ್ಯಾಖ್ಯಾನ ಅಪೂರ್ಣ: ಡಾ.ಎಸ್.ಡಿ.ನಾಯ್ಕ ವಿಷಾದ

7
ಕಾರವಾರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರ ನುಡಿ

ಗಡಿನಾಡ ಕನ್ನಡಿಗರ ವ್ಯಾಖ್ಯಾನ ಅಪೂರ್ಣ: ಡಾ.ಎಸ್.ಡಿ.ನಾಯ್ಕ ವಿಷಾದ

Published:
Updated:
Deccan Herald

ಕಾರವಾರ: ಕನ್ನಡಿಗರನ್ನು ಒಳನಾಡು, ಗಡಿನಾಡು ಮತ್ತು ಹೊರನಾಡಿನವರು ಎಂದು ವಿಂಗಡಿಸಲಾಗಿದೆ. ಆದರೆ, ಗಡಿನಾಡ ಕನ್ನಡಿಗರನ್ನು ಇನ್ನೂ ಸರಿಯಾಗಿ ವ್ಯಾಖ್ಯಾನಿಸಿಲ್ಲ ಎಂದು ತಾಲ್ಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಎಸ್.ಡಿ.ನಾಯ್ಕ ವಿಷಾದ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ಆಯೋಜಿಸಲಾದ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಗಡಿನಾಡಿನಲ್ಲಿ ವಾಸ ಮಾಡುತ್ತಿರುವವರು ತಾವು ಗಡಿಯ ಹೊರಗಿನವರೋ ಒಳಗಿನವರೋ ಎಂಬ ಅನುಮಾನದಿಂದ ಬಾಳುತ್ತಿದ್ದಾರೆ. ಇದರಿಂದ ಗಡಿಯ ಸಮಸ್ಯೆಗಳು ದಿನೇದಿನೇ ಮೂರ್ತರೂಪ ತಾಳುತ್ತವೆ. ಗಡಿನಾಡಿನಲ್ಲಿ ನಾವು ಕನ್ನಡ ಸಂಸ್ಕೃತಿ, ಭಾಷೆ, ಸಾಹಿತ್ಯವನ್ನು ರಕ್ಷಣೆ ಮಾಡುವುದು ಅವಶ್ಯ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಒಟ್ಟಾಗಿ ಸೇರಿ ಒಂದು ವಿಶೇಷ ಪ್ರಾಧಿಕಾರನ್ನು ರಚಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ತಮ್ಮ ಕಾರ್ಯ, ಚಟುವಟಿಕೆಗಳನ್ನು ಆ ಭಾಗದಲ್ಲೇ ಹೆಚ್ಚು ಕೇಂದ್ರೀಕರಿಸಿಕೊಳ್ಳವುದೇ ಸಮಸ್ಯೆಯ ಪರಿಹಾರಕ್ಕೆ ಇರುವ ಮಾರ್ಗ’ ಎಂದು ಅಭಿಪ್ರಾಯಪಟ್ಟರು.

‘ನಾವಿಂದು ಆಂಗ್ಲ ಮಾಧ್ಯಮದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಆ ಮಾಧ್ಯಮವು ಮಕ್ಕಳನ್ನು ವಿದ್ವಾಂಸರನ್ನಾಗಿ ಮಾಡುತ್ತದೆ ಎಂಬ ಭ್ರಮೆ ಇದಕ್ಕೆ ಕಾರಣ. ಅದು ಸುಳ್ಳು. ಜಗತ್ತಿನಾದ್ಯಂತ ಅದೆಷ್ಟೋ ಮಂದಿ ಆಂಗ್ಲ ಭಾಷೆಯನ್ನು ಓದದೇ ಉದ್ಧಾರವಾದ ಸಾಕಷ್ಟು ಉದಾಹರಣೆಗಳಿವೆ. ನನ್ನ ದೃಷ್ಟಿಯಲ್ಲಿ ನಮ್ಮ ಉದ್ಧಾರಕ್ಕೆ ಭಾಷೆ ಮುಖ್ಯವಲ್ಲ. ಆದರೆ, ಕಲಿಯಲು ಬಯಸುವ ವಿಷಯ ಮುಖ್ಯ’ ಎಂದು ಹೇಳಿದರು.

‘ಮಾತೃಭಾಷೆಯಲ್ಲಿ ಇರುವ ಶಕ್ತಿ ಬೇರೆ ಯಾವ ಭಾಷೆಗೂ ಇರುವುದಿಲ್ಲ. ಅಲ್ಲದೇ ಯಾವುದೇ ವಿಷಯವನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಮಕ್ಕಳು ಅಕ್ಷರಾಭ್ಯಾಸದ ಆರಂಭದಲ್ಲೇ ಆಂಗ್ಲ ಭಾಷೆಯನ್ನು ಕಲಿತರೆ ಆ ಸಂಸ್ಕೃತಿಗೇ ಅವರು ಮಾರುಹೋಗುವುದು ಸಹಜ. ಹೀಗಾಗಿ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳ ವಿಧೇಯತೆ ಆ ಮಕ್ಕಳಲ್ಲಿ ಕಾಣುವುದು ಕಡಿಮೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು. 

‘ನಾವು ಕನ್ನಡಿಗರು ಅನೇಕತೆಯಲ್ಲಿ ಏಕತೆಯನ್ನು ತೋರಿಸಬೇಕಿದೆ. ಹೀಗಾಗಿ ನಾವಿಂದು ಭೇದಭಾವಗಳನ್ನು ತೊರೆದು ಒಂದಾಗಿ ಬಾಳುವುದನ್ನು ಕಲಿಯಬೇಕು. ಎಲ್ಲ ಕನ್ನಡಿಗರು ತಮ್ಮ ಮಕ್ಕಳಿಗೂ ಕನ್ನಡ ಕಲಿಸುವಂತಾಗಬೇಕು. ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಕನ್ನಡದಲ್ಲೇ ನಾವು ಮಾತನಾಡಬೇಕು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕನ್ನಡದಲ್ಲೇ ಮಾತನಾಡುವುದು ಉತ್ತಮ. ಸಾಹಿತ್ಯ ಸಮ್ಮೇಳನಗಳನ್ನು 500ಕ್ಕಿಂತ ಹೆಚ್ಚು ಜನರಿರುವ ಗ್ರಾಮಗಳಲ್ಲಿ ಆಯೋಜಿಸಿದರೆ ಆಯಾ ಗ್ರಾಮಗಳ ಜನರಿಗೆ ಅನುಕೂಲವಾಗುತ್ತದೆ’ ಎಂದು ಸಲಹೆ ನೀಡಿದರು.

ಸಂಖ್ಯೆ ದಿನೇದಿನೇ ಕುಸಿತ: ರಾಜ್ಯದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿದೆ. ಇದೊಂದು ಶೋಚನೀಯ ಸಂಗತಿ ಎಂದು ಡಾ.ಎಸ್.ಡಿ.ನಾಯ್ಕ ಕಳವಳ ವ್ಯಕ್ತಪಡಿಸಿದರು.

‘ರಾಜ್ಯದ 6.8 ಕೋಟಿ ಜನಸಂಖ್ಯೆಯ ಪೈಕಿ ಕೇವಲ 3.5 ಕೋಟಿ ಜನರು ಕನ್ನಡ ಮಾತನಾಡುತ್ತಾರೆ ಎಂದು ಅಂದಾಜಿಸಲಾಗಿದೆ. ಮಹಾರಾಷ್ಟ್ರದಲ್ಲಿ 11.3 ಕೋಟಿ ಜನಸಂಖ್ಯೆಯಲ್ಲಿ 8.1 ಕೋಟಿ ಜನ ಮರಾಠಿ ಮಾತನಾಡುತ್ತಾರೆ. ಕೇರಳದಲ್ಲಿ ಶೇ 90ರಷ್ಟು ಜನರು ಮಲಯಾಳಂನಲ್ಲೇ ಸಂವಹನ ಮಾಡುತ್ತಾರೆ. ಆದರೆ, ನಮ್ಮಲ್ಲಿ ಮಾತ್ರ ಯಾಕೆ ಈ ತರಹ ಎಂದು ಪ್ರಶ್ನಿಸಿಕೊಳ್ಳಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !