ಕಚ್ಚಾಟ ಶಮನಕ್ಕೆ ಶ್ರಮ: ಅಭಿವೃದ್ಧಿ ಗೌಣ

7
ಜೀವಂತವಾಗಿರುವ ಮನೆ–ಮನೆ ಕಸ ಸಂಗ್ರಹಣೆ ಸಮಸ್ಯೆ, ಭೂರಹಿತರಿಗೆ ಸೂರು ಮರೀಚಿಕೆ

ಕಚ್ಚಾಟ ಶಮನಕ್ಕೆ ಶ್ರಮ: ಅಭಿವೃದ್ಧಿ ಗೌಣ

Published:
Updated:
Deccan Herald

ಶಿರಸಿ: ಭೂರಹಿತರಿಗೆ ಮರೀಚಿಕೆಯಾದ ವಸತಿ ಮನೆ, ಮುಕ್ತಿ ಕಾಣದ ಮನೆ–ಮನೆ ಕಸ ಸಂಗ್ರಹಣೆ ಸಮಸ್ಯೆ, ಹೊಂಡ–ಗುಂಡಿಗಳಾದ ರಸ್ತೆಗಳು, ಕುಡಿಯುವ ನೀರಿನ ನಳಗಳಿಗೆ ಮೀಟರ್ ಅಳವಡಿಸುವ ಗೊಂದಲ, ಕೋಟಿಗಟ್ಟಲೆ ರೂಪಾಯಿ ಅನುದಾನ ಬಂದರೂ ಕಾಣದ ಅಭಿವೃದ್ಧಿ, ವರ್ಷದ ಹಿಂದೆ ಖರೀದಿರುವ ಕಸ ಸಂಗ್ರಹ ಬಕೆಟ್‌ಗಳನ್ನು ಸಾರ್ವಜನಿಕರಿಗೆ ವಿತರಿಸಲಾಗದೇ ಅಧಿಕಾರ ಮುಗಿಸಿದ ಸದಸ್ಯರು...

ನಗರಸಭೆ ಎಂದಾಕ್ಷಣ ನಗರವಾಸಿಗರಲ್ಲಿ ಥಟ್ಟನೆ ಮೂಡುವ ಚಿತ್ರಣವಿದು. ಆ.29ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆ.17 ಕೊನೆಯ ದಿನ. ನಗರಸಭೆ ಸದಸ್ಯರಾಗಿ ಐದು ವರ್ಷ ಅಧಿಕಾರ ಅನುಭವಿಸಿರುವವರಲ್ಲಿ ಹಲವರು ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆಗಿರುವ ಅಭಿವೃದ್ಧಿಯ ಬಗ್ಗೆ ಪ್ರಶ್ನಿಸಿದರೆ ಇವರ ಬಳಿ ನಿಖರ ಉತ್ತರವಿಲ್ಲ. ಪಕ್ಷದ ಟಿಕೆಟ್ ಸಿಗದ ಕೆಲವರು ಪಕ್ಷಾಂತರಗೊಂಡರೆ, ಇನ್ನು ಕೆಲವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಹಿಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದಿದ್ದ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಿತು. ಮೊದಲನೇ ಅವಧಿಗೆ ಅಧ್ಯಕ್ಷರಾಗಿದ್ದ ಅನುಭವಿ ಶ್ರೀಕಾಂತ ತಾರೀಬಾಗಿಲು, ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ, ಅಧಿಕಾರ ಮುಗಿಸಿದರು. ಎರಡನೇ ಅವಧಿಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗೆ ಸೆಡ್ಡುಹೊಡೆದು ಬಂಡಾಯ ಕಾಂಗ್ರೆಸ್ಸಿಗರಾಗಿ ಸ್ಪರ್ಧಿಸಿದ್ದ ಪ್ರದೀಪ ಶೆಟ್ಟಿ, ಸ್ವಪಕ್ಷದ ಐವರು ಹಾಗೂ ಬಿಜೆಪಿ ಸದಸ್ಯರ ಬೆಂಬಲ ಪಡೆದು ಅಧಿಕಾರ ಹಿಡಿದರು.

ವಿಪ್ ಉಲ್ಲಂಘಿಸಿದ ಆರೋಪದ ಮೇಲೆ ಸದಸ್ಯತ್ವದಿಂದ ಉಚ್ಚಾಟನೆಗೊಂಡ ಅಧ್ಯಕ್ಷರ ಸಹಿತ ಆರು ಸದಸ್ಯರು ನಗರಸಭೆಯಿಂದ ಹೊರಗುಳಿದರು. ಉಪಾಧ್ಯಕ್ಷರು, ಪ್ರಭಾರಿ ಅಧ್ಯಕ್ಷರಾದರು. ಉಚ್ಚಾಟನೆಗೊಂಡ ಸದಸ್ಯರು ಹೈಕೋರ್ಟ್‌ ಮೆಟ್ಟಿಲೇರಿ ಯಶಗಳಿಸಿದರು. ಆಡಳಿತದಲ್ಲಿನ ಈ ಗೊಂದಲ, ಜೊತೆಗೆ ಪಕ್ಷದ ಆಂತರಿಕ ಕಚ್ಚಾಟವನ್ನು ಶಮನಗೊಳಿಸುವುದರಲ್ಲಿ ಅಭಿವೃದ್ಧಿ ಗೌಣವಾಯಿತು. ಚುನಾವಣೆ ಸಮೀಪಸುತ್ತಿದ್ದಂತೆ ಕಾಂಗ್ರೆಸ್ ಬಂಡಾಯ ಸದಸ್ಯರು ಮತ್ತು ಬಿಜೆಪಿ ನಡುವೆ ಭಿನ್ನಾಭಿಪ್ರಾಯದ ನಾಟಕವೂ ನಡೆಯಿತು.

ನಗರಸಭೆಯಿಂದ ಸಂಗ್ರಹವಾಗುವ ತೆರಿಗೆ ಹಣ, 14ನೇ ಹಣಕಾಸು ಆಯೋಗದ ಅನುದಾನ, ಎಸ್‌ಎಫ್‌ಸಿ, ಸರ್ಕಾರದ ವಿಶೇಷ ಅನುದಾನ, ಜಾತ್ರಾ ವಿಶೇಷ ಅನುದಾನ, ನಗರೋತ್ಥಾನ ಹೀಗೆ ವಿವಿಧ ರೀತಿಯಲ್ಲಿ ಕೋಟ್ಯಂತರ ರೂಪಾಯಿ ಅನುದಾನಗಳು ಬಂದಿವೆ. ಆದರೆ, ಅಭಿವೃದ್ಧಿ ಕಾಮಗಾರಿಗಳು, ನಗರ ಸುಧಾರಣೆ ಮಾತ್ರ ಕಾಣುತ್ತಿಲ್ಲ. ದೇವಿಕೆರೆ ಕಾಮಗಾರಿ ಅರೆಬರೆಯಾಗಿದೆ, ಫಾರ್ಮ್ ನಂಬರ್ 3ರ ಸಮಸ್ಯೆ ಕಗ್ಗಂಟಾಗಿಯೇ ಉಳಿದಿದೆ ಎಂಬುದು ಸಾರ್ವತ್ರಿಕ ಆರೋಪವಾಗಿದೆ.

‘ನಗರಸಭೆ ಆಡಳಿತ ದುಃಸ್ಥಿತಿ ತಲುಪಿದೆ. ಅಭಿವೃದ್ಧಿ ಮಾಡುವ ಬದಲಾಗಿ, ಸದಸ್ಯರ ವಿಚಾರವನ್ನು ಜನರ ಮೇಲೆ ಹೇರುವ ಕೆಲಸಗಳು ನಡೆದಿವೆ. ಜನರ ಭಾವನೆಗೆ ಸ್ಪಂದಿಸುವ ಕೆಲಸ ಆಗಿಲ್ಲ. ಸರ್ಕಾರದ ಸುತ್ತೋಲೆ ಹೆಸರಿನಲ್ಲಿ ಘನತ್ಯಾಜ್ಯ ಸಂಗ್ರಹ ಶುಲ್ಕ ಹೆಚ್ಚಳ, ನಳಕ್ಕೆ ಮೀಟರ್ ಕೂರಿಸುವ ನಿರ್ಧಾರ ಮಾಡಲಾಗಿದೆ. ಹೊಸ ರಸ್ತೆ ನಿರ್ಮಿಸಿ, ಆರು ತಿಂಗಳಲ್ಲಿ ಅದು ಹಾಳಾಗುವುದು ಪ್ರತಿಯೊಬ್ಬರೂ ನೋಡಿರುವ ಸಂಗತಿ. ಆದರೆ, ಈವರೆಗೆ ಯಾರೊಬ್ಬ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿದ್ದು ಕಂಡಿಲ್ಲ’ ಎಂದು ನಗರದ ನಿವಾಸಿ ಜಿ.ಜಿ.ಹೆಗಡೆ ಕಡೆಕೋಡಿ ಪ್ರತಿಕ್ರಿಯಿಸಿದರು.

‘ದೇವಿಕೆರೆ ಕಾಮಗಾರಿ ನಗರದ ಜನರಲ್ಲಿ ನಿರಾಸೆ ಮೂಡಿಸಿದೆ. 1006 ಸರ್ವೆ ಸಂಖ್ಯೆ ನಗರಸಭೆ ಆಸ್ತಿ ಆಗಿದ್ದರೂ, ಪ್ರಕರಣದ ಇತ್ಯರ್ಥಕ್ಕೆ ವಿಶೇಷ ಶ್ರಮ ತೋರಲಾಗಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !