ಚುನಾವಣೆಯಲ್ಲಿ ಗಣನೆಗೇ ಬಾರದ ಅಭಿವೃದ್ಧಿ: ದೇಶಪಾಂಡೆ ವಿಷಾದ

7
ಅಂಗಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿದ ಸಚಿವ

ಚುನಾವಣೆಯಲ್ಲಿ ಗಣನೆಗೇ ಬಾರದ ಅಭಿವೃದ್ಧಿ: ದೇಶಪಾಂಡೆ ವಿಷಾದ

Published:
Updated:
Deccan Herald

ಕಾರವಾರ: ಚುನಾವಣೆಯಲ್ಲಿ ಜನರು ಅಭಿವೃದ್ಧಿಯನ್ನು ಪರಿಗಣನೆಗೇ ತೆಗೆದುಕೊಳ್ಳುತ್ತಿಲ್ಲ. ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡ ಜನಪ್ರತಿನಿಧಿಗಳಿಗೆ ಮೆಚ್ಚುಗೆ ಸೂಚಿಸುವ ಪ್ರವೃತ್ತಿ ಇಂದು ಕಡಿಮೆಯಾಗಿದೆ. ಇದರಿಂದ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಜನಪ್ರತಿನಿಧಿಗಳಿಗೂ ಉತ್ಸಾಹವಿರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನ ಅಂಗಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆ ಮತ್ತು ಎಂಡೊಸಲ್ಫಾನ್‌ನಿಂದ ತೊಂದರೆಗೆ ಒಳಗಾದ ಸಂತ್ರಸ್ತರಿಗೆ ಫಿಸಿಯೊಥೆರಪಿ ಚಿಕಿತ್ಸೆ ನೀಡುವ ಸಂಚಾರಿ ಚಿಕಿತ್ಸಾ ಘಟಕಗಳಿಗೆ ಮಂಗಳವಾರ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

‘80ರ ದಶಕದಲ್ಲಿ ನಾನು ಶಾಸಕನಾದಾಗ ಒಳ್ಳೆಯ ಕೆಲಸಗಳನ್ನು ಮಾಡಿದ್ದಕ್ಕೆ ಜನರು ಬೆನ್ನತ್ತಿ ಬಂದು ಸಂತಸ ವ್ಯಕ್ತಪಡಿಸುತ್ತಿದ್ದರು. ಆದರೆ, ಈಗ ಹಾಗಿಲ್ಲ. ಒಳ್ಳೆಯ ಕೆಲಸ ಮಾಡಿದವರು ಯಾವುದೇ ಪಕ್ಷದವರೇ ಆಗಿರಲಿ, ಅವರನ್ನು ಗುರುತಿಸಬೇಕು’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

‘ಈ ಆರೋಗ್ಯ ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಿಸಿದ್ದರಿಂದ ಮಾಜಾಳಿ ಮತ್ತು ಮುಡಗೇರಿ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಇದಕ್ಕೆ ಬೇಕಾಗಿರುವ ಅಗತ್ಯ ಸಲಕರಣೆಗಳನ್ನು ಖರೀದಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈಗ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆಯಿಲ್ಲದಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಎನ್.ಅಶೋಕಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಮುಡಗೇರಿ ಮತ್ತು ಮಾಜಾಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 12,600 ಗ್ರಾಮಸ್ಥರು ಈ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿದ್ದಾರೆ. ಪ್ರತಿವರ್ಷ 520 ಹೊರರೋಗಿಗಳು ಮತ್ತು 20 ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಕೇಂದ್ರದ ಅಡಿಯಲ್ಲಿ ಐದು ಉಪ ಕೇಂದ್ರಗಳಿವೆ’ ಎಂದರು. 

ಜಿಲ್ಲೆಯ ಆರು ತಾಲ್ಲೂಕುಗಳ 1,128 ಜನರು ಎಂಡೊಸಲ್ಫಾನ್‌ನಿಂದ ತೊಂದರೆಗೆ ಒಳಗಾಗಿದ್ದಾರೆ. ಅವರಿಗೆ ಇಲಾಖೆಯಿಂದ ಮಾರ್ಚ್ 31ರವರೆಗೆ ಮಾಸಾಶನ ನೀಡಲಾಗುತ್ತಿತ್ತು. ಈಗ ಸಾಮಾಜಿಕ ಭದ್ರತಾ ಇಲಾಖೆಯಿಂದ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಅವರಿಗೆ ಚಿಕಿತ್ಸೆ ನೀಡಲಿರುವ ನಾಲ್ಕು ಸಂಚಾರಿ ಚಿಕಿತ್ಸಾ ಘಟಕಗಳನ್ನು ಶಿರಸಿಯ ಸ್ಕೊಡ್‌ವೆಸ್ ಸಂಸ್ಥೆಯು ತಿಂಗಳಿಗೆ ತಲಾ ₹ 2.92 ಲಕ್ಷದಂತೆ ಗುತ್ತಿಗೆಯಲ್ಲಿ ಪಡೆದುಕೊಂಡಿದೆ ಎಂದೂ ಹೇಳಿದರು.

₹ 1.26 ಕೋಟಿ ವೆಚ್ಚದ ಕಾಮಗಾರಿ: ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡಕ್ಕೆ ಒಂದೂವರೆ ವರ್ಷಗಳ ಹಿಂದೆ ಶಂಕುಸ್ಥಾಪನೆ ಮಾಡಲಾಗಿತ್ತು. ₹ 1.26 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಟ್ಟಡವು ಒಂಬತ್ತು ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಎಂಬಿಬಿಎಸ್ ಪದವೀಧರ ವೈದ್ಯರೂ ಸೇರಿದಂತೆ 11 ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಮುಖಂಡ ಸತೀಶ್ ಸೈಲ್ ಇದ್ದರು.

ಎಂಡೊಸಲ್ಫಾನ್ ಪೀಡಿತರು: ಅಂಕಿ– ಅಂಶ

* ಭಟ್ಕಳ, ಹೊನ್ನಾವರ, ಶಿರಸಿ, ಸಿದ್ದಾಪುರ, ಕುಮಟಾ, ಅಂಕೋಲಾ 6 ತಾಲ್ಲೂಕುಗಳು

* 6,040 34 ಶಿಬಿರಗಳಲ್ಲಿ ಗುರುತಿಸಲಾದ ಸಂತಸ್ತರು

* ₹1,500 ಶೇ 50ರಷ್ಟು ಅಂಗವೈಕಲ್ಯಕ್ಕೆ ಒಳಗಾದವರಿಗೆ ಮಾಸಾಶನ

* ₹ 3,000 ಶೇ 50ಕ್ಕಿಂತ ಹೆಚ್ಚು ಅಂಗವೈಕಲ್ಯಕ್ಕೆ ಒಳಗಾದವರಿಗೆ ಮಾಸಾಶನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !