ಅಭಿವೃದ್ಧಿ ಕಾಮಗಾರಿ ನುಂಗಿದ ಒಳಚರಂಡಿ!

7
ಕುಮಟಾ ಪುರಸಭೆ ವ್ಯಾಪ್ತಿಯಲ್ಲಿ ಚುನಾವಣೆಯ ಕಾವು: ಕುಂಟುತ್ತಿರುವ ರಸ್ತೆ ವಿಸ್ತರಣೆ ಯೋಜನೆ

ಅಭಿವೃದ್ಧಿ ಕಾಮಗಾರಿ ನುಂಗಿದ ಒಳಚರಂಡಿ!

Published:
Updated:
Deccan Herald

ಕುಮಟಾ:  ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಅವಧಿಯಲ್ಲಿ ಸಾಕಷ್ಟು ಅಭವೃದ್ಧಿ ಕೆಲಸಗಳಾಗಿವೆ. ಆದರೆ, ಸುಮಾರು ₹ 43 ಕೋಟಿ ಮೊತ್ತದ ಒಳಚರಂಡಿ ನಿರ್ಮಾಣ ಕಾಮಗಾರಿಯು ಅಸಮರ್ಪಕವಾಗಿರುವುದು ಪಟ್ಟಣವಾಸಿಗಳ ಬೇಸರಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದ ಚೆನ್ನಮ್ಮ ಉದ್ಯಾನದಲ್ಲಿ ಕಳೆದ ವರ್ಷ ಸುಮಾರು ₹ 82 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪುರಭವನ ಈಗ ಸಾರ್ವಜನಿಕರ ಉಪಯೋಗಕ್ಕೆ ಬಳಕೆಯಾಗುತ್ತಿದೆ. 10 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಕಾಮಗಾರಿಗೆ ಹಿಂದಿನ ಶಾಸಕಿ ಶಾರದಾ ಶೆಟ್ಟಿ ಮರುಚಾಲನೆ ನೀಡಿದ್ದರು. ಇದೇ ಉದ್ಯಾನವನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ ಈಗ ಚಾಲನೆಯಲ್ಲಿದೆ. ಇದಕ್ಕೆ ಸ್ಥಳೀಯ ಪುರಸಭೆ ₹ 17 ಲಕ್ಷ ನೀಡಿದೆ. ಅಂದಿನ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆಯೂ ಆಗಿದ್ದ ಶಾರದಾ ಶೆಟ್ಟಿ, ಪ್ರಾಧಿಕಾರದಿಂದ ₹ 30 ಲಕ್ಷ ನೀಡಿದ್ದಾರೆ.

‘ಹಲವಾರು ವರ್ಷಗಳಿಂದ ಬಾಡಿಗೆ ನವೀಕರಣ ಮಾಡದ ವ್ಯಾಪಾರಿಗಳಿಂದ ಪುರಸಭೆ ಅಂಗಡಿ ಮಳಿಗೆಗಳನ್ನು ವಶಕ್ಕೆ ಪಡೆದು ಹೊಸ ಬಾಡಿಗೆ ಆಧಾರದ ಮೇಲೆ ನೀಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗದ 25 ಅರ್ಹ ಫಲಾನುಭವಿಗಳಿಗೆ ಚಿತ್ರಿಗಿ ಬಳಿ ಪುರಸಭೆ ಜಾಗದಲ್ಲಿ ₹ 1.35 ಕೋಟಿ ವೆಚ್ಚದಲ್ಲಿ 18 ಮನೆಗಳ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ₹ 80 ಲಕ್ಷ ವೆಚ್ಚದಲ್ಲಿ ಮೀನು ಮಾರುಕಟ್ಟೆ ನವೀಕರಣ ಆರಂಭವಾಗಿರುವುದು ಪುರಸಭೆಯ ಮಹತ್ವದ ಕೆಲಸ’ ಎನ್ನುತ್ತಾರೆ ಅಧ್ಯಕ್ಷ ಮಧುಸೂದನ್ ಶೇಟ್.

ಪಟ್ಟಣದ ರಸ್ತೆ ವಿಸ್ತರಣೆಗೆ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಮೌನೀಶ್ ಮೌದ್ಗೀಲ್ ಚಾಲನೆ ನೀಡಿದ್ದರು. ಅದರ ನಂತರ ಆ ಕಾರ್ಯವನ್ನು ಯಾರೂ ಮುಂದುರಿಸಿಲ್ಲ. ಜನನಿಬಿಡ ಕೋರ್ಟ್ ರಸ್ತೆ ಸೇರಿದಂತೆ ಪಟ್ಟಣದ ಕೆಲವು ಕಿರಿದಾದ ರಸ್ತೆಗಳಲ್ಲಿ ನಿತ್ಯ ಹತ್ತಾರು ಬಾರಿ ಸಂಚಾರ ದಟ್ಟಣೆ ಉಂಟಾಗಿ ಜನರು ಪರದಾಡುವಂತಾಗುತ್ತದೆ. ಈ ಸಮಸ್ಯೆಗೆ ಪುರಸಭೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ ಎಂಬುದು ನಾಗರಿಕರ ದೂರು.

‘ಪಟ್ಟಣದ ರಸ್ತೆ ವಿಸ್ತರಣೆ ಕಾರ್ಯವು ಸರ್ಕಾರ ಹಾಗೂ ಜಿಲ್ಲಾಧಿಕಾರಿ ನಿರ್ಧಾರಕ್ಕೆ ಬಿಟ್ಟದ್ದು. ಸರ್ಕಾರ ಆದೇಶ ಮಾಡಿದರೆ ಪುರಸಭೆ ಅದನ್ನು ಅನುಷ್ಠಾನ ಮಾಡುತ್ತದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಸುರೇಶ ಹೇಳಿದರು.

ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಈ ಪುರಸಭೆಯು ಈ ಬಾರಿ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದೆ. ಪ್ರಸ್ತುತ ಆಡಳಿತವು ಕಾಂಗ್ರೆಸ್ ಹಿಡಿತದಲ್ಲಿದೆ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ದಿನಕರ ಶೆಟ್ಟಿ ಹಿಂದೆಂದಿಗಿಂತಲೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಅವರ ಪ್ರಭಾವ ಪುರಸಭೆಯ ವ್ಯಾಪ್ತಿಯಲ್ಲಿ ಇರುತ್ತದೆಯೇ ಕಾಂಗ್ರೆಸ್ ಮುಖಂಡರಾದ ಶಾರದಾ ಶೆಟ್ಟಿ ತಮ್ಮ ಪ್ರಾಬಲ್ಯ ಮುಂದುವರಿಸುತ್ತಾರೆಯೇ ಎಂಬುದು ಸದ್ಯ ಪಟ್ಟಣದಲ್ಲಿ ಚರ್ಚೆಯಾಗುತ್ತಿರುವ ವಿಚಾರವಾಗಿದೆ.

ಮುಗಿಯದ ಒಳಚರಂಡಿ ಕಾಮಗಾರಿ: ಅಸಮರ್ಪಕ ರಸ್ತೆ, ಚರಂಡಿಯಿಂದಾಗಿ ಸಾರ್ವಜನಿಕರು ಬೇಸತ್ತಿದ್ದಾರೆ. ‘ಕುಮಟಾಕ್ಕೆ ಒಳಚರಂಡಿ ವ್ಯವಸ್ಥೆಯೇ ಬೇಡವಾಗಿತ್ತು. ಈ ಕಾಮಗಾರಿ ಆರಂಭವಾಗದಿದ್ದರೆ ಪಟ್ಟಣದ ಎಲ್ಲ ರಸ್ತೆ ಚೆನ್ನಾಗಿರುತ್ತಿದ್ದವು. ಒಳಚರಂಡಿ ಚೇಂಬರ್ ನಿರ್ಮಿಸಿದ ರಸ್ತೆ ಮಧ್ಯೆಭಾಗದಲ್ಲಿ ದುರಸ್ತಿ ಮಾಡಿದ ನಂತರವೂ ದೊಡ್ಡ ಅಪಾಯಕಾರಿ ಗುಂಡಿಗಳು ಹಾಗೇ ಉಳಿದಿವೆ’ ಎನ್ನುತ್ತಾರೆ ಸ್ಥಳೀಯ ಕಿರಣ ಕಾಮತ್.

ಅಘನಾಶಿನಿಗೆ ಒಡ್ಡು ನಿರ್ಮಾಣ: ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಅಘನಾಶಿನಿ ನದಿಯಲ್ಲಿ ಎರಡು ವರ್ಷಗಳ ಹಿಂದೆ ಬೇಸಿಗೆಯಲ್ಲಿ ನೀರಿನ ಕೊರತೆಯಾಯಿತು. ಆಗ ₹ 20 ಲಕ್ಷ ವೆಚ್ಚದಲ್ಲಿ ನದಿಗೆ ಒಂದು ಮಿನಿ ಒಡ್ಡು ನಿರ್ಮಿಸಲಾಯಿತು. ಇದರಲ್ಲಿ ಸಂಗ್ರಹವಾದ ನೀರನ್ನು ಪಟ್ಟಣಕ್ಕೆ ಪೂರೈಕೆ ಮಾಡಿರುವುದು ಮಹತ್ವದ ಕೆಲಸಗಳಲ್ಲಿ ಒಂದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !