ಮಂಗಳವಾರ, ಅಕ್ಟೋಬರ್ 26, 2021
23 °C
ಸ್ಪಂದಿಸದಿದ್ದರೆ ಧರಣಿ ಹಮ್ಮಿಕೊಳ್ಳುವ ಎಚ್ಚರಿಕೆ

ಕಾರವಾರ: ನಾಲ್ಕು ತಿಂಗಳ ವೇತನ ಬಾಕಿ; ಡಯಾಲಿಸಿಸ್ ಸಿಬ್ಬಂದಿ ಅತಂತ್ರ ಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಾಲ್ಕು ತಿಂಗಳ ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಿ ಆಸ್ಪತ್ರೆಗಳ ಡಯಾಸಿಸ್ ಸಿಬ್ಬಂದಿ ಆರೋಗ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. 15 ದಿನಗಳ ಒಳಗಾಗಿ ಸ್ಪಂದಿಸದಿದ್ದರೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.  

ಜಿಲ್ಲೆಯ ಎಲ್ಲ ಒಂಬತ್ತು ಡಯಾಲಿಸಿಸ್ ಕೇಂದ್ರಗಳ 50ಕ್ಕೂ ಅಧಿಕ ಸಿಬ್ಬಂದಿ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಸೇರಿ ಸರ್ಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಡಯಾಲಿಸಿಸ್ ಕೇಂದ್ರವೊಂದರ ಸಿಬ್ಬಂದಿ ರಶ್ಮಿ ಅರ್ಗೇಕರ್ ಮಾತನಾಡಿ, ‘ಬಿ.ಆರ್.ಎಸ್ ಆರೋಗ್ಯ ಸಂಸ್ಥೆಯು ನಮ್ಮನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದೆ. ಆದರೆ, ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಕಾರಣ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ವೇತನವಾಗಿಲ್ಲ. ಒಂದು ವರ್ಷದ ಭವಿಷ್ಯ ನಿಧಿ ಪಾವತಿಯಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.   

‘ತಿಂಗಳಿಗೆ ₹ 17 ಸಾವಿರ ವೇತನ ನಿಗದಿ ಮಾಡಿದ್ದು, ಜಿ.ಎಸ್.ಟಿ ಶೇ 18 ಮತ್ತು ಶೇ 1ರಷ್ಟು ಸೇವಾ ಶುಲ್ಕವೆಂದು ಕಡಿತ ಮಾಡುತ್ತಿದ್ದಾರೆ. ಕೊನೆಗೆ ನಮಗೆ ಸಿಗುವುದು ಕೇವಲ ₹ 10 ಸಾವಿರದ ಆಸುಪಾಸು. ಇಷ್ಟು ಕಡಿಮೆ ಮೊತ್ತದಲ್ಲಿ ಜೀವನ ಹೇಗೆ ನಡೆಸಬೇಕು’ ಎಂದು ಪ್ರಶ್ನಿಸಿದರು.

ಮತ್ತೊಬ್ಬ ಸಿಬ್ಬಂದಿ ಮಾತನಾಡಿ, ‘ರಾಜ್ಯದ 23 ಆಸ್ಪತ್ರೆಗಳಲ್ಲಿ 122 ಘಟಕಗಳಿಗೆ ಬಿ.ಆರ್.ಎಸ್ ಸಂಸ್ಥೆಯಿಂದ ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ವೇತನ ಪಾವತಿಯಾಗಿದೆ. ಆದರೆ, ಇಲ್ಲಿ ಸರ್ಕಾರ ಮತ್ತು ಏಜೆನ್ಸಿಯ ನಡುವಿನ ಗೊಂದಲದಿಂದಾಗಿ ಸಿಬ್ಬಂದಿ ಒದ್ದಾಡುವಂತಾಗಿದೆ’ ಎಂದರು.

‘ನಾವು ಕೋವಿಡ್ ಸಂದರ್ಭದಲ್ಲೂ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿ ನಮ್ಮನ್ನು ಕೆಲಸಕ್ಕೆ ಕರೆಸಿಕೊಂಡಿದ್ದರು. ಒಂದಕ್ಕೆ ಎರಡರಷ್ಟು ಪ್ರಯಾಣ ದರ ಪಾವತಿಸಿದ್ದೇವೆ. ಆದರೂ ಡಯಾಲಿಸಿಸ್ ಕೇಂದ್ರಗಳ ಕಾರ್ಯ ಸ್ಥಗಿತವಾಗದಂತೆ ನೋಡಿಕೊಂಡಿದ್ದೇವೆ. ಆದರೆ, ಇಂದು ಅನಿವಾರ್ಯವಾಗಿ ಕೆಲಸ ಬಿಟ್ಟು ಬೇಡಿಕೆ ಮಂಡಿಸಲು ಬಂದಿದ್ದೇವೆ. ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಲೇಬೇಕು’ ಎಂದು ಆಗ್ರಹಿಸಿದರು.

‘ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿರುವ ಒಟ್ಟು ಎಂಟು ಡಯಾಲಿಸಿಸ್ ಯಂತ್ರಗಳ ಪೈಕಿ ಐದು ಕಾರ್ಯ ನಿರ್ವಹಿಸುತ್ತಿವೆ. ಮೂರು ದುರಸ್ತಿಯಲ್ಲಿವೆ. ತಿಂಗಳಿಗೆ ಸರಾಸರಿ 700 ಡಯಾಲಿಸಿಸ್ ಮಾಡಲಾಗುತ್ತದೆ. ಉಳಿದಂತೆ, ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ನಾಲ್ಕು ಯಂತ್ರಗಳಿರುವಲ್ಲಿ 300ರಿಂದ 400 ಹಾಗೂ ಎರಡು ಯಂತ್ರಗಳಿರುವಲ್ಲಿ ಸುಮಾರು 200 ಡಯಾಲಿಸಿಸ್ ಮಾಡಲಾಗುತ್ತಿದೆ. ಇಷ್ಟೆಲ್ಲ ಕೆಲಸ ಮಾಡಿದರೂ ನ್ಯಾಯಬದ್ಧವಾಗಿ ವೇತನ ಕೊಡುತ್ತಿಲ್ಲ’ ಎಂದು ದೂರಿದರು.

ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವ ಅಮದಳ್ಳಿಯ ಸುನೀಲ್ ವಾಸುದೇವ ಕಂತ್ರಿಕರ್ ಹಾಗೂ ಅಂಕೋಲಾದ ಗಣೇಶ ಹೆಗಡೆ ಅವರೂ ಹಾಜರಿದ್ದು ಸಿಬ್ಬಂದಿಯ ಬೇಡಿಕೆಗೆ ಧ್ವನಿಗೂಡಿಸಿದರು.

ಡಯಾಲಿಸಿಸ್ ಘಟಕಗಳ ಸಿಬ್ಬಂದಿ ಯಶೋದಾ, ಸೆಲ್ವಿನೆಸ್, ರೋಲಿನಿ.ಡಿ ಇದ್ದರು. 

ಪ್ರಮುಖ ಬೇಡಿಕೆಗಳು
‌* ವೇತನ, ಪಿ.ಎಫ್ ಹಾಗೂ ಇ.ಎಸ್.ಐ ಹಣವನ್ನು ಬಿಡುಗಡೆ ಮಾಡಬೇಕು
* ಬಿ.ಆರ್.ಎಸ್ ಒಪ್ಪಂದದ ಬಗ್ಗೆ ಸಂಪೂರ್ಣ ಮಾಹಿತಿ
* ಬಿ.ಆರ್.ಎಸ್ ಒಪ್ಪಂದ ರದ್ದಾದರೆ ಎನ್.ಎಚ್.ಎಂ ಅಡಿಯಲ್ಲಿ ನೇಮಕ ಪತ್ರ ನೀಡುವುದು
* ಬೇರೆ ಏಜೆನ್ಸಿಗೆ ವಹಿಸುವುದಾದರೆ ಹಾಲಿ ಸಿಬ್ಬಂದಿ ಮುಂದುವರಿಸಬೇಕು
* ಎನ್.ಎಚ್.ಎಂ/ ಎ.ಆರ್.ಎಸ್‌.ನಿಂದ ಉದ್ಯೋಗ ಪತ್ರ
* ಸಿಬ್ಬಂದಿಗೆ ಸಮಾನ ವೇತನ ಪಾವತಿ

***
ಸರ್ಕಾರವು ಡಯಾಲಿಸಿಸ್ ಸಿಬ್ಬಂದಿಗೆ ಕೂಡಲೇ ವೇತನ ‍ಪಾವತಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು.
- ಮಾಧವ ನಾಯಕ, ಜನಶಕ್ತಿ ವೇದಿಕೆ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು