ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಕೃಷಿ ವಿಸ್ತರಣೆಯಿಂದ ಸಹಕಾರಕ್ಕೆ ಬಲ

ಮುಂಡಗನಮನೆ ಸೊಸೈಟಿ ವಜ್ರ ಮಹೋತ್ಸವದಲ್ಲಿ ಸ್ವರ್ಣವಲ್ಲಿ ಸ್ವಾಮೀಜಿ ಅಭಿಮತ
Last Updated 15 ಫೆಬ್ರುವರಿ 2020, 14:37 IST
ಅಕ್ಷರ ಗಾತ್ರ

ಶಿರಸಿ: ಗ್ರಾಮೀಣ ಭಾಗದಲ್ಲಿ ಕೃಷಿ, ತೋಟಗಾರಿಕಾ ಕ್ಷೇತ್ರ ವಿಸ್ತಾರಗೊಂಡರೆ ಸಹಕಾರ ಸಂಘಗಳು ಬಲಗೊಳ್ಳುತ್ತವೆ ಎಂದು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.

ತಾಲ್ಲೂಕಿನ ಮತ್ತಿಘಟ್ಟದ ಮುಂಡಗನಮನೆ ಗ್ರೂಪ್‌ ಗ್ರಾಮಗಳ ಸೇವಾ ಸಹಕಾರಿ ಸಂಘದ ವಜ್ರಮಹೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಪಟ್ಟಣದ ವ್ಯಾಮೋಹದಿಂದಾಗಿ ಗ್ರಾಮೀಣ ಸಹಕಾರ ಕ್ಷೇತ್ರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಯುವಜನರಲ್ಲಿ ಈ ಮಾನಸಿಕತೆ ಬದಲಾಗಬೇಕು. ಯುವಜನರು ಸಹಕಾರ ತತ್ವ ನೆಚ್ಚಿಕೊಂಡು ಈ ಕ್ಷೇತ್ರಕ್ಕೆ ಬರಬೇಕು ಎಂದರು.

ಇಂದು ಸಮಾಜದಲ್ಲಿ ಮನಃಶಾಂತಿ ಕೆಟ್ಟಿದೆ. ಮನುಷ್ಯ ಬಾಹ್ಯವಾಗಿ ಸುಖದಲ್ಲಿದ್ದಂತೆ ಕಂಡರೂ, ಆಂತರಿಕವಾಗಿ ಅಶಾಂತಿ ಹೊಂದಿದ್ದಾನೆ. ಆಡಂಬರದ ಜೀವನ ಕ್ರಮವೇ ಇದಕ್ಕೆ ಕಾರಣವಾಗಿದೆ. ದೇವರ ಧ್ಯಾನ, ಧರ್ಮಾಚರಣೆಯಿಂದ ಇಂತಹ ಸಮಸ್ಯೆಯಿಂದ ಹೊರಬರಬೇಕು ಎಂದು ಹೇಳಿದರು.

ಪರಸ್ಪರ ಸಹಕಾರವೇ ಸಹಕಾರಿ ತತ್ವದ ಮೂಲ ಧ್ಯೇಯ. ಸೌಲಭ್ಯದ ಕೊರತೆ, ಸಮಾಜದಲ್ಲಿ ಶೋಷಣೆ ಇದ್ದ ಕಾಲದಲ್ಲಿ ಜನರಿಗೆ ಬೆಂಬಲವಾಗಿ ನಿಂತ ಮುಂಡಗನಮನೆ ಸೊಸೈಟಿ, ವಿಶೇಷ ಸಾಧನೆ ಮಾಡಿದೆ ಎಂದು ಶ್ಲಾಘಿಸಿದರು.

ಸಹಕಾರ ಧುರೀಣ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಕುರಿತು ‘ಶಾಂತಪಥ’ ಅಭಿನಂದನಾ ಗ್ರಂಥವನ್ನು ಶಾಸಕ ಆರ್.ವಿ.ದೇಶಪಾಂಡೆ ಬಿಡುಗಡೆ ಮಾಡಿದರು. ಪರಿಸರ ಬರಹಗಾರ ಶಿವಾನಂದ ಕಳವೆ ಅಭಿನಂದನಾ ಮಾತನಾಡಿ, ‘ಮುಂಡಗನಮನೆ ಸೊಸೈಟಿಯ ಎತ್ತರಕ್ಕೆ ಬೆಳೆಯುವುದರ ಹಿಂದೆ ಶಾಂತಣ್ಣನ ಸಮರ್ಥ ನಾಯಕತ್ವದ ಪಾತ್ರವಿದೆ’ ಎಂದರು.

ಮುಂಡಗನಮನೆ ಸೊಸೈಟಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ, ಪ್ರಸ್ತುತ ಶಿರಸಿ ಟಿಎಸ್‌ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೆಹಳ್ಳಿ ದಂಪತಿಯನ್ನು ಸನ್ಮಾನಿಸಲಾಯಿತು. ಅಭಿನಂದನಾ ಗ್ರಂಥದ ಸಂಪಾದಕ ಜಿ.ಸುಬ್ರಾಯ ಭಟ್ಟ ಇದ್ದರು. ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿತ್ಯಾನಂದ ಭಟ್ಟ ಸನ್ಮಾನಪತ್ರ ವಾಚಿಸಿದರು. ಸಂಘದ ಕಾರ್ಯದರ್ಶಿ ನಾಗಪತಿ ಭಟ್ಟ ಸ್ವಾಗತಿಸಿದರು. ಶ್ರೀನಿವಾಸ ಭಾಗವತ ನಿರೂಪಿಸಿದರು.

ಧಾರ್ಮಿಕ, ಸಾಂಸ್ಕೃತಿಕ ಸಂಭ್ರಮ

ಸಂಘ ಹಾಗೂ ಗ್ರಾಹಕರ ಆರೋಗ್ಯ ವೃದ್ಧಿಗೆ ಮಂಜುಗುಣಿಯ ವೇದಮೂರ್ತಿ ಶ್ರೀನಿವಾಸ ಭಟ್ಟ ಮಾರ್ಗದರ್ಶನದಲ್ಲಿ ಧನ್ವಂತರಿ ಹವನ ನಡೆಯಿತು. ಸಂಗೀತ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಭಟ್ಟ ಖರ್ವಾ ಗಾಯನ ಪ್ರಸ್ತುತಪಡಿಸಿದರು. ಅಕ್ಷಯ ಭಟ್ಟ ತಬಲಾ ಹಾಗೂ ಅಜಯ ಹೆಗಡೆ ವರ್ಗಾಸರ ಸಂವಾದಿನಿಯಲ್ಲಿ ಸಾಥ್ ನೀಡಿದರು. ನಂತರ ಸಿದ್ಧಿ ಸಮುದಾಯದ ಕಲಾವಿದರಿಂದ ಸಂಗ್ಯಾ ಬಾಳ್ಯಾ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT