ಶುಕ್ರವಾರ, ಅಕ್ಟೋಬರ್ 18, 2019
28 °C

ರೈಲಿನ ಹವಾನಿಯಂತ್ರಿತ ಬೋಗಿಯಲ್ಲಿ ಆಭರಣ ಕಳವು

Published:
Updated:

ಕಾರವಾರ: ರೈಲಿನಲ್ಲಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಮಹಿಳೆಯ ಬಳಿಯಿದ್ದ ₹ 9 ಲಕ್ಷ ಮೌಲ್ಯದ ಆಭರಣ ಹಾಗೂ ಇತರ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಅವರು ಇಲ್ಲಿ ಗ್ರಾಮೀಣ ಪೊಲೀಸ್ ಠಾಣೆಗೆ ಗುರುವಾರ ಇ–ಮೇಲ್ ಮೂಲಕ ದೂರು ನೀಡಿದ್ದಾರೆ.

ಮಂಗಳೂರು ಸಮೀಪದ ಕಾರ್ನಾಡ್ ನಿವಾಸಿ ಶಮೀಲಾ ಶೆಟ್ಟಿ ದೂರು ನೀಡಿದವರು. ಅವರು ಅ.7ರಂದು ‘ಮತ್ಸ್ಯಗಂಧ ಎಕ್ಸ್‌ಪ್ರೆಸ್’ ರೈಲಿನ ಹವಾನಿಯಂತ್ರಿತ ಬೋಗಿಯಲ್ಲಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದರು. ತಮ್ಮ ಹ್ಯಾಂಡ್‌ ಬ್ಯಾಗ್‌ನಲ್ಲಿ ಚಿನ್ನಾಭರಣಗಳು, ಎಟಿಎಂ ಕಾರ್ಡ್, ಎರಡು ಮೊಬೈಲ್ ಫೋನ್‌ಗಳು ಹಾಗೂ ₹ 5 ಸಾವಿರ ನಗದು ಇತ್ತು. ಅದನ್ನು ಮಡಗಾಂನಿಂದ ಗೋಕರ್ಣ ಮಾರ್ಗ ಮಧ್ಯದಲ್ಲಿ ಕಳವು ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ತಮ್ಮ ಬೋಗಿಯಲ್ಲಿದ್ದ, ಮುರ್ಡೇಶ್ವರಕ್ಕೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಅದನ್ನು ಕದ್ದಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕಾರವಾರ ಗ್ರಾಮೀಣ ಠಾಣೆ ಪಿಎಸ್‌ಐ ಪದ್ಮಾ ಎಸ್.ದೇವಳಿ ತನಿಖೆ ಕೈಗೊಂಡಿದ್ದಾರೆ.

Post Comments (+)