ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿದ ದರ: ಬಂಕ್‍‍ಗಳ ಎದುರು ಬಸ್‍ ಸರತಿ

ಕಡಿಮೆ ದರಕ್ಕೆ ಡೀಸೆಲ್ ಪಡೆಯಲು ಖಾಸಗಿ ಬಂಕ್‍ಗಳ ಮೊರೆ
Last Updated 16 ಏಪ್ರಿಲ್ 2022, 7:01 IST
ಅಕ್ಷರ ಗಾತ್ರ

ಶಿರಸಿ: ಸಾರಿಗೆ ಘಟಕದಲ್ಲೇ ಡೀಸೆಲ್ ತುಂಬಿಸಿಕೊಂಡು ರಸ್ತೆಗೆ ಇಳಿಯುತ್ತಿದ್ದ ಸಾರಿಗೆ ಸಂಸ್ಥೆ ಬಸ್‍ಗಳಿಗೆ ಈಗ ಖಾಸಗಿ ಬಂಕ್‍ಗಳಿಗೆ ತೆರಳುವ ಅನಿವಾರ್ಯತೆ ಸೃಷ್ಟಿಯಾಗಿದೆ.

ನಗರದ ನೀಲೆಕಣಿಯಲ್ಲಿರುವ ಪೆಟ್ರೋಲ್ ಬಂಕ್‍ನಲ್ಲಿ ನಿತ್ಯ ನೂರಾರು ಸಂಖ್ಯೆಯ ಬಸ್‍ಗಳು ಇಂಧನ ತುಂಬಿಸಿಕೊಳ್ಳಲು ನಿಲುಗಡೆಯಾಗುತ್ತಿದೆ. ಖಾಸಗಿ ಬಂಕ್‍ಗಳತ್ತ ಬಸ್ ಓಡಾಟ ನಡೆಸುತ್ತಿರುವುದು ಸಾರ್ವಜನಿಕರಿಗೂ ಅಚ್ಚರಿ ತಂದಿದೆ.

ಸಾರಿಗೆ ಸಂಸ್ಥೆಗೆ ಇಂಧನ ಪೂರೈಸುತ್ತಿದ್ದ ಎಚ್.ಪಿ.ಸಿ.ಎಲ್. ಕಂಪನಿ ಸಗಟು ದರವನ್ನು ಏರಿಕೆ ಮಾಡಿದೆ. ತೈಲ ಕಂಪನಿಗಳಿಗೆ ನಷ್ಟ ಉಂಟಾಗುವುದನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರವೇ ಸಗಟು ದರ ಪರಿಷ್ಕರಿಸಿದ್ದರಿಂದ ಈ ದರ ಏರಿಕೆಯಾಗಿದೆ.

ಕಂಪನಿ ಸಾರಿಗೆ ಸಂಸ್ಥೆಗೆ ಪ್ರತಿ ಲೀ. ಡೀಸೆಲ್ ಪೂರೈಕೆಗೆ ₹107 ನಿಗದಿಪಡಿಸುತ್ತಿದೆ. ಖಾಸಗಿ ಬಂಕ್‍ಗಳಲ್ಲಿ ದರ ಸರಾಸರಿ ₹96–97 ಇದೆ. ಸಗಟು ಪ್ರಮಾಣದಲ್ಲಿ ಖರೀದಿಸುವ ಕಾರಣ ಸಾರಿಗೆ ಸಂಸ್ಥೆ ಖಾಸಗಿ ಬಂಕ್‍ಗಳಲ್ಲಿ ರಿಯಾಯಿತಿ ದರದಲ್ಲಿ ಇಂಧನ ಪಡೆದುಕೊಳ್ಳುತ್ತಿದೆ. ಹೀಗಾಗಿ ಬಸ್‍ಗಳು ಈ ಬಂಕ್‍ಗಳತ್ತ ತೆರಳುತ್ತಿವೆ.

‘ಶಿರಸಿ ವಿಭಾಗದಲ್ಲಿ 500ರಷ್ಟು ಬಸ್‍ಗಳು ಪ್ರತಿನಿತ್ಯ ಸಂಚರಿಸುತ್ತವೆ. ಸರಾಸರಿ 30 ಸಾವಿರ ಲೀ. ಡೀಸೆಲ್ ಅಗತ್ಯವಿದೆ. ಆಯಾ ಘಟಕ ವ್ಯಾಪ್ತಿಯಲ್ಲಿ ರಿಯಾಯಿತಿ ದರದಲ್ಲಿ ಇಂಧನ ಪೂರೈಸುವ ಬಂಕ್‍ಗಳಲ್ಲಿ ಮಾತ್ರ ಇಂಧನ ತುಂಬಿಸಿಕೊಳ್ಳಲು ನಿರ್ಧರಿಸಲಾಗಿದೆ. ಪ್ರತಿ ಲೀ.ಗೆ ಸಂಸ್ಥೆಗೆ ₹11 ಉಳಿತಾಯವಾಗುತ್ತಿದೆ’ ಎಂದು ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಎಂ.ರಾಜಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ಬಂಕ್‍ನಲ್ಲಿ ಸಂಸ್ಥೆಯ ಸಿಬ್ಬಂದಿ ನಿಯೋಜಿಸಿದ್ದೇವೆ. ಪ್ರತಿ ಬಸ್ ತುಂಬಿಸಿಕೊಳ್ಳುವ ಇಂಧನವನ್ನು ಅವರು ದಾಖಲಿಸಿಕೊಳ್ಳುತ್ತಾರೆ. ಮಾರನೆ ದಿನ ಬಂಕ್‍ನವರಿಗೆ ಹಿಂದಿನ ದಿನ ಖರೀದಿಸಿದ ಇಂಧನಕ್ಕೆ ಮೊತ್ತ ಪಾವತಿಸುತ್ತಿದ್ದೇವೆ’ ಎಂದು ತಿಳಿಸಿದರು.

*
ಇಂಧನ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಖಾಸಗಿ ಬಂಕ್‍ಗಳಲ್ಲಿ ಡೀಸೆಲ್ ಖರೀದಿ ಅನಿವಾರ್ಯವಾಗಿದೆ.
ಎಂ.ರಾಜಕುಮಾರ್, ಸಾರಿಗೆ ಸಂಸ್ಥೆ ಶಿರಸಿ ವಿಭಾಗೀಯ ನಿಯಂತ್ರಣಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT