ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಯಿಡಾ: ಸರ್ವ ಋತು ರಸ್ತೆಗಾಗಿ ಕಾದಿದೆ ‘ಡಿಗ್ಗಿ’

Last Updated 19 ಜುಲೈ 2022, 19:30 IST
ಅಕ್ಷರ ಗಾತ್ರ

ಜೊಯಿಡಾ: ರಾಜ್ಯದ ಪ್ರಮುಖ ನದಿಗಳಲ್ಲಿ ಒಂದಾದ ಕಾಳಿ ನದಿಯ ಉಗಮ ಸ್ಥಾನವಾಗಿರುವ ಡಿಗ್ಗಿ ಗ್ರಾಮ ಹಲವು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಆದರೆ, ಸರ್ವ ಋತು ರಸ್ತೆ ಬೇಕು ಎಂಬುದು ಇಲ್ಲಿನ ಜನರ ಸದ್ಯದ ಕೂಗು.

ತಾಲ್ಲೂಕಿನ ಹಿಂದುಳಿದ ಗ್ರಾಮ ಪಂಚಾಯ್ತಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಬಜಾರಕುಣಂಗ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಡಿಗ್ಗಿ ಗ್ರಾಮದಲ್ಲಿ ಬೊಂಡೇಲಿ, ಕಣ್ಣೇ, ಮಾಯರೇ ಹಾಗೂ ಡಿಗ್ಗಿ ಹಳ್ಳಿಗಳು ಬರುತ್ತವೆ. ಈ ಗ್ರಾಮದಲ್ಲಿ ಸುಮಾರು 1540 ಜನಸಂಖ್ಯೆ ಇದ್ದು, ಒಂದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎರಡು ಕಿರಿಯ ಪ್ರಾಥಮಿಕ ಶಾಲೆಗಳಿವೆ. ಪಂಡಿತ್ ದೀನದಯಾಳ್ ಉಪಾಧ್ಯಾಯ ಯೋಜನೆಯಡಿ 2017ರಲ್ಲಿ ಈ ಗ್ರಾಮಕ್ಕೆ ನೆಲದಲ್ಲಿ ಕೇಬಲ್ ಹಾಕುವ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಮಳೆಗಾಲದ ದಿನಗಳಲ್ಲಿ ಇಲ್ಲಿನ ಜನರು ವಿದ್ಯುತ್ ಬೆಳಕು ಕಾಣುವುದೇ ಅಪರೂಪ. ಇಲ್ಲಿ ತಿಂಗಳುಗಟ್ಟಲೆ ವಿದ್ಯುತ್ ಪೂರೈಕೆ ಇರುವುದೇ ಇಲ್ಲ.

ಇಲ್ಲಿ ಸುಸಜ್ಜಿತವಾದ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದು, ಒಬ್ಬರು ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳೊಂದಿಗೆ ಸ್ಕೊಡವೆಸ್ ಸಂಸ್ಥೆ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದೆ.

ತಾಲ್ಲೂಕು ಕೇಂದ್ರದಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಡಿಗ್ಗಿ ಗ್ರಾಮಕ್ಕೆ ಉಳವಿ- ಗೋವಾ ಗಡಿ ರಾಜ್ಯ ಹೆದ್ದಾರಿ 163 ಸಂಪರ್ಕ ಕಲ್ಪಿಸುತ್ತದೆ. ಈ ಹೆದ್ದಾರಿ ನಿರ್ವಹಣೆ ಮಾಡದೇ ಇರುವುದರಿಂದ ಇಲ್ಲಿನ ಜನರು ದಿನನಿತ್ಯದ ಸಂಚಾರಕ್ಕೆ ಪರದಾಡುತ್ತಿದ್ದಾರೆ.

ಲೋಕೋಪಯೋಗಿ ಇಲಾಖೆ ಪ್ರತಿ ವರ್ಷ ದುರಸ್ತಿಗಾಗಿ ಇಂತಿಷ್ಟು ಹಣವನ್ನು ರಸ್ತೆಗಾಗಿ ಖರ್ಚು ಮಾಡುತ್ತದೆ. ಆದರೆ ಸ್ಥಳೀಯ ಗುತ್ತಿಗೆದಾರರೇ ಪೈಪೋಟಿಯಿಂದ ಗುತ್ತಿಗೆ ಪಡೆದು ಇಲಾಖೆಯ ಅಧಿಕಾರಿಗಳೊಂದಿಗೆ ಸೇರಿ ಕಾಟಾಚಾರಕ್ಕೆ ಕೆಲಸ ಮಾಡುತ್ತಾರೆ ಎಂಬುದು ಇಲ್ಲಿನ ಜನರ ಪ್ರಬಲ ಆರೋಪವಾಗಿದೆ.

ಸಮರ್ಪಕವಾದ ರಸ್ತೆ ಇಲ್ಲದೆ ಶಾಲೆಗಾಗಿ, ಮಾರುಕಟ್ಟೆ, ಕಚೇರಿ ಕಾರ್ಯಗಳಿಗೆ, ಪಡಿತರಕ್ಕಾಗಿ, ದಿನಾಲೂ ಪರದಾಡುವಂತಾಗಿದೆ. ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೂ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ, ಆಡಳಿತ ನಮಗೆ ರಸ್ತೆ ವ್ಯವಸ್ಥೆ ಮಾಡಿಸಿಕೊಟ್ಟರೆ ಸಾಕು ಮತ್ತೇನೂ ಬೇಡ ಎನ್ನುತ್ತಾರೆ ಇಲ್ಲಿನ ಯುವಕರಾದ ಪ್ರದೀಪ್ ವೇಳಿಪ, ಮಹಾದೇವ ಮೀರಾಶಿ, ದೆವೇಂದ್ರ ಮೀರಾಶಿ ಹಾಗೂ ಸತೀಶ್ ಗಾವಡಾ.

ರಸ್ತೆ ನಿರ್ವಹಣೆ ಕುರಿತು ಪ್ರತಿಕ್ರಿಯೆ ಪಡೆಯಲು ಜೊಯಿಡಾ ಲೋಕೋಪಯೋಗಿ ಇಲಾಖೆಯ ಎ.ಇ.ಇ ವಿಜಯಕುಮಾರ್‌ಗೆ ಕರೆ ಮಾಡಿದರೂ ಅವರು ಕರೆಗೆ ಪ್ರತಿಕ್ರಿಯೆ ನೀಡಲಿಲ್ಲ.

ಡಾಂಬರು ಕಾಣದೆ 12 ವರ್ಷ!:ಕಿರವತ್ತಿಯಿಂದ ಕಾಳಪೆಯವರೆಗೆ ಸುಮಾರು 12 ವರ್ಷಗಳ ಹಿಂದೆ ಈ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಸದ್ಯ ಕಾರ್ಟಳಿಯಿಂದ ಈ ರಸ್ತೆ ಡಾಂಬರು ರಸ್ತೆ ಅಥವಾ ಕಚ್ಚಾ ರಸ್ತೆ ಎಂದು ಗುರುತಿಸುವುದೂ ಕಷ್ಟವಾಗಿದೆ. ಕಾಳಪೆಯ ಮುಂದೆ ಸಂಪೂರ್ಣ ಕಚ್ಚಾ ರಸ್ತೆ ಇದ್ದು, ಮಳೆಯಿಂದ ಹಾಗೂ ನಿರ್ವಹಣೆ ಇಲ್ಲದೆ ಹೊಂಡ ಗುಂಡಿಗಳಿಂದಲೇ ತುಂಬಿದೆ. ಬಹುತೇಕ ಕಡೆ ರಸ್ತೆಯ ಮೇಲೆ ಮಣ್ಣು ಕುಸಿದಿದೆ. ಈ ಮಾರ್ಗದಲ್ಲಿ ಸುಮಾರು ಆರು ಕಡೆಗಳಲ್ಲಿ ಹಳ್ಳಗಳಿವೆ. ಬೇಸಿಗೆಯಲ್ಲಿ ವಾಹನ ಸಂಚರಿಸುವ ರಸ್ತೆ ಮಳೆಗಾಲದಲ್ಲಿ ಹಳ್ಳವಾಗಿ ಬದಲಾಗುತ್ತದೆ. ಇಲ್ಲಿ ಸೇತುವೆ ನಿರ್ಮಿಸದ ಕಾರಣ ಸಹಜವಾಗಿಯೇ ಸಾರ್ವಜನಿಕರು ತಾವೇ ನಿರ್ಮಿಸಿರುವ ಕಾಲುಸಂಕದ ಮೂಲಕ ಪ್ರಯಾಣ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT